ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್, ಐಪಿಎಲ್ ಮತ್ತು ಪಿಎಸ್‌ಎಲ್ ನಡುವಿನ ಹೋಲಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪಿಎಸ್‌ಎಲ್‌ನಲ್ಲಿ ಆಡುವ ವಿದೇಶಿ ಆಟಗಾರರು ಐಪಿಎಲ್‌ನಿಂದ ನಿವೃತ್ತರಾದವರು ಅಥವಾ ತಿರಸ್ಕೃತರಾದವರು ಎಂದು ಅವರು ಹೇಳಿದ್ದಾರೆ. 

ಕರಾಚಿ (ಏ.15): ಭಾರತದ ಐಪಿಎಲ್ ಮತ್ತು ಪಾಕಿಸ್ತಾನದ ಪಿಎಸ್‌ಎಲ್ ನಡುವೆ ಶ್ರೇಷ್ಠತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಖಡಕ್ ಉತ್ತರ ನೀಡಿದ್ದಾರೆ. ಪಿಎಸ್‌ಎಲ್ 2026ರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶೆಹಜಾದ್, ಪಾಕಿಸ್ತಾನಿ ಲೀಗ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಕೇವಲ ನಿವೃತ್ತರಾದವರು ಅಥವಾ ಐಪಿಎಲ್‌ನಲ್ಲಿ ಯಾರೂ ಖರೀದಿಸದ ಆಟಗಾರರು ಎಂಬ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಶ್ರೀಲಂಕಾದ ಕುಸಲ್ ಮೆಂಡಿಸ್ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸೊ ಅವರನ್ನು ಪಾಕಿಸ್ತಾನಿ ಪತ್ರಕರ್ತರು ಐಪಿಎಲ್ ಮತ್ತು ಪಿಎಸ್‌ಎಲ್ ಅನುಭವಗಳನ್ನು ಹೋಲಿಕೆ ಮಾಡುವಂತೆ ಕೇಳಿದ ಪ್ರಶ್ನೆಗೆ ಶೆಹಜಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಹ್ಮದ್ ಶೆಹಜಾದ್ ಹೇಳಿದ್ದೇನು?

"ಪಿಎಸ್‌ಎಲ್‌ನಲ್ಲಿ ಈಗ ಉಳಿದಿರುವುದು ಕೇವಲ ಐಪಿಎಲ್‌ನಿಂದ ನಿವೃತ್ತರಾದವರು ಅಥವಾ ಐಪಿಎಲ್ ಹರಾಜಿನಲ್ಲಿ ಯಾರೂ ಬೇಡವೆಂದ ಆಟಗಾರರು ಮಾತ್ರ. ಯಾರಿಗೆ ಐಪಿಎಲ್‌ನಲ್ಲಿ ಆಡುವ ಸಣ್ಣ ಅವಕಾಶವಿದ್ದರೂ ಅವರು ಐಪಿಎಲ್‌ನ್ನೇ ಆಯ್ಕೆ ಮಾಡುತ್ತಾರೆ (ಉದಾಹರಣೆಗೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್). ಇನ್ನು ಎಷ್ಟು ಆಟಗಾರರನ್ನು ನೀವು ನಿಷೇಧಿಸುತ್ತೀರಿ?" ಎಂದು ಪಿಸಿಬಿ ವಿರುದ್ಧ ಗುಡುಗಿದ್ದಾರೆ. ಐಪಿಎಲ್‌ನಲ್ಲಿ ಆಡಲು ಪಿಎಸ್‌ಎಲ್ ಒಪ್ಪಂದವನ್ನು ಅರ್ಧಕ್ಕೆ ಬಿಟ್ಟು ಹೋಗುವ ವಿದೇಶಿ ಆಟಗಾರರನ್ನು ನಿಷೇಧಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.

ಪತ್ರಕರ್ತರ ಪ್ರಶ್ನೆ ಮತ್ತು ಆಟಗಾರರ ಪ್ರತಿಕ್ರಿಯೆ

ಇತ್ತೀಚೆಗೆ ಪಿಎಸ್‌ಎಲ್‌ನಲ್ಲಿ ಆಡುತ್ತಿರುವ ಕುಸಲ್ ಮೆಂಡಿಸ್ ಬಳಿ ಪತ್ರಕರ್ತರು, "ಸರ್, ಕಳೆದ ಬಾರಿ ನೀವು ಐಪಿಎಲ್‌ಗೆ ಹೋಗಿದ್ದಿರಿ, ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಕೇಳಿದ್ದರು. ಈ ಪ್ರಶ್ನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೆಹಜಾದ್, "ನೋಡಿ, ಎಂತಹ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದಾರೆ," ಎಂದಿದ್ದಾರೆ.

ಇನ್ನು ರಿಲೀ ರೊಸೊ ಹೇಳಿಕೆಯನ್ನು ಟೀಕಿಸಿದ ಅವರು, "ರಿಲೀ ರೊಸೊ ಅವರ ಸಾಧನೆಯ ಬಗ್ಗೆ ಪಿಎಸ್‌ಎಲ್‌ನಲ್ಲಿ ಯಾವುದೇ ಸ್ಪಷ್ಟತೆಯಿಲ್ಲ, ಆದರೆ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಪಿಎಸ್‌ಎಲ್ ಆಡುತ್ತಿರುವಾಗ ಐಪಿಎಲ್ ಅನ್ನು ಹೊಗಳಲು ಸಾಧ್ಯವಿಲ್ಲ. ಹಾಗಾಗಿ ಅವರು ಐಪಿಎಲ್ ಅನ್ನು 'ಬಾಲಿವುಡ್ ಸಿನಿಮಾ' ಎಂದು ಕರೆದಿದ್ದಾರೆ ಮತ್ತು ಅಸಲಿ ಕ್ರಿಕೆಟ್ ನಡೆಯುತ್ತಿರುವುದು ಪಿಎಸ್‌ಎಲ್‌ನಲ್ಲಿ ಎಂದು ಹೇಳಿದ್ದಾರೆ. ಇದು ಕೇವಲ ಪ್ರಚಾರಕ್ಕಾಗಿ ನೀಡುವ ಹೇಳಿಕೆ," ಎಂದು ಶೆಹಜಾದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಲೇವಡಿ ಮಾಡಿದ್ದಾರೆ.

ಅಹ್ಮದ್ ಶೆಹಜಾದ್ ಅವರು ಪಿಎಸ್‌ಎಲ್ ಮತ್ತು ಐಪಿಎಲ್ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ ಮತ್ತು ಐಪಿಎಲ್ ಮುಂದೆ ಪಿಎಸ್‌ಎಲ್ ತೀರಾ ಸಣ್ಣ ಮಟ್ಟದ್ದು ಎಂಬ ಕಟು ವಾಸ್ತವವನ್ನು ತಮ್ಮದೇ ದೇಶದ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿದ್ದಾರೆ.

Scroll to load tweet…