ಇಂಗ್ಲೆಂಡ್ ಕ್ರಿಕೆಟಿಗ ಜೋಸ್ ಬಟ್ಲರ್, ಭಾರತದ ರೋಹಿತ್ ಶರ್ಮಾ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಹೊಗಳಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಅವರಿಂದ ಆಟೋಗ್ರಾಫ್ ಸಹಿತ ಜೆರ್ಸಿಯನ್ನು ಉಡುಗೊರೆಯಾಗಿ ಪಡೆದ ಬಟ್ಲರ್, ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಇಬ್ಬರೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಟ್ಟಿಗೆ ಆಡಿದ್ದರು.
ಬೆಂಗಳೂರು: ಇಂಗ್ಲೆಂಡ್ ಮಾಜಿ ನಾಯಕ ಜೋಸ್ ಬಟ್ಲರ್ ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ ಕುರಿತಂತೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಭಾರತ ಹಾಗೂ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಬೆನ್ನಲ್ಲೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಜೋಸ್ ಬಟ್ಲರ್‌ಗೆ ಅಮೂಲ್ಯವಾದ ಗಿಫ್ಟ್ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಬಟ್ಲರ್ ಖಚಿತಪಡಿಸಿದ್ದಾರೆ.
ಜೋಸ್ ಬಟ್ಲರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೋಹಿತ್ ಶರ್ಮಾ ಜೆರ್ಸಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಹಿಟ್‌ಮ್ಯಾನ್ ಕುರಿತಂತೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಆ ಒಬ್ಬ ಎದುರಾಳಿ ತಂಡದ ಆಟಗಾರನ ಜೆರ್ಸಿ ಬೇಕು ಎಂದು ನಾನು ಸಾಕಷ್ಟು ಸಮಯದಿಂದ ಕಾಯುತ್ತಿದ್ದೆ. ಅದು ಬೇರೆ ಯಾರದ್ದೂ ಅಲ್ಲ, ನನ್ನ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ರೋಹಿತ್ ಶರ್ಮಾ ಅವರದ್ದು. ಇದನ್ನು ಅಮೂಲ್ಯವಾಗಿ ಕಾಪಾಡಿಕೊಳ್ಳುತ್ತೇನೆ' ಎಂದು ಬಟ್ಲರ್ ಬರೆದುಕೊಂಡಿದ್ದಾರೆ.
ರೋಹಿತ್ ಶರ್ಮಾ, ಜೋಸ್ ಬಟ್ಲರ್‌ಗೆ ತಮ್ಮ ಜೆರ್ಸಿ ಮೇಲೆ ಆಟೋಗ್ರಾಫ್ ಹಾಕಿದ್ದಾರೆ. ಅದರಲ್ಲಿ ಹಿಟ್‌ಮ್ಯಾನ್, 'ಡಿಯರ್ ಜೋಸ್, ನಿಮ್ಮ ಜತೆಯಾಗಿ ಹಾಗೂ ನಿಮ್ಮ ಎದುರಾಳಿಯಾಗಿ ಆಡಿದ ಕ್ಷಣಗಳನ್ನು ಎಂಜಾಯ್ ಮಾಡಿದ್ದೇನೆ' ಎಂದು ಬರೆದು ತಮ್ಮ ಜೆರ್ಸಿಯನ್ನು ಗಿಫ್ಟ್ ಮಾಡಿದ್ದಾರೆ.
ರೋಹಿತ್ ಶರ್ಮಾ ತಂಡದಲ್ಲಿ ಆಡಿದ್ದ ಬಟ್ಲರ್:
ಅಂದಹಾಗೆ ಜೋಸ್ ಬಟ್ಲರ್, ರೋಹಿತ್ ಶರ್ಮಾ ಅವರಿದ್ದ ತಂಡದಲ್ಲಿ ಆಡಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. 2017ರಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾಗ, ಜೋಸ್ ಬಟ್ಲರ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಂದಹಾಗೆ ಆ ವರ್ಷ ಮುಂಬೈ ಇಂಡಿಯನ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ಮಿಂಚಿದ ಬಟ್ಲರ್, ರೋಹಿತ್ ಶರ್ಮಾ:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಪಂದ್ಯ ಎನಿಸಿಕೊಂಡಿತ್ತು. ಏಕೆಂದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಜಯಿಸಿದರೆ, ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡವು ಎರಡನೇ ಪಂದ್ಯ ಗೆದ್ದಿತ್ತು. ಹೀಗಾಗಿ ಲಾರ್ಡ್ಸ್‌ನಲ್ಲಿ ಆಯೋಜನೆಗೊಂಡ ಮೂರನೇ ಪಂದ್ಯದ ಮೇಲೆ ಸಾಕಷ್ಟು ಗಮನ ಕೇಂದ್ರೀಕೃತವಾಗಿತ್ತು. ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲವಾಗಿದ್ದ ರೋಹಿತ್ ಶರ್ಮಾ, ನಿರ್ಣಾಯಕ ಪಂದ್ಯದಲ್ಲಿ ಕೇವಲ 110 ಎಸೆತಗಳಲ್ಲಿ ಸ್ಪೋಟಕ 138 ರನ್ ಚಚ್ಚಿ ಗಮನ ಸೆಳೆದಿದ್ದರು. ಹೀಗಿದ್ದೂ ಟೀಂ ಇಂಡಿಯಾ, 27 ರನ್ ಅಂತರದ ಸೋಲು ಅನುಭವಿಸಿತ್ತು.
ಇದಕ್ಕೂ ಮೊದಲು ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಕೊನೆಯಲ್ಲಿ ಜೋಸ್ ಬಟ್ಲರ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಬಟ್ಲರ್ ಕೊನೆಯಲ್ಲಿ ಕೇವಲ 13 ಎಸೆತಗಳಲ್ಲಿ 41 ರನ್ ಸಿಡಿಸಿದ್ದು, ಪಂದ್ಯ ಟೀಂ ಇಂಡಿಯಾದಿಂದ ಕೈ ಜಾರುವಂತೆ ಮಾಡಿತ್ತು.


