ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್!
ಮಾಲ್ಡೀವ್ಸ್ ಸಚಿವರ ಹೇಳಿಕೆ, ನಿಂದನೆ ಬೆನ್ನಲ್ಲೇ ಭಾರತದ ಸೆಲೆಬ್ರೆಟಿಗಳು, ಕ್ರಿಕೆಟಿಗರು ಭಾರತದ ಲಕ್ಷದ್ವೀಪ ಸೇರಿದಂತೆ ಇತರ ಪ್ರವಾಸೋದ್ಯಮ ಕುರಿತು ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಇದೀಗ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಭಾರತದ ಸುಂದರ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ್ದಾರೆ. ವಿಶೇಷ ಅಂದರೆ ಸೆಹ್ವಾಗ್ , ಉಡುಪಿಯ ತ್ರಾಸಿ ಬೀಚ್ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ದೆಹಲಿ(ಜ.08) ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಖ್ಯಾತೆ ತೆಗೆದಿದೆ. ಪ್ರಧಾನಿ ಮೋದಿ ಹಾಗೂ ಭಾರತೀಯರ ನಿಂದಿಸಿದ ಮಾಲ್ಡೀವ್ಸ್ ಸಚಿವರು ವಜಾ ಆಗಿದ್ದರೂ ಆಕ್ರೋಶ ಮಾತ್ರ ತಣ್ಣಗಾಗುತ್ತಿಲ್ಲ. ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರು ಹಾಗೂ ಬಹುತೇಕ ಭಾರತೀಯರು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕರೆ ನೀಡಿದ್ದಾರೆ. ಜೊತೆಗೆ ಭಾರತದ ಅತ್ಯಂತ ಸುಂದರ ತಾಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ಸೇರಿದಂತೆ ಹಲವು ಪ್ರವಾಸಿ ತಾಣಗಳ ಕುರಿತು ಸೆಲೆಬ್ರೆಟಿಗಳು ಟ್ವೀಟ್ ಮಾಡಿದ್ದಾರೆ. ಇದೀಗ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕರ್ನಾಟಕದ ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ್ದಾರೆ.
ಭಾರತ ಹಾಗೂ ಪ್ರಧಾನಿ ಮೋದಿ ನಿಂದಿಸಿದ ಮಾಲ್ಡೀವ್ಸ್ ಸಚಿವರು ಹಾಗೂ ಮಾಲ್ಡೀವ್ಸ್ ಸರ್ಕಾರದ ವಿರುದ್ದ ಆಕ್ರೋಶ ತೀವ್ರಗೊಳ್ಳುತ್ತಿದೆ. ಇತ್ತ ಮಾಲ್ಡೀವ್ಸ್ ಮಾಜಿ ಅಧ್ಯಕ್ಷರು, ಪ್ರತಿ ಪಕ್ಷಗಳ ಸದಸ್ಯರು ಭಾರತೀಯರ ಬಳಿ ಕ್ಷಮೆಯಾಚಿಸುವಂತೆ ಮಾಲ್ಡೀವ್ಸ್ ಸರ್ಕಾರವನ್ನು ಆಗ್ರಹಿಸಿದೆ. ಇತ್ತ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದಾರೆ. ಇತ್ತ ವಿರೇಂದ್ರ ಸೆಹ್ವಾಗ್ ಭಾರತದ ಮೂರು ತಾಣಗಳ ಸುಂದರ ಬೀಚ್ ಕುರಿತು ಫೋಟೋ ಹಂಚಿಕೊಂಡಿದ್ದಾರೆ.
ಲಕ್ಷದ್ವೀಪ ಪ್ರವಾಸಕ್ಕೆ ಅನುಮತಿ ಪತ್ರ ಕಡ್ಡಾಯ, ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗಸೂಚಿ!
ಉಡುಪಿಯ ತ್ರಾಸಿ ಬೀಚ್, ಪಾಂಡಿಚೇರಿಯ ಪ್ಯಾರಡೈಸ್ ಬೀಚ್, ಅಂಡಮಾನ್ ನಿಕೋಬಾರ್‌ನ ನೈಲ್ ಹಾಗೂ ಹ್ಯಾವ್ಲಾಕ್ ಬೀಚ್ ಫೋಟೋಗಳನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಹಲವರು ಅನ್ವೇಷಿಸಿದ ಸ್ಥಳಗಳಿವೆ. ಈ ತಾಣಗಳಿಗೆ ಮೂಲಸೌಕರ್ಯ ಒದಗಿಸಿದರೆ ಯಾವುದಕ್ಕೂ ಕಡಿಮೆ ಇಲ್ಲ. ಪರಿಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸುವುದು ಭಾರತಕ್ಕೆ ತಿಳಿದಿದೆ. ಮಾಲ್ಡೀವ್ಸ್ ಸಚಿವರು ಭಾರತ ಹಾಗೂ ಪ್ರಧಾನ ಮಂತ್ರಿಯನ್ನು ನಿಂದಿಸಿರುವ ಈ ಸಂದರ್ಭವನ್ನು ಉತ್ತಮ ಅವಕಾಶವಾಗಿ ಬಳಸಿಕೊಂಡು ನಮ್ಮ ಸುಂದರ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ ನೀಡಿ ಆರ್ಥಿಕತೆಯ ವೇಗ ಹೆಚ್ಚಿಸಬೇಕಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲ ಸೆಹ್ವಾಗ್ ಉಡುಪಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉಡುಪಿ ನಿಜಕ್ಕೂ ಅದ್ಭುತ.ಅತ್ಯಂತ ಸುಂದರ ಕಡಲತೀರ, ಪ್ರಾಚೀನ ದೇವಾಲಯ ಹಾಗೂ ಅತ್ಯುತ್ತಮ ಆಹಾರದಿಂದ ಉಡುಪಿ ಅಚ್ಚುಮೆಚ್ಚು ಎಂದಿದ್ದಾರೆ.
ಮಾಲ್ಡೀವ್ಸ್ ಬುಕಿಂಗ್ ರದ್ದು; ಈಸ್ ಮೈ ಟ್ರಿಪ್‌ನಿಂದ ಚಲೋ ಆಯೋಧ್ಯೆ-ಲಕ್ಷದ್ವೀಪ ಆಫರ್ !
ಸೆಹ್ವಾಗ್ ಟ್ವೀಟ್ ಮಾಡಿದ ಬೆನ್ನಲ್ಲೇ ಹಲರು ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿ, ಕುಂದಾಪುರದ ಸುತ್ತಮುತ್ತಲಿನ ಅತ್ಯಂತ ಸುಂದರ ತಾಣಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಪ್ರಮುಖವಾಗಿ ಸೈಂಟ್ ಮೇರಿಸ್ ಐಲ್ಯಾಂಡ್, ಮೆಲ್ಪೆ ಬೀಚ್, ಮುರುಡೇಶ್ವರ ಸೇರಿದಂತೆ ಹಲವು ತಾಣಗಳ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ.