ಶಿಮ್ರೋನ್‌ ಹೆಟ್ಮೆಯರ್‌ ಸ್ಪೋಟಕ ಬ್ಯಾಟಿಂಗ್‌ ಸಾಹಸದಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಸವಾಲಿನ ಗುರಿ ನಿಗದಿ ಮಾಡಿದೆ. 

ಫ್ಲಾರಿಡಾ (ಆ.12): ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್‌ ಶಿಮ್ರೋನ್‌ ಹೆಟ್ಮೆಯರ್‌ ಬಾರಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ ಪ್ರವಾಸಿ ಭಾರತ ತಂಡದ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಸವಾಲಿನ ಗುರಿ ನಿಗದಿ ಪಡಿಸಿದೆ. 39 ಎಸೆತಗಳನ್ನು ಎದುರಿಸಿದ ಶಿಮ್ರೋನ್‌ ಹೆಟ್ಮೆಯರ್‌ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ವೆಸ್ಟ್‌ ಇಂಡೀಸ್‌ ತಂಡ 8 ವಿಕೆಟ್‌ಗೆ 178 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಫ್ಲಾರಿಡಾದ ಲೌಡೆರ್‌ಹಿಲ್‌ನ ಸೆಂಟ್ರಲ್‌ ಬ್ರೋವಾರ್ಡ್‌ ರೀಜನಲ್‌ ಪಾರ್ಕ್‌ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದರೆ ಮಾತ್ರವೇ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲಿದೆ. ಈ ಮೈದಾನದಲ್ಲಿ ಯಾವ ತಂಡ ಕೂಡ 178 ರನ್‌ಗಳನ್ನು ಚೇಸ್‌ ಮಾಡಿ ಗೆಲುವು ಸಾಧಿಸಿದ ಉದಾಹರಣೆಯಿಲ್ಲ. ಶಿಮ್ರೋನ್‌ ಹೆಟ್ಮೆಯರ್‌ ಮಾತ್ರವಲ್ಲದೆ ಶೈ ಹೋಪ್‌, 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದ 45 ರನ್‌ ಬಾರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ವೆಸ್ಟ್‌ ಇಂಡೀಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 2ನೇ ಓವರ್‌ನಲ್ಲಿಯೇ ಭರ್ಜರಿಯಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಕೈಲ್‌ ಮೇಯರ್ಸ್‌ ವಿಕೆಟ್‌ ಒಪ್ಪಿಸಿದರು. 7 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್‌ನೊಂದಿಗೆ 17 ರನ್‌ ಬಾರಿಸಿ ಅಬ್ಬರಿಸಿದ ಮೇಯರ್ಸ್‌, ಆರ್ಶ್‌ದೀಪ್‌ ಸಿಂಗ್‌ಗೆ ವಿಕೆಟ್ ನೀಡಿದರು. ಬಳಿಕ ಆರಂಭಿಕ ಆಟಗಾರ ಬ್ರಾಂಡನ್‌ ಕಿಂಗ್‌ಗೆ (18) ಜೊತೆಯಾದ ಶೈ ಹೋಪ್‌ ತಂಡದ ಮೊತ್ತವನ್ನುಅರ್ಧಶತಕದ ಗಡಿ ದಾಟಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು. ಏಕದಿನದ ಶೈಲಿಯಂತೆ ಬ್ಯಾಟಿಂಗ್‌ ಮಾಡುತ್ತಿದ್ದ ಬ್ರಾಂಡನ್‌ ಕಿಂಗ್‌ 6ನೇ ಓವರ್‌ನಲ್ಲಿ ಆರ್ಶ್‌ದೀಪ್‌ ಸಿಂಗ್‌ಗೆ ಬಲಿಯಾದರು.

ಏಕದಿನ ವಿಶ್ವಕಪ್ ಸಮರಕ್ಕೂ ಮೊದಲೇ ಸೋಲುಪ್ಪಿಕೊಂಡ್ರಾ ನಾಯಕ ರೋಹಿತ್ ಶರ್ಮಾ?

ಕುಲದೀಪ್‌ ಡಬಲ್‌ ಸ್ಟ್ರೈಕ್‌: 54 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ವೆಸ್ಟ್‌ ಇಂಡೀಸ್‌ ಈ ಮೊತ್ತಕ್ಕೆ 3 ರನ್‌ ಸೇರಿಸುವ ವೇಳೆಗೆ ಮತ್ತೆರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಎರಡೂ ವಿಕೆಟ್‌ಗಳನ್ನು ಕುಲದೀಪ್‌ ಯಾದವ್‌ ಉರುಳಿಸಿದರು. ಸ್ಪೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಹಾಗೂ ನಾಯಕ ರೋವ್‌ಮನ್‌ ಪಾವಲ್‌ ಒಂದೇ ಓವರ್‌ನಲ್ಲಿ ನಿರ್ಗಮಿಸಿದಾಗ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸುವ ಲಕ್ಷಣ ತೋರಿತ್ತು.

Asian Champions Trophy 2023: ಜಪಾನ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!

ಸರಣಿಯಲ್ಲಿ ಮೊದಲ ಪಂದ್ಯವಾಡಿದ್ದ ಶೈ ಹೋಪ್‌ಗೆ ಜೊತೆಯಾದ ಶಿಮ್ರೋನ್‌ ಹೆಟ್ಮೆಯರ್‌ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದರೆ, ನಂತರ ಆಕ್ರಮಣಕಾರಿಯಾಗಿ ಆಡಲು ಆರಂಭಿಸಿದರು.7ನೇ ಓವರ್‌ ವೇಳೆಗೆ 57 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ವೆಸ್ಟ್‌ ಇಂಡೀಸ್, 13ನೇ ಓವರ್‌ನ 5ನೇ ಎಸೆತದಲ್ಲಿ ಹೋಪ್‌ ಔಟಾಗುವಾಗ 106 ರನ್‌ ಬಾರಿಸಿತ್ತು. ಎರಡು ಸ್ಪೆಷಲಿಸ್ಟ್‌ ಸ್ಪಿನ್ನರ್‌ಗಳಾಗಿದ್ದ ಕುಲದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಾಹಲ್‌ಗೆ ಎಚ್ಚರಿಕೆಯಲ್ಲಿ ಆಟವಾಡಿದ ಹೆಟ್ಮೆಯರ್‌, ಅಕ್ಷರ್‌ ಪಟೇಲ್‌ ಮತ್ತು ವೇಗದ ಬೌಲರ್‌ಗಳನ್ನು ದಂಡಿಸಿದರು. ಹೋಪ್‌ ಔಟಾದ ಬಳಿಕ ವಿಂಡೀಸ್‌ ಕುಸಿತ ಕಂಡಿದ್ದರಿಂದ 16ನೇ ಓವರ್‌ ವೇಳೆಗೆ 7 ವಿಕೆಟ್‌ಗೆ 123 ರನ್‌ ಬಾರಿಸಿ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಹೆಟ್ಮೆಯರ್‌ಎ ಜೊತೆಯಾದ ಒಡೆನ್‌ ಸ್ಮಿತ್‌ 8ನೇ ವಿಕೆಟ್‌ಗೆ ಆಕರ್ಷಕ 44 ರನ್‌ ಜೊತೆಯಾಟವಾಡಿದರು. ಇದು ತಂಡದ ದೊಡ್ಡ ಮೊತ್ತಕ್ಕೆ ಕಾರಣವಾಗಿತು. ಈ ಮೈದಾನ ಇಲ್ಲಿಯವರರೆಗೂ ಮೊದಲು ಬ್ಯಾಟಿಂಗ್‌ ಮಾಡಿದ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಫೇವರ್‌ ನೀಡಿದೆ. ಕೇವಲ 2 ಬಾರಿ ಮಾತ್ರವೇ ಈ ಮೈದಾನದಲ್ಲಿ ಚೇಸಿಂಗ್‌ ಮಾಡಿದ ತಂಡ ಗೆಲುವು ಕಂಡಿದೆ.