ಗುಜರಾತ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 89 ರನ್‌ಗಳ ಹೀನಾಯ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಗುಜರಾತ್ ಪರ ಸಾಯಿ ಸುದರ್ಶನ್, ಗಿಲ್, ಬಟ್ಲರ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಸಿರಾಜ್ ಮತ್ತು ರಬಾಡ ಮಾರಕ ಬೌಲಿಂಗ್ ದಾಳಿ ನಡೆಸಿದರು.
ಅಹಮದಾಬಾದ್: ಗುಜರಾತ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 89 ರನ್ ಹೀನಾಯವಾಗಿ ಸೋಲುಂಡ 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಐಪಿಎಲ್‌ನ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ತಂಡ ಆಡಿರುವ 14 ಪಂದ್ಯಗಳ ಪೈಕಿ 8ರಲ್ಲಿ ಸೋತು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮತ್ತೊಂದೆಡೆ ಗುಜರಾತ್ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿತು.

ಸವಾಲಿನ ಮೊತ್ತ ಕಲೆಹಾಕಿದ ಗುಜರಾತ್ ಟೈಟಾನ್ಸ್
ಮೊದಲು ಬ್ಯಾಟ್ ಮಾಡಿದ ಗುಜರಾತ್ 4 ವಿಕೆಟ್‌ಗೆ 229 ರನ್ ಕಲೆಹಾಕಿತು. ಸಾಯಿ ಸುದರ್ಶನ್ 53 ಎಸೆತಕ್ಕೆ 84, ನಾಯಕ ಗಿಲ್ 37 ಎಸೆತಕ್ಕೆ 64, ಜೋಸ್ ಬಟ್ಲರ್ 27 ಎಸೆತಕ್ಕೆ ಔಟಾಗದೆ 57 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಚೆನ್ನೈ 13.4 ಓವರ್‌ಗಳಲ್ಲಿ 140 ರನ್‌ಗೆ ಆಲೌಟಾಯಿತು. ಆರಂಭದಲ್ಲೇ ಮಾರಕ ದಾಳಿ ಸಂಘಟಿಸಿ 3 ವಿಕೆಟ್ ಕಿತ್ತ ಸಿರಾಜ್, ಚೆನ್ನೈ ಪತನಕ್ಕೆ ನಾಂದಿ ಹಾಡಿದರು. ಬಳಿಕ ರಬಾಡ ಕೂಡಾ 3 ವಿಕೆಟ್ ಕಿತ್ತರು. ಶಿವಂ ದುಬೆ(17 ಎಸೆತಕ್ಕೆ 47) ಹೋರಾಟ ವ್ಯರ್ಥವಾಯಿತು.
ಕ್ವಾಲಿಫೈಯರ್-1 ಪಂದ್ಯಕ್ಕೆ ಒಂದು ಕಾಲಿಟ್ಟ ಗುಜರಾತ್ ಟೈಟಾನ್ಸ್:
ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನುಅನಾಯಾಸವಾಗಿ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಬಹುತೇಕ ಕ್ವಾಲಿಫೈಯರ್-1 ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಂಡಿದೆ. ಈಗಾಗಲೇ ಆರ್‌ಸಿಬಿ ಹಾಗೂ ಗುಜರಾತ್ ತಂಡಗಳು ತಲಾ 18 ಅಂಕಗಳನ್ನು ಗಳಿಸಿ ಮೊದಲೆರಡು ಸ್ಥಾನದಲ್ಲಿವೆ. ಒಂದು ವೇಳೆ ಇಂದು ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಎದುರು ಆರ್‌ಸಿಬಿ ಗೆದ್ದರೇ, ಗುಜರಾತ್ ಹಾಗೂ ಆರ್‌ಸಿಬಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲಿವೆ.
ಸ್ಕೋರ್: ಗುಜರಾತ್ 229/4 (ಸುದರ್ಶನ್ 84, ಗಿಲ್ 64, ಬಟ್ಲರ್ 57, ಮುಕೇಶ್ 1-36), ಚೆನ್ನೈ 13.4 ಓವರ್‌ನಲ್ಲಿ 140/10 (ದುಬೆ 47, ಸಿರಾಜ್ 3-26, ರಬಾಡ 2-32)
ಪಂದ್ಯಶ್ರೇಷ್ಠ: ಮೊಹಮ್ಮದ್ ಸಿರಾಜ್

