Asian Champions Trophy 2023: ಜಪಾನ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!
ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆ
ಜಪಾನ್ ವಿರುದ್ದ 5-0 ಅಂತರದ ಜಯಭೇರಿ ಬಾರಿಸಿದ ಭಾರತ ಹಾಕಿ ತಂಡ
ಫೈನಲ್‌ನಲ್ಲಿ ಪ್ರಶಸ್ತಿಗಾಗಿಂದು ಭಾರತ-ಮಲೇಷ್ಯಾ ಫೈಟ್
ಚೆನ್ನೈ(ಆ.12): 3 ಬಾರಿ ಚಾಂಪಿಯನ್ ಭಾರತ ತಂಡ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಕಳೆದ ಬಾರಿ ರನ್ನರ್-ಅಪ್ ಜಪಾನ್ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಪಡೆ 5-0 ಗೋಲುಗಳಿಂದ ಭರ್ಜರಿ ಜಯಭೇರಿ ಬಾರಿಸಿತು. ಇದರೊಂದಿಗೆ 3ನೇ ಬಾರಿ ಫೈನಲ್‌ಗೇರುವ ಜಪಾನ್ ಕನಸು ಭಗ್ನಗೊಂಡಿತು.
ಲೀಗ್ ಹಂತದಲ್ಲಿ ಅತ್ಯುತ್ತಮ ಆಟವಾಡಿದ್ದ ಭಾರತ ಸೆಮೀಸ್‌ನಲ್ಲೂ ಅಧಿಕಾರಯುತ ಗೆಲುವು ತನ್ನದಾಗಿಸಿಕೊಂಡಿತು. ಮೊದಲ ಕ್ವಾರ್ಟರ್‌ನಲ್ಲಿ ಗೋಲು ದಾಖಲಾಗದಿದ್ದರೂ, 2ನೇ ಕ್ವಾರ್ಟರ್ ಮುಕ್ತಾಯಕ್ಕೆ ಭಾರತ 3-0 ಮುನ್ನಡೆ ಪಡೆದು, ಗೆಲುವನ್ನು ಬಹತೇಕ ಖಚಿತಪಡಿಸಿಕೊಂಡಿತು. 19ನೇ ನಿಮಿಷದಲ್ಲಿ ಆಕಾಶ್‌ದೀಪ್ ಗೋಲಿನ ಖಾತೆ ತೆರೆದರೆ, 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ವ್ಯರ್ಥಗೊಳಿಸಲಿಲ್ಲ. 30ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಗೋಲು ಹೊಡೆದು ತಂಡದ ಮುನ್ನಡೆ ಹೆಚ್ಚಿಸಿದರು.
ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ಕಾಸ್ಟ್ಲಿ ವಾಚ್‌ಗಳಿವು..! ಒಂದು ವಾಚ್ ಬೆಲೆ 100 ಕುಟುಂಬಗಳ ವರ್ಷದ ಆದಾಯ..!
ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವ ನಿರೀಕ್ಷೆಯಲ್ಲಿದ್ದ ಜಪಾನ್‌ಗೆ ಭಾರತದ ರಕ್ಷಣಾ ಪಡೆ ಕಿಂಚಿತ್ತೂ ಅವಕಾಶ ನೀಡಲಿಲ್ಲ. ಜೊತೆಗೆ ಮತ್ತಷ್ಟು ಆಕ್ರಮಣಕಾರಿ ಆಟಕ್ಕಿಳಿದ ಭಾರತ ಇನ್ನೆರಡು ಗೋಲು ದಾಖಲಿಸಿತು. 39ನೇ ನಿಮಿಷದಲ್ಲಿ ಸುಮಿತ್, 51ನೇ ನಿಮಿಷದಲ್ಲಿ ಸ್ಥಳೀಯ ಆಟಗಾರ ಕಾರ್ತಿ ಸೆಲ್ವಂ ಹೊಡೆದ ಆಕರ್ಷಕ ಗೋಲುಗಳು ಜಪಾನ್ ಆತ್ಮವಿಶ್ವಾಸ ಕುಗ್ಗಿಸಿದವು.
ಭಾರತ ಈವರೆಗೆ 3 ಬಾರಿ ಪ್ರಶಸ್ತಿ ಗೆದ್ದಿದ್ದು, ಈ ಬಾರಿ ತವರಿನಲ್ಲಿ ಟ್ರೋಫಿ ಸಂಖ್ಯೆಯನ್ನು ನಾಲ್ಕಕ್ಕೇರಿಸುವ ನಿರೀಕ್ಷೆಯಲ್ಲಿದೆ. 2011ರ ಚೊಚ್ಚಲ ಆವೃತ್ತಿ, 2016ರಲ್ಲಿ ಚಾಂಪಿಯನ್ ಆಗಿದ್ದ ಭಾರತ, ಬಳಿಕ 2018ರಲ್ಲಿ ಪಾಕಿಸ್ತಾನ ಜೊತೆ ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಬ್ರಿಜ್‌ಭೂಷಣ್ ಆಪ್ತ ಸಂಜಯ್‌ಗೆ ಅಧ್ಯಕ್ಷ ಹುದ್ದೆ ತಪ್ಪಿಸಲು ಕುಸ್ತಿಪಟುಗಳ ಕಸರತ್ತು..!
ಭಾರತ ಪರ 300ನೇ ಹಾಕಿ ಪಂದ್ಯವನ್ನಾಡಿದ ಶ್ರೀಜೇಶ್: ಜಪಾನ್ ಎದುರು ಭರ್ಜರಿ ಗೆಲುವು ಸಾಧಿಸಿದ ಪಂದ್ಯವು ಭಾರತ ಗೋಲು ಕೀಪರ್ ಪಿ ಆರ್ ಶ್ರೀಜೇಶ್ ಪಾಲಿಗೆ 300ನೇ ಅಂತಾರಾಷ್ಟ್ರೀಯ ಪಂದ್ಯ ಎನಿಸಿಕೊಂಡಿತು. ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಹಾಕಿ ಇಂಡಿಯಾವು, ಶ್ರೀಜೇಶ್ ಅವರಿಗೆ ವಿಶೇಷವಾದ ಕ್ಯಾಪ್ ನೀಡುವ ಮೂಲಕ ಗೌರವಿಸಿತು.
ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಜೇಶ್, "ಇದೆಲ್ಲವೂ ತಂಡಕ್ಕಾಗಿ, ನಾನಿಂದು ಏನಾಗಿದ್ದೇನೋ, ನಾನಿಂದು ಎಲ್ಲಿದ್ದೀನೋ ಅದೆಲ್ಲವೂ ಸಾಧ್ಯವಾಗಿದ್ದು ಈ ತಂಡದಿಂದಲೇ. ನನಗೆ ಅಗತ್ಯವಿದ್ದಾಗ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವೆಲ್ಲರೂ ಒಟ್ಟಿಗಿರಲು ಸಾಧ್ಯವಾಗಿದ್ದು ಈ ಹಾಕಿಯಿಂದಾಗಿ ಎಂದು ಶ್ರೀಜೇಶ್ ಹೇಳಿದ್ದಾರೆ.
ಮೊದಲ ಸಲ ಮಲೇಷ್ಯಾ ಫೈನಲ್‌ಗೆ
ಟೂರ್ನಿಯಲ್ಲಿ ಈ ಮೊದಲು 5 ಬಾರಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಮಲೇಷ್ಯಾ, ಮೊದಲ ಬಾರಿ ಫೈನಲ್ ಪ್ರವೇಶಿಸಿದೆ. ಶುಕ್ರವಾರ ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ದ.ಕೊರಿಯಾವನ್ನು 6-2 ಗೋಲುಗಳಿಂದ ಬಗ್ಗುಬಡಿಯಿತು. ಇನ್ನು, 5ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾ ವಿರುದ್ಧ ಪಾಕಿಸ್ತಾನ 6-1 ಗೋಲಿನಿಂದ ಜಯಭೇರಿ ಬಾರಿಸಿತು.