ಚೆನ್ನೈ(ಡಿ.15): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಗೆಲುವಿನ ಬಳಿಕ, ಏಕದಿನದಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಆತಿಥೇಯ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ಚುಟುಕು ಸರಣಿ ಸೋಲಿಗೆ ತಿರುಗೇಟು ನೀಡಿದೆ. ಇಷ್ಟೇ ಅಲ್ಲ 3  ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಶಿಮ್ರೋನ್ ಹೆಟ್ಮೆಯರ್ ಭರ್ಜರಿ ಶತಕ ಸಿಡಿಸಿ ದಾಖಲೆ!

289 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಆರಂಭದಲ್ಲೇ ಸುನಿಲ್ ಆ್ಯಂಬ್ರಿಸ್ ವಿಕೆಟ್ ಕಳೆದುಕೊಂಡಿತು. ಆದರೆ ವೆಸ್ಟ್ ಇಂಡೀಸ್ ತಂಡ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಶಿಮ್ರೋನ್ ಹೆಟ್ಮೆಯರ್ ಹಾಗೂ ಶೈ ಹೋಪ್ ಜೊತೆಯಾಟ, ಭಾರತದ ಗೆಲುವಿನ ಆಸೆ ದೂರ ಮಾಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್: ವಿಶೇಷ ಅತಿಥಿ ಆಗಮನ, ಪಂದ್ಯ ಕೆಲಕಾಲ ಸ್ಥಗಿತ!

ಅಬ್ಬರಿಸಿದ ಹೆಟ್ಮೆಯರ್ 85 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಅಷ್ಟರಲ್ಲೇ ಭಾರತದ ಗೆಲುವಿನ ಕನಸು ಕಮರಿ ಹೋಯಿತು. ಹೆಟ್ಮೆಯರ್ 106 ಎಸೆತದಲ್ಲಿ 11 ಬೌಂಡರಿ ಹಾಗೂ 7 ಸಿಕ್ಸರ್ ಮೂಲಕ 139 ರನ್ ಚಚ್ಚಿದರು. ಹೆಟ್ಮೆಯರ್ ಹಾಗೂ ಹೋಪ್ 2ನೇ ವಿಕೆಟಗೆ 218 ರನ್ ಜೊತೆಯಾಟ ನೀಡಿದರು. 

ಹೆಟ್ಮೆಯರ್ ಔಟಾದರೂ ಶೈ ಹೋಪ್ ವಿಂಡೀಸ್ ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಶೈ ಹೋಪ್ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ವಿಂಡೀಸ್ ಗೆಲುವು ಖಚಿತವಾಯಿತು. ಶೈ ಹೋಪ್ ಅಜೇಯ 102 ರನ್ ಹಾಗೂ ನಿಕೋಲಸ್ ಪೂರನ್ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ವಿಂಡೀಸ್ 47.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.