ಐಪಿಎಲ್‌ನಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೋತ ನಂತರ, ತಂಡದ ಪ್ಲೇಆಫ್ ಕನಸು ಬಹುತೇಕ ಮುಗಿದಿದೆ. ಈ ಸೋಲಿನ ಬಗ್ಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ಸಿಎಸ್‌ಕೆ ಮ್ಯಾನೇಜ್‌ಮೆಂಟ್ 14 ಕೋಟಿ ಕೊಟ್ಟು ಖರೀದಿಸಿದ ಪ್ರಶಾಂತ್ ವೀರ್‌ಗೆ ಪದೇ ಪದೇ ಅವಕಾಶ ನೀಡುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತು ತಂತ್ರಗಾರಿಕೆಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳಿಂದ ಸೋತಿದೆ. ಈ ಸೋಲಿನಿಂದಾಗಿ ತಂಡದ ಪ್ಲೇಆಫ್ ಕನಸು ಬಹುತೇಕ ನುಚ್ಚುನೂರಾಗಿದೆ. ಇದರ ಬೆನ್ನಲ್ಲೇ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು, 14 ಕೋಟಿ ಕೊಟ್ಟು ಖರೀದಿಸಿದ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್‌ಗೆ ಪದೇ ಪದೇ ಅವಕಾಶ ನೀಡುವುದನ್ನು ಕಟುವಾಗಿ ಟೀಕಿಸಿದ್ದಾರೆ.

14 ಕೋಟಿ ವೀರ ಐಪಿಎಲ್‌ನಲ್ಲಿ ಝೀರೋ

ಈ ವರ್ಷದ ಹರಾಜಿನಲ್ಲಿ ಚೆನ್ನೈ ತಂಡವು ಅನ್‌ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್‌ನನ್ನು 14 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ ಈ ಸೀಸನ್‌ನಲ್ಲಿ ಆಡಿದ ಐದು ಇನ್ನಿಂಗ್ಸ್‌ಗಳಲ್ಲೂ ಪ್ರಶಾಂತ್ ವೀರ್ ಅವರ ಸ್ಟ್ರೈಕ್ ರೇಟ್ 135ಕ್ಕಿಂತ ಕಡಿಮೆ ಇದೆ. ಹೈದರಾಬಾದ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಅವರು 9 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರು.

"ಚೆನ್ನೈ ಈ ಪಂದ್ಯದಲ್ಲಿ 200 ರನ್ ಗಳಿಸಿದ್ದರೆ ಖಂಡಿತಾ ಗೆಲ್ಲುತ್ತಿತ್ತು. ಬೇರೆ ತಂಡಗಳೆಲ್ಲಾ ಸುಲಭವಾಗಿ 200 ಪ್ಲಸ್ ಸ್ಕೋರ್ ಮಾಡುತ್ತಿದ್ದರೆ, ಚೆನ್ನೈ ಈ ಸೀಸನ್‌ನಲ್ಲಿ ಕೇವಲ ನಾಲ್ಕೈದು ಬಾರಿ ಮಾತ್ರ 200ರ ಗಡಿ ದಾಟಿದೆ. ಡೆವಾಲ್ಡ್ ಬ್ರೆವಿಸ್ ಕೊನೆಗೂ ಒಂದು ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ ಅವರ ನಂತರ ಬಂದಿದ್ದು ಪ್ರಶಾಂತ್ ವೀರ್. ಚೆನ್ನೈ ಮ್ಯಾನೇಜ್‌ಮೆಂಟ್ ಯಾಕೆ ಅವನನ್ನು ಅಷ್ಟೊಂದು ನಂಬುತ್ತಿದೆ, ಯಾಕೆ ಪದೇ ಪದೇ ಆಡಿಸುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ," ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ತಂಡದ ಇತರ ಪ್ರಮುಖ ಆಟಗಾರರನ್ನೂ ಶ್ರೀಕಾಂತ್ ಟೀಕಿಸಿದ್ದಾರೆ. "ಶಿವಂ ದುಬೆ ಕೇವಲ ಸ್ಪಿನ್ನರ್‌ಗಳ ವಿರುದ್ಧ ಮಾತ್ರ ದೊಡ್ಡ ಹೊಡೆತಗಳನ್ನು ಆಡುತ್ತಾರೆ. ಮೀಡಿಯಂ ಪೇಸರ್‌ಗಳು ಶಾರ್ಟ್ ಬಾಲ್‌ಗಳನ್ನು ಹಾಕಿ ದುಬೆಯನ್ನು ಸುಲಭವಾಗಿ ಕಟ್ಟಿಹಾಕುತ್ತಿದ್ದಾರೆ. ಗಾಯದ ನೆಪ ಹೇಳಿ ಹೊರಗುಳಿಯುವ ಬದಲು, ಪ್ರಶಾಂತ್ ವೀರ್ ಬದಲಿಗೆ ಎಂ.ಎಸ್. ಧೋನಿ ಈ ಪಂದ್ಯದಲ್ಲಿ ಆಡಬಹುದಿತ್ತು," ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.

ಸಿಎಸ್‌ಕೆ ಬ್ಯಾಟಿಂಗ್ ವೈಫಲ್ಯ ಟೀಕಿಸಿದ ಶ್ರೀಕಾಂತ್

ಹೈದರಾಬಾದ್ ವಿರುದ್ಧ ಒಂದು ಹಂತದಲ್ಲಿ 16 ಓವರ್‌ಗಳಲ್ಲಿ 144/4 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ, ಲೋವರ್ ಮಿಡಲ್ ಆರ್ಡರ್ ವೈಫಲ್ಯದಿಂದಾಗಿ ಕೊನೆಯ 4 ಓವರ್‌ಗಳಲ್ಲಿ ಕೇವಲ 36 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಚೆನ್ನೈ ಇನ್ನಿಂಗ್ಸ್ 180 ರನ್‌ಗಳಿಗೆ ಸೀಮಿತವಾಯಿತು. ಹೈದರಾಬಾದ್‌ನ ಯುವ ಎಡಗೈ ಸ್ಪಿನ್ನರ್ ಶಿವಂಗ್ ಕುಮಾರ್‌ಗೆ ಚೆನ್ನೈ ಬ್ಯಾಟಿಂಗ್ ಪಡೆ ಅನಗತ್ಯ ಗೌರವ ನೀಡಿತು ಎಂದು ಶ್ರೀಕಾಂತ್ ಆರೋಪಿಸಿದರು. 23 ವರ್ಷದ ಶಿವಂಗ್ 3 ಓವರ್‌ಗಳಲ್ಲಿ ಕೇವಲ 20 ರನ್ ನೀಡಿದರು.

"ಚೆನ್ನೈ ತಂಡ ಶಿವಂಗ್ ಕುಮಾರ್‌ಗೆ ಹೆಚ್ಚು ಹೆದರಿತು. ಅವನಿಗೆ ಎರಡು-ಮೂರು ಸಿಕ್ಸರ್‌ಗಳನ್ನು ಬಾರಿಸಬೇಕಿತ್ತು. ಆದರೆ ಅವರು ಅದಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ. ಬೌಲರ್‌ಗಳ ಮೇಲೆ ಒತ್ತಡ ಹೇರಲು ಚೆನ್ನೈ ಆಟಗಾರರಿಗೆ ಸಾಧ್ಯವಾಗುತ್ತಿಲ್ಲ," ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು. ಹೈದರಾಬಾದ್ ವಿರುದ್ಧದ ಸೋಲಿನೊಂದಿಗೆ, 13 ಪಂದ್ಯಗಳಿಂದ 6 ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈಗೆ ಭಾರೀ ಹಿನ್ನಡೆಯಾಗಿದೆ. ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈನ ಕೊನೆಯ ಲೀಗ್ ಪಂದ್ಯ ನಡೆಯಲಿದೆ.