ಶುಭ್‌ಮನ್ ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಐದನೇ ಸೋಲನ್ನು ಅನುಭವಿಸಿದರೆ, ಗುಜರಾತ್ ತನ್ನ ಮೂರನೇ ಗೆಲುವನ್ನು ದಾಖಲಿಸಿತು.
ಅಹಮದಾಬಾದ್: ಈ ಬಾರಿ ಐಪಿಎಲ್‌ನಲ್ಲಿ ಕೋಲ್ಕತಾ ತಂಡ 5ನೇ ಸೋಲನುಭವಿಸಿದೆ. ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್‌ಗೆ 5 ವಿಕೆಟ್ ಸೋಲು ಎದುರಾಯಿತು. ಟೈಟಾನ್ಸ್‌ಗೆ ಇದು 5 ಪಂದ್ಯಗಳಲ್ಲಿ 3ನೇ ಗೆಲುವು.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 20 ಓವರ್‌ಗಳಲ್ಲಿ 180 ರನ್‌ಗೆ ಆಲೌಟಾಯಿತು. ಕ್ಯಾಮರೂನ್ ಗ್ರೀನ್ ಏಕಾಂಗಿ ಹೋರಾಟ ನಡೆಸಿ 55 ಎಸೆತಗಳಲ್ಲಿ 79 ರನ್ ಸಿಡಿಸಿದರು. ರಬಾಡ 3, ಸಿರಾಜ್, ಅಶೋಕ್ ತಲಾ 2 ವಿಕೆಟ್ ಪಡೆದರು.
ದೊಡ್ಡ ಗುರಿ ಬೆನ್ನತ್ತಿದ ಗುಜರಾತ್ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ನಾಯಕ ಶುಭ್‌ಮನ್ ಗಿಲ್ 50 ಎಸೆತಗಳಲ್ಲಿ 86 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ 25 ರನ್ ಕೊಡುಗೆ ನೀಡಿದರು.
ಸ್ಕೋರ್: ಕೋಲ್ಕತಾ 20 ಓವರ್‌ನಲ್ಲಿ 180/10 (ಗ್ರೀನ್ 79, ಪೊವೆಲ್ 27, ರಬಾಡ 3-29, ಸಿರಾಜ್ 2-23), ಗುಜರಾತ್ 19.4 ಓವರ್‌ನಲ್ಲಿ 181/5 (ಗಿಲ್ 86, ಬಟ್ಲರ್ 25, ವರುಣ್ 2-34)
ಚೆನ್ನೈ ಕಿಂಗ್ಸ್‌ಗೆ ಇಂದು ಸನ್‌ರೈಸರ್ಸ್ ಸವಾಲು
ಹೈದರಾಬಾದ್: ಈ ಬಾರಿ ಐಪಿಎಲ್‌ನಲ್ಲಿ ತಲಾ 3 ಪಂದ್ಯಗಳಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಶನಿವಾರ ಪರಸ್ಪರ ಸೆಣಸಾಡಲಿವೆ. ಅಂಕಪಟ್ಟಿಯಲ್ಲಿ ಮೇಲೇರಲು ಎರಡು ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ.
ಚೆನ್ನೈ, ಸನ್‌ರೈಸರ್ಸ್ ತಲಾ 5 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಗೆದ್ದಿವೆ. ಚೆನ್ನೈ ಆರಂಭಿಕ 3 ಪಂದ್ಯಗಳ ಸೋಲಿನ ಬಳಿಕ ಪುಟಿದೆದ್ದಿದ್ದು, ಕೊನೆ 2 ಪಂದ್ಯಗಳಲ್ಲಿ ಜಯಗಳಿಸಿವೆ. ಗೆಲುವಿನ ಓಟ ಮುಂದುವರಿಸುವ ವಿಶ್ವಾದಲ್ಲಿರುವ ತಂಡ, ಸುಧಾರಿತ ಆಟ ಪ್ರದರ್ಶಿಸಬೇಕಿದೆ.
ಮತ್ತೊಂದೆಡೆ ಸನ್‌ರೈಸರ್ಸ್ ಅಸ್ಥಿರ ಆಟವಾಡುತ್ತಿದೆ. ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದರೂ ಅಭಿಷೇಕ್ ಶರ್ಮಾ ಇನ್ನೂ ನೈಜ ಆಟ ಪ್ರದರ್ಶಿಸಿಲ್ಲ. ಕಳೆದ ಪಂದ್ಯದಲ್ಲಿ ಪ್ರಚಂಡ ದಾಳಿ ನಡೆಸಿದ್ದ ಪ್ರಫುಲ್, ಸಾಕಿಬ್ ಹುಸೈನ್ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ


