Vanitha VR ಪುರುಷರ ಟಿ20ಗೆ ಮಹಿಳಾ ಕೋಚ್: ದೇಶದಲ್ಲೇ ಪ್ರಥಮ!
ರಾಜ್ಯದ ಮಹಾರಾಜ ಟಿ20 ಟೂರ್ನಿಯಲ್ಲಿ ಪ್ರಯೋಗ
ಶಿವಮೊಗ್ಗ ಲಯನ್ಸ್ ಪುರುಷರ ತಂಡಕ್ಕೆ ವನಿತಾ ಕೋಚ್
ಭಾರತದಲ್ಲಿ ಪುರುಷರ ಟಿ20 ತಂಡಕ್ಕೆ ಪ್ರಧಾನ ಕೋಚ್ ಆದ ಮೊದಲ ಮಹಿಳೆ
- ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಜು.25): ‘ಬದಲಾವಣೆ ಜಗದ ನಿಯಮ’ ಎನ್ನುತ್ತಾರೆ. ಇದಕ್ಕೆ ಕ್ರಿಕೆಟ್ ಕೂಡ ಹೊರತಲ್ಲ. ಕಾಲಕಾಲಕ್ಕೆ ಪರಿಷ್ಕರಣೆಯಾಗುತ್ತಿರುವ ‘ಜಂಟಲ್‌ಮ್ಯಾನ್ಸ್ ಗೇಮ್’ನಲ್ಲಿ ಇದೀಗ ಮಹಿಳಾ ಕ್ರಾಂತಿಯಾಗುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಹಿಳಾ ತಂಡಗಳಿಗೆ ಈಗಲೂ ಪುರುಷ ತರಬೇತುದಾರರು ಇದ್ದರೆ, ಕರ್ನಾಟಕದಲ್ಲೊಂದು ಗುಣಾತ್ಮಕ ಪ್ರಯೋಗ ನಡೆದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 2023ರ ಆವೃತ್ತಿಯಲ್ಲಿ ಶಿವಮೊಗ್ಗ ಲಯನ್ಸ್ (ಪುರುಷರ) ತಂಡಕ್ಕೆ ಭಾರತದ ಮಾಜಿ ಆಟಗಾರ್ತಿ, ರಾಜ್ಯದ ವಿ.ಆರ್.ವನಿತಾ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ!
ಇತ್ತೀಚೆಗಷ್ಟೇ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಲಿಕರು, ಇತರ ಸಹಾಯಕ ಸಿಬ್ಬಂದಿಯೊಂದಿಗೆ ಸೇರಿ ಬಲಿಷ್ಠ ತಂಡ ಕಟ್ಟಿರುವ ವನಿತಾ, ಆಗಸ್ಟ್ 13ರಿಂದ 29ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ವಿಶ್ವಾಸದಲ್ಲಿದ್ದಾರೆ.
Deodhar Trophy 2023: ಮಯಾಂಕ್, ವಿದ್ವತ್ ಅಬ್ಬರಕ್ಕೆ ತಬ್ಬಿಬ್ಬಾದ ಉತ್ತರ ವಲಯ..!
ಭಾರತದಲ್ಲಿ ಪುರುಷರ ಟಿ20 ತಂಡಕ್ಕೆ ಪ್ರಧಾನ ಕೋಚ್ ಆದ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಪಾತ್ರರಾಗಿರುವ ವನಿತಾ, ಜಾಗತಿಕ ಮಟ್ಟದಲ್ಲಿ (ಐಸಿಸಿಯಿಂದ ಮಾನ್ಯತೆ ಪಡೆದ ಟೂರ್ನಿಗಳನ್ನಷ್ಟೇ ಪರಿಗಣಿಸಲಾಗಿದೆ) ಈ ಹುದ್ದೆ ಅಲಂಕರಿಸಿದ 2ನೇ ಮಹಿಳೆ. ಅಬುಧಾಬಿ ಟಿ10 ಟೂರ್ನಿಯ ಅಬುಧಾಬಿ ತಂಡಕ್ಕೆ ಇಂಗ್ಲೆಂಡ್‌ನ ಮಾಜಿ ವಿಕೆಟ್ ಕೀಪರ್ ಸಾರಾ ಟೇಲರ್ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ಮೊದಲ ದಾಖಲೆ.
ತಮ್ಮ ನೇಮಕದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಖುಷಿ ಹಂಚಿಕೊಂಡ ವನಿತಾ, ‘ನಿವೃತ್ತಿ ಬಳಿಕ ಪುರುಷರ ತಂಡಕ್ಕೆ ಕೋಚ್ ಆಗಲು ಸಿದ್ಧತೆ ನಡೆಸಿದ್ದೆನಾದರೂ, ಈ ಅವಕಾಶ ಅನಿರೀಕ್ಷಿತ. ಶಿವಮೊಗ್ಗ ಹಾಗೂ ಮತ್ತೊಂದು ತಂಡದ ಬಳಿ ಸಹಾಯಕ ಕೋಚ್ ಹುದ್ದೆ ಕೇಳಿದ್ದೆ. ಶಿವಮೊಗ್ಗ ತಂಡದ ಮಾಲಿಕರು ನನ್ನನ್ನು ಮೊದಲು ಸಹಾಯಕ ಕೋಚ್ ಆಗಿ ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಆ ಬಳಿಕ ಪ್ರಧಾನ ಕೋಚ್ ಹುದ್ದೆ ಆಫರ್ ಮಾಡಿದಾಗ ಬಹಳ ಖುಷಿಯಾಯಿತು’ ಎಂದರು.
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ಅಭಿನವ್, ಮಯಾಂಕ್‌ಗೆ ಬಂಪರ್! ಯಾವ ಆಟಗಾರರು ಯಾವ ತಂಡಕ್ಕೆ?
ಪುರುಷರ ತಂಡಕ್ಕೆ ಕೋಚಿಂಗ್ ಮಾಡುವ ಸವಾಲಿನ ಕೆಲಸದ ಬಗ್ಗೆ ಭರವಸೆಯಿಂದಲೇ ಉತ್ತರಿಸಿದ ವನಿತಾ, ‘ನಾನು ಹಲವು ವರ್ಷಗಳಿಂದ ಪುರುಷರ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡುತ್ತಾ ಬಂದಿದ್ದೇನೆ. ಅದರಲ್ಲೂ ಕರ್ನಾಟಕ ಕ್ರಿಕೆಟ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಕ್ಲಬ್ ಕ್ರಿಕೆಟ್‌ನತ್ತಲೂ ನಾನು ಕಣ್ಣಿಟ್ಟಿದ್ದು, ಬಹುತೇಕ ಆಟಗಾರರ ಬಗ್ಗೆ ಗೊತ್ತಿದೆ. ಆರ್‌ಸಿಬಿ ಮಹಿಳಾ ತಂಡದ ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿರುವುದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದರು.
ವನಿತಾಗಿದೆ ಕೋಚಿಂಗ್ ಅನುಭವ:
ಕರ್ನಾಟಕ ಅಂಡರ್-16 ಬಾಲಕಿಯರ ತಂಡದ ಕೋಚ್ ಆಗಿರುವ ವನಿತಾ, ಐಪಿಎಲ್ನಲ್ಲಿ ಆರ್‌ಸಿಬಿ ತಂಡದ ಪರ ಸ್ಕೌಟಿಂಗ್(ಪ್ರತಿಭಾನ್ವೇಷಣೆ) ನಡೆಸುತ್ತಾರೆ. ಮಹಿಳಾ ಐಪಿಎಲ್ನಲ್ಲಿ ಆರ್‌ಸಿಬಿ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುವ ಅವರು, ಇತ್ತೀಚೆಗೆ ಆಸ್ಪ್ರೇಲಿಯಾಗೆ ತೆರಳಿ ಕೋಚಿಂಗ್ ಕೋರ್ಸ್ ಒಂದನ್ನು ಸಹ ಪೂರ್ತಿಗೊಳಿಸಿದ್ದಾರೆ.
ತಂಡದಲ್ಲಿರುವ ಹಲವರು ನನ್ನ ಆತ್ಮೀಯ ಸ್ನೇಹಿತರು!
ಶಿವಮೊಗ್ಗ ಲಯನ್ಸ್ ತಂಡ ಹರಾಜಿನಲ್ಲಿ ರಾಜ್ಯದ ತಾರಾ ಆಟಗಾರರಾದ ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್‌ರನ್ನು ಖರೀದಿಸಿದೆ. ತಾರಾ ಆಟಗಾರರ ನಿರ್ವಹಣೆ ಬಗ್ಗೆ ಮಾತನಾಡಿದ ವನಿತಾ, ‘ತಂಡದಲ್ಲಿರುವ ಬಹುತೇಕರು ನನ್ನ ಸ್ನೇಹಿತರು. ಅಭಿನವ್ ಸೇರಿ ಕೆಲವರೊಂದಿಗೆ ನಾನು ಕ್ರಿಕೆಟ್ ಆಡಿದ್ದೇನೆ. ಹೀಗಾಗಿ ಅವರ ಬಲಾಬಲದ ಬಗ್ಗೆ ಗೊತ್ತಿದೆ. ಈ ಹಂತದಲ್ಲಿ ಆಟಗಾರರಿಗೆ ಆಟದ ಬಗ್ಗೆ ಹೆಚ್ಚಾಗಿ ಹೇಳಿಕೊಡುವ ಅಗತ್ಯವೇನೂ ಇರುವುದಿಲ್ಲ. ಆಟಗಾರರ ನಿರ್ವಹಣೆ, ಮಾನಸಿಕವಾಗಿ ಅವರನ್ನು ಫಿಟ್ ಆಗಿಡುವುದು, ಪಂದ್ಯಗಳಿಗೆ ಬೇಕಿರುವ ರಣತಂತ್ರ ರೂಪಿಸುವುದು ಕೋಚ್ ಆಗಿ ನನ್ನ ಕೆಲಸ. ಕಳೆದ 2-3 ವರ್ಷದಲ್ಲಿ ಟಿ20 ಕ್ರಿಕೆಟ್ ದೊಡ್ಡ ಪ್ರಮಾಣದಲ್ಲಿ ಬದಲಾಗಿದೆ. ಹೀಗಾಗಿ ಬದಲಾವಣೆಗೆ ತಕ್ಕಂತೆ ಯಾರು ತಮ್ಮ ಆಟ ಬದಲಿಸಿಕೊಳ್ಳುತ್ತಾರೋ ಅವರಿಗೆ ಯಶಸ್ಸು ಸಿಗಲಿದೆ ಎನ್ನುವುದು ನನ್ನ ನಂಬಿಕೆ’ ಎಂದರು.
ಟೀಂ ಇಂಡಿಯಾ ಕೋಚ್ ಆಗುವಾಸೆ
ಮುಂದೊಂದು ದಿನ ಭಾರತ ತಂಡದ ಕೋಚ್ ಆಗಬೇಕು ಎನ್ನುವುದು ನನ್ನ ಕನಸು. ಅದಕ್ಕಾಗಿ ಬೇಕಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದೇನೆ. ಬೇರೆ ಬೇರೆ ಕೋಚ್‌ಗಳ ಜೊತೆ ಕೆಲಸ ಮಾಡಬೇಕು. ಅವರ ಕಾರ್ಯನಿರ್ವಹಣೆಯ ರೀತಿಗಳನ್ನು ನೋಡಿ ಕಲಿಯಬೇಕು ಎನ್ನುವ ಹಂಬಲವಿದೆ. ಆ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆ.
- ವಿ.ಆರ್.ವನಿತಾ, ಶಿವಮೊಗ್ಗ ತಂಡದ ಪ್ರಧಾನ ಕೋಚ್
ಮಹಿಳೆಯರು ಯಾಕೆ ಕೋಚ್ ಆಗ್ಬಾರ್ದು?
ಮಹಿಳೆಯರು ಯಾವ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೇಳಿ. ಹೀಗಿರುವಾಗ ಪುರುಷರ ತಂಡಕ್ಕೆ ಮಹಿಳೆಯೊಬ್ಬರು ಕೋಚ್ ಆಗುವುದರಲ್ಲಿ ಏನು ತಪ್ಪಿದೆ. ವನಿತಾ ಒಬ್ಬ ಆಟಗಾರ್ತಿಯಾಗಿ ಯಶಸ್ಸು ಕಂಡಿದ್ದಾರೆ. ಕೋಚಿಂಗ್‌ನಲ್ಲೂ ಅನುಭವ ಹೊಂದಿದ್ದಾರೆ. ನಮ್ಮ ಈ ಪ್ರಯತ್ನ ದೇಶ, ವಿದೇಶಗಳ ಇತರ ತಂಡಗಳಿಗೂ ಸ್ಫೂರ್ತಿಯಾಗಲಿದೆ ಎನ್ನುವ ವಿಶ್ವಾಸವಿದೆ.
- ಕುಮಾರ್, ಶಿವಮೊಗ್ಗ ತಂಡದ ಮಾಲಿಕ