ಗಾಯದ ಸಮಸ್ಯೆಯಿಂದಾಗಿ ಎಂ.ಎಸ್‌.ಧೋನಿ ಚೆಪಾಕ್‌ನ ಕೊನೆಯ ಲೀಗ್ ಪಂದ್ಯದಿಂದ ಹೊರಗುಳಿದಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇ ಆಫ್ ಹಾದಿ ಬಹುತೇಕ ಅಂತ್ಯಗೊಂಡಿದೆ.

ಚೆನ್ನೈ: ಹಿರಿಯ ಕ್ರಿಕೆಟಿಗ ಎಂ.ಎಸ್‌.ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳು ಮತ್ತೆ ನಿರಾಸೆ ಅನುಭವಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ತವರು ಕ್ರೀಡಾಂಗಣ ಚೆಪಾಕ್‌ನಲ್ಲಿ ಸೋಮವಾರ ನಡೆದ ಈ ಬಾರಿ ಐಪಿಎಲ್‌ನ ಕೊನೆ ಪಂದ್ಯದಲ್ಲೂ ಧೋನಿ ಆಡಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಯದ ಸಮಸ್ಯೆ ಎದುರಿಸುತ್ತಿರುವ 44 ವರ್ಷದ ಧೋನಿ ಈ ಐಪಿಎಲ್‌ನಲ್ಲಿ ಒಂದೂ ಪಂದ್ಯ ಕಣಕ್ಕಿಳಿದಿಲ್ಲ. ಇತ್ತೀಚೆಗೆ ಅವರು ಮತ್ತೆ ತಂಡವನ್ನು ಕೂಡಿಕೊಂಡಿದ್ದರಿಂದ ಸೋಮವಾರ ಸನ್‌ರೈಸರ್ಸ್‌ ವಿರುದ್ಧ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಈ ಪಂದ್ಯದ ಬಳಿಕ ಅವರು ನಿವೃತ್ತಿ ಘೋಷಿಸಲಿದ್ದಾರೆ ಎಂದು ಸುದ್ದಿ ಹರಿದಾಡಿದ್ದವು. ಆದರೆ ಧೋನಿ ಇನ್ನೂ ಫಿಟ್‌ ಆಗಿಲ್ಲ ಎಂದು ಟಾಸ್‌ ವೇಳೆ ಚೆನ್ನೈ ನಾಯಕ ಋತುರಾಜ್‌ ಗಾಯಕ್ವಾಡ್‌ ಹೇಳಿದರು. ಆದರೆ ಯಾವಾಗ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚೆನ್ನೈ ತಂಡ ಲೀಗ್‌ ಹಂತದ ತನ್ನ ಕೊನೆ ಪಂದ್ಯದಲ್ಲಿ ಮೇ 21ರಂದು ಅಹಮದಾಬಾದ್‌ನಲ್ಲಿ ಗುಜರಾತ್‌ ವಿರುದ್ಧ ಆಡಲಿದೆ.

ಪ್ಲೇ ಆಫ್‌ ರೇಸ್‌ನಿಂದ ಸಿಎಸ್‌ಕೆ ಬಹುತೇಕ ಔಟ್‌:

ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಆಘಾತಕಾರಿ ಸೋಲು ಕಾಣುತ್ತಿದ್ದಂತೆಯೇ ಋತುರಾಜ್ ಗಾಯಕ್ವಾಡ್ ಪಡೆಯ ಪ್ಲೇ ಆಫ್ ಹಾದಿ ಬಹುತೇಕ ನುಚ್ಚುನೂರಾಗಿದೆ. ಸಿಎಸ್‌ಕೆ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಭಾರೀ ಅಂತರದಲ್ಲಿ ಗೆದ್ದು, ಉಳಿದ ಫಲಿತಾಂಶಗಳು ಸಿಎಸ್‌ಕೆ ಪರವಾಗಿ ಬಂದರಷ್ಟೇ ಪ್ಲೇ ಆಫ್‌ಗೇರಲು ಸಾಧ್ಯವಾಗಲಿದೆ.

ಚೆಪಾಕ್‌ನಲ್ಲಿ ಬಿಗ್‌ಬ್ಯಾಶ್‌ ಟಿ20 ಲೀಗ್‌ನ ಉದ್ಘಾಟನಾ ಪಂದ್ಯ?

ಚೆನ್ನೈ: ಆಸ್ಟ್ರೇಲಿಯಾದ 16ನೇ ಆವೃತ್ತಿಯ ಬಿಗ್‌ಬ್ಯಾಶ್‌ ಟಿ20 ಲೀಗ್‌ನ ಉದ್ಘಾಟನಾ ಪಂದ್ಯಕ್ಕೆ ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಮೂಲಗಳು ತಿಳಿಸಿದ್ದಾಗಿ ವರದಿಯಾಗಿವೆ. ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಭಾರತದ ಬೃಹತ್ ಮಾರುಕಟ್ಟೆ ಬಳಸಿಕೊಳ್ಳಲು, ಆದಾಯ ಹೆಚ್ಚಳ ಮತ್ತು ಐಪಿಎಲ್ ಫ್ರಾಂಚೈಸಿಗಳಿಂದ ಸಂಭಾವ್ಯ ಹೂಡಿಕೆಯನ್ನು ಆಕರ್ಷಿಸಲು ಬಿಗ್‌ಬ್ಯಾಶ್‌ ಲೀಗ್‌ನ ಪಂದ್ಯವನ್ನು ಭಾರತವನ್ನೂ ನಡೆಸಲು ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ಈ ವರ್ಷ ಡಿಸೆಂಬರ್‌ನಲ್ಲಿ ಲೀಗ್‌ನ ಉದ್ಘಾಟನಾ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅಜಿಂಕ್ಯ ರಹಾನೆ, ರಿಷಭ್‌ ಪಂತ್, ಅಕ್ಷರ್‌ ನಾಯಕತ್ವದಿಂದ ವಜಾ?

ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ವೈಯಕ್ತಿಕವಾಗಿ ಕಳಪೆ ಪ್ರದರ್ಶನ ನೀಡಿದ್ದಲ್ಲದೇ ತಮ್ಮ ತಂಡಗಳನ್ನು ಸಮರ್ಥವಾಗಿ ಮುನ್ನಡೆಸಲು ವಿಫಲವಾಗಿರುವ ಮೂವರು ನಾಯಕರು ಮುಂದಿನ ಆವೃತ್ತಿಯಲ್ಲಿ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಲಖನೌ ನಾಯಕ ರಿಷಭ್‌ ಪಂತ್‌, ಕೋಲ್ಕತಾ ನಾಯಕ ಅಜಿಂಕ್ಯ ರಹಾನೆ ಹಾಗೂ ಡೆಲ್ಲಿ ನಾಯಕ ಅಕ್ಷರ್‌ ಪಟೇಲ್‌ ಕಳೆದೆರಡು ವರ್ಷಗಳಿಂದ ತಮ್ಮ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. 2 ವರ್ಷವೂ ಈ 3 ತಂಡಗಳ ಪ್ರದರ್ಶನ ನೀರಸವಾಗಿತ್ತು. ಈ ಬಾರಿ ಲಖನೌ ಅಧಿಕೃತವಾಗಿ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದ್ದರೆ, ಕೋಲ್ಕತಾ, ಡೆಲ್ಲಿ ಇನ್ನೂ ರೇಸ್‌ನಲ್ಲಿವೆ. ಆದರೆ 2 ತಂಡಗಳ ಹಾದಿ ಗಮನಿಸಿದರೆ ನಾಕೌಟ್‌ಗೇರುವುದು ಕಷ್ಟ. ಇನ್ನು, ಅಕ್ಷರ್‌ ಈ ವರ್ಷ 9 ಇನ್ನಿಂಗ್ಸ್‌ನಲ್ಲಿ ಕೇವಲ 100 ರನ್‌ ಗಳಿಸಿ, 10 ವಿಕೆಟ್‌ ಕಿತ್ತಿದ್ದಾರೆ. ಪಂತ್‌ 138ರ ಸ್ಟ್ರೈಕ್‌ರೇಟ್‌ನಲ್ಲಿ 251 ರನ್‌ ಸಿಡಿಸಿದ್ದರೆ, ರಹಾನೆ 133ರ ಸ್ಟ್ರೈಕ್‌ರೇಟ್‌ನಲ್ಲಿ 237 ರನ್‌ ಗಳಿಸಿದ್ದಾರೆ. ಈ ಮೂವರ ಪೈಕಿ ಅಕ್ಷರ್‌, ರಿಷಭ್‌ ಆಟಗಾರರಾಗಿ ಮುಂದುವರಿಯಲಿದ್ದು, ರಹಾನೆ ತಂಡದಿಂದಲೇ ಹೊರಬೀಳುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.