* ವೆಸ್ಟ್ ಇಂಡೀಸ್‌ - ಭಾರತ ನಡುವಿನ ಎರಡನೇ ಟೆಸ್ಟ್‌ನಲ್ಲಿ ಕೆರಿಬಿಯನ್ ಪಡೆಯ ರಕ್ಷಣಾತ್ಮಕ ಆಟ* ಮೂರನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದ ವಿಂಡೀಸ್* ಇನ್ನೂ 209 ರನ್‌ಗಳ ಹಿನ್ನಡೆಯಲ್ಲಿರುವ ವೆಸ್ಟ್ ಇಂಡೀಸ್ ತಂಡ

ಪೋರ್ಟ್‌ ಆಫ್‌ ಸ್ಪೇನ್‌(ಜು.23): ಭಾರತೀಯ ಬೌಲರ್‌ಗಳ ಮೊನಚು ದಾಳಿಯನ್ನು ಎದುರಿಸಲು ಆತಿಥೇಯ ವೆಸ್ಟ್‌ಇಂಡೀಸ್‌ ತಂಡದ ಬ್ಯಾಟರ್‌ಗಳು ಕೊನೆಗೂ ತಕ್ಕಮಟ್ಟಿನ ಯಶ ಕಂಡಂತಿದೆ. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿ 150ರ ಗಡಿ ದಾಟಲು ವಿಫಲವಾಗಿದ್ದ ವಿಂಡೀಸ್‌ ಬ್ಯಾಟರ್‌ಗಳು 2ನೇ ಟೆಸ್ಟ್‌ನಲ್ಲಿ ಅಲ್ಪ ಹೋರಾಟ ಪ್ರದರ್ಶಿಸಿಸಿದ್ದಾರೆ. ಭಾರತದ 438 ರನ್‌ಗೆ ಉತ್ತರವಾಗಿ ವಿಂಡೀಸ್‌ ಮೂರನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದ್ದು, ಇನ್ನೂ 209 ರನ್‌ಗಳ ಹಿನ್ನಡೆಯಲ್ಲಿದೆ.

ಆರ್‌.ಅಶ್ವಿನ್‌(59)ರ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ 2ನೇ ದಿನ 400ರ ಗಡಿ ದಾಟಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ವಿಂಡೀಸ್‌ 2ನೇ ದಿನದಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 86 ರನ್‌ ಗಳಿಸಿತು. ತೇಜ್‌ನಾರಾಯಣ್‌ ಚಂದ್ರಪಾಲ್‌(33) ಜಡೇಜಾಗೆ ಬಲಿಯಾದರು. 

500ನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 76ನೇ ಶತಕ..! ಹೃದಯ ಗೆದ್ದ ಅನುಷ್ಕಾ ಶರ್ಮಾ ಪೋಸ್ಟ್‌..!

ಶನಿವಾರವೂ ಕಿರ್ಕ್‌ ಮೆಕೆನ್ಜಿ(32) ಹಾಗೂ ನಾಯಕ ಕ್ರೇಗ್‌ ಬ್ರಾಥ್‌ವೇಟ್‌(75)ರ ದಿಟ್ಟ ಆಟದ ನೆರವಿನಿಂದ ಮೊದಲ ಅವಧಿಯಲ್ಲಿ ವಿಂಡೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಆದರೆ ಮೆಕೆನ್ಜಿಯನ್ನು ಚೊಚ್ಚಲ ಪಂದ್ಯವಾಡುತ್ತಿರುವ ಮುಕೇಶ್‌ ಕುಮಾರ್‌ ಪೆವಿಲಿಯನ್‌ಗೆ ಅಟ್ಟಿದರು. ನೆಲಕಚ್ಚಿ ಆಡುವ ಯತ್ನ ನಡೆಸಿದ ನಾಯಕ ಕ್ರೇಗ್ ಬ್ರಾಥ್‌ವೇಟ್ 235 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 75 ರನ್‌ ಬಾರಿಸಿ ರವಿಚಂದ್ರನ್ ಅಶ್ವಿನ್ ಮಾರಕ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಜರ್ಮೈನ್ ಬ್ಲಾಕ್‌ವುಡ್‌ 20 ರನ್‌ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಜೋಶ್ವಾ ಡ ಸಿಲ್ವಾ 10 ರನ್ ಗಳಿಸಿ ವೇಗಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ ಅಲಿಕ್‌ ಅಥಂಜೆ(37) ಹಾಗೂ ಜೇಸನ್ ಹೋಲ್ಡರ್(11) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ಅಪರೂಪದ ದಾಖಲೆ ಮುರಿದ ಕಿಂಗ್ ಕೊಹ್ಲಿ..!

ಮಳೆ ಅಡ್ಡಿ

ಶನಿವಾರ ಮೊದಲ ಅವಧಿಯಲ್ಲೇ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. 10.4 ಓವರ್‌ ಆಟ ಮುಗಿದ ಕೂಡಲೇ ಮಳೆ ಸುರಿದ ಕಾರಣ 1 ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತು. ಹೀಗಾಗಿ ನಿಗದಿತ ಸಮಯಕ್ಕೂ ಮೊದಲೇ ಅಂಪೈರ್‌ಗಳು ಭೋಜನ ವಿರಾಮ ಘೋಷಿಸಿದರು.

ಸ್ಕೋರ್‌: ಭಾರತ 438/10, ವಿಂಡೀಸ್‌ 229/5 (ಬ್ರಾಥ್‌ವೇಟ್‌ 75, ಅಥಂಜೆ 37*, ಜಡೇಜಾ: 37/2)

ವಿರಾಟ್‌ ಕೊಹ್ಲಿಯನ್ನು ತಬ್ಬಿ ಮುತ್ತಿಟ್ಟ ಜೋಶ್ವಾ ತಾಯಿ!

ವಿರಾಟ್‌ ಕೊಹ್ಲಿ ಅವರ ದೊಡ್ಡ ಅಭಿಯಾನಿಯಾಗಿರುವ ವೆಸ್ಟ್‌ಇಂಡೀಸ್‌ ವಿಕೆಟ್‌ಕೀಪರ್‌ ಜೋಶ್ವಾ ಡ ಸಿಲ್ವಾ ಅವರ ತಾಯಿ, ಶುಕ್ರವಾರ ಕೊಹ್ಲಿಯನ್ನು ಭೇಟಿಯಾಗಿ ತಬ್ಬಿ ಮುತ್ತಿಟ್ಟರು. ಮತ್ತೊಂದೆಡೆ ತಾಯಿಯ ಭಾವುಕ ಕ್ಷಣಗಳನ್ನು ಸಿಲ್ವಾ ಮೊಬೈಲ್‌ನಲ್ಲಿ ಸೆರೆ ಹಿಡಿದರು. ತಮ್ಮ ತಾಯಿ ಕೊಹ್ಲಿಯನ್ನು ನೋಡಲೆಂದೇ ಪೋರ್ಟ್‌ ಆಫ್‌ ಸ್ಪೇನ್‌ಗೆ ಆಗಮಿಸಿದ್ದಾರೆ ಎಂದು ಸಿಲ್ವಾ ಮಾಹಿತಿ ಹಂಚಿಕೊಂಡಿದ್ದಾರೆ.