ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ಅಪರೂಪದ ದಾಖಲೆ ಮುರಿದ ಕಿಂಗ್ ಕೊಹ್ಲಿ..!
ವೆಸ್ಟ್ ಇಂಡೀಸ್ ಎದುರು ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ದಿಗ್ಗಜ ಕ್ರಿಕೆಟಿಗ ಬ್ರಿಯನ್ ಲಾರಾ ದಾಖಲೆ ಮುರಿದ ಕಿಂಗ್ ಕೊಹ್ಲಿ
4ನೇ ಕ್ರಮಾಂಕದಲ್ಲಿ 25ನೇ ಶತಕ ಸಿಡಿಸಿದ ಟೀಂ ಇಂಡಿಯಾ ಮಾಜಿ ನಾಯಕ
ಪೋರ್ಟ್ ಆಫ್ ಸ್ಪೇನ್(ಜು.22): ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಬರೋಬ್ಬರಿ 5 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ವಿಂಡೀಸ್ ಎದುರಿನ ಈ ಶತಕವು ವಿರಾಟ್ ಕೊಹ್ಲಿ ಬ್ಯಾಟಿಂದ ಮೂಡಿಬಂದ 29ನೇ ಶತಕ ಎನಿಸಿಕೊಂಡಿತು.
ಮೊದಲ ದಿನದಾಟದಂತ್ಯದ ವೇಳೆಗೆ ಅಜೇಯ 87 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ, ಎರಡನೇ ದಿನದಾಟದ ಆರಂಭದಲ್ಲೇ ಶೆನೊನ್ ಗೇಬ್ರಿಲ್ ಬೌಲಿಂಗ್‌ನಲ್ಲಿ ಆಕರ್ಷಕ ಕವರ್ ಡ್ರೈವ್ ಬೌಂಡರಿ ಬಾರಿಸುವ ಮೂಲಕ ಮೂರಂಕಿ ಮೊತ್ತ ದಾಖಲಿಸುವಲ್ಲಿ ಸಫಲರಾದರು. ಅಂದಹಾಗೆ ಇದು ವಿರಾಟ್ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಬಾರಿಸಿದ 25ನೇ ಶತಕ ಎನಿಸಿಕೊಂಡಿತು. ಈ ಮೂಲಕ 4ನೇ ಕ್ರಮಾಂಕದಲ್ಲಿ ಬ್ರಿಯನ್ ಲಾರಾ(24) ಬಾರಿಸಿದ್ದ ಶತಕದ ದಾಖಲೆಯನ್ನು ಹಿಂದಿಕ್ಕುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿಗೆ ಮುತ್ತಿಕ್ಕಿ ಆನಂದ ಭಾಷ್ಪ ಸುರಿಸಿದ ವಿಂಡೀಸ್ ಕ್ರಿಕೆಟಿಗನ ತಾಯಿ...! ವಿಡಿಯೋ ವೈರಲ್
4ನೇ ಕ್ರಮಾಂಕದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು:
1. ಸಚಿನ್ ತೆಂಡುಲ್ಕರ್(ಭಾರತ): 44 ಶತಕ
2. ಜಾಕ್ ಕಾಲಿಸ್(ದಕ್ಷಿಣ ಆಫ್ರಿಕಾ): 35 ಶತಕ
3. ಮಹೆಲಾ ಜಯವರ್ಧನೆ(ಶ್ರೀಲಂಕಾ): 30 ಶತಕ
4. ವಿರಾಟ್ ಕೊಹ್ಲಿ(ಭಾರತ): 25 ಶತಕ
5. ಬ್ರಿಯನ್ ಲಾರಾ(ವೆಸ್ಟ್ ಇಂಡೀಸ್): 24 ಶತಕ
ಇನ್ನು ಹಾಲಿ ಆಟಗಾರರ ಪೈಕು ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, 4ನೇ ಕ್ರಮಾಂಕದಲ್ಲಿ ತಲಾ 19 ಶತಕ ಸಿಡಿಸಿದ್ದಾರೆ. 34 ವರ್ಷದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಎದುರು 121 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ವಿರಾಟ್ ಕೊಹ್ಲಿ ಬಾರಿಸಿದ ಶತಕ ಹಾಗೂ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 438 ರನ್ ಗಳಿಸಿ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿದ್ದು, ಇನ್ನೂ 352 ರನ್‌ಗಳ ಹಿನ್ನಡೆಯಲ್ಲಿದೆ.