ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದಿರುವ ಭಾರತ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದರೂ, ಎರಡನೇ ಪಂದ್ಯದಲ್ಲಿ ತಂಡದಲ್ಲಿ ಎರಡು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಸೂರ್ಯಾನ್ಶ್ ಶೆಡ್ಗೆ ಮತ್ತು ಹರ್ಷ್ ದುಬೆಗೆ ಅವಕಾಶ ಸಿಗುವ ನಿರೀಕ್ಷೆಯಿದೆ.
ಹರಾರೆ: ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಸತತ ಆರು ಪಂದ್ಯಗಳ ಸೋಲಿನ ಬಳಿಕ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಶ್ರೇಯಸ್ ಅಯ್ಯರ್ ಪಡೆ ಎರಡನೇ ಪಂದ್ಯವನ್ನು ಜಯಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಿರುವಾಗಲೇ ಮೊದಲ ಪಂದ್ಯದ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾದಲ್ಲಿ ಎರಡನೇ ಪಂದ್ಯದಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಜಿಂಬಾಬ್ವೆ ತಂಡವನ್ನು 125 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಇದಾದ ಬಳಿಕ ಈ ಗುರಿಯನ್ನು ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಇದೆಲ್ಲದರ ಹೊರತಾಗಿಯೂ ಶ್ರೇಯಸ್ ಅಯ್ಯರ್ ಹಾಗೂ ವಿವಿಎಸ್ ಲಕ್ಷ್ಮಣ್ ಜೋಡಿ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಇಬ್ಬರು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ.
1. ಸೂರ್ಯಾನ್ಶ್ ಶೆಡ್ಗೆಗೆ ಚಾನ್ಸ್:
ವೇಗದ ಬೌಲಿಂಗ್ ಆಲ್ರೌಂಡರ್ ಸೂರ್ಯಾನ್ಶ್ ಶೆಡ್ಗೆಗೆ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ಮೊದಲು ಸೂರ್ಯಾನ್ಶ್ ಶೆಡ್ಗೆ ಭಾರತ ಪರ ಎರಡು ಟಿ20 ಪಂದ್ಯಗಳನ್ನಾಡಿದ್ದಾರೆ. ಎರಡೂ ಪಂದ್ಯಗಳು ಸರಣಿಯ ಕೊನೆಯ ಪಂದ್ಯಗಳಾಗಿದ್ದವು. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಶೆಡ್ಗೆಗೆ ಎರಡನೇ ಪಂದ್ಯದಲ್ಲಿ ಸ್ಥಾನ ನೀಡುವ ಚಿಂತನೆಯಲ್ಲಿದೆ. ಶೆಡ್ಗೆಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದರೇ, ಶಿವಂ ದುಬೆಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಶಿವಂ ದುಬೆ ಟೀಂ ಇಂಡಿಯಾ ಪರ ಸತತವಾಗಿ ಕ್ರಿಕೆಟ್ ಆಡುತ್ತಿದ್ದು, ಅವರಿಗೆ ವಿಶ್ರಾಂತಿ ನೀಡಿ ಶೆಡ್ಗೆಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.
2. ಹರ್ಷ್ ದುಬೆ:
ಹರಾರೆ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ಇದೇ ಕಾರಣಕ್ಕಾಗಿ ಜಿಂಬಾಬ್ವೆ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸ್ಪಿನ್ ಆಲ್ರೌಂಡರ್ ಹರ್ಷ್ ದುಬೆಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಹರ್ಷ್ ದುಬೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದೀಗ ಟಿ20 ಮಾದರಿಯಲ್ಲಿ ಹರ್ಷ್ ದುಬೆ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ ಟೀಮ್ ಮ್ಯಾನೇಜ್‌ಮೆಂಟ್ ಅಕ್ಷರ್ ಪಟೇಲ್‌ಗೆ ಬ್ಯಾಕ್‌ಅಪ್ ಆಟಗಾರನ ಹುಡುಕಾಟದಲ್ಲಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಹರ್ಷ್ ದುಬೆಗೆ ಅವಕಾಶ ನೀಡಿ ಉಪನಾಯಕ ತಿಲಕ್ ವರ್ಮಾಗೆ ಗೇಟ್‌ಪಾಸ್ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಜಿಂಬಾಬ್ವೆ ಎದುರಿನ ಎರಡನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ:
ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಸೂರ್ಯಾನ್ಶ್ ಶೆಡ್ಗೆ, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್.


