ವಿರಾಟ್ ಕೊಹ್ಲಿ ಬಂಧನಕ್ಕೆ ರೋಹಿತ್ ಶರ್ಮಾ ಫ್ಯಾನ್ಸ್ ಆಗ್ರಹಟಿ20 ವಿಶ್ವಕಪ್ ಟೂರ್ನಿಯ ಬೆನ್ನಲ್ಲೇ ಕೊಹ್ಲಿಗೆ ಶುರುವಾಯ್ತು ಹೊಸ ತಲೆನೋವುಫ್ಯಾನ್ಸ್‌ಗಳು ಮಾಡಿದ ಎಡವಟ್ಟಿಗೆ #ArrestKohli ಟ್ರೆಂಡಿಂಗ್
ಬೆಂಗಳೂರು(ಅ.15): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ಬಂದಿಳಿದಿದ್ದು, ಈಗಾಗಲೇ ಕಾಂಗರೂ ನಾಡಿನಲ್ಲಿ ಅಭ್ಯಾಸ ಮಾಡಲಾರಂಭಿಸಿದೆ. ಏಷ್ಯಾಕಪ್ ಟೂರ್ನಿಯ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿಯನ್ನು ಬಂಧಿಸಿ #ArrestKohli ಎನ್ನುವ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.
ಅರೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿರುವ ವಿರಾಟ್ ಕೊಹ್ಲಿಯನ್ನು ಬಂಧಿಸಲು ಅಷ್ಟಕ್ಕೂ ಅವರೇನು ತಪ್ಪು ಮಾಡಿದರು ಎನ್ನುವ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು. ಇನ್ನು #ArrestKohli ಎನ್ನುವ ಟ್ಯಾಗ್ ಟ್ವಿಟರ್‌ನಲ್ಲಿ ಯಾಕೆ ಟ್ರೆಂಡ್ ಆಗುತ್ತಿದೆ ಎಂದು ಸ್ವತಃ ವಿರಾಟ್ ಕೊಹ್ಲಿ ಅರಿವಿಗೂ ಬಂದಿಲ್ಲದೇ ಇರಬಹುದು. ಇದನ್ನು ಮಾಡುತ್ತಿರುವ ರೋಹಿತ್ ಶರ್ಮಾ ಅಭಿಮಾನಿಗಳು ಎನ್ನುವುದು ಮಾತ್ರ ಅಚ್ಚರಿಯಾದರೂ ಸತ್ಯ..!
ಅಷ್ಟಕ್ಕೂ ಆಗಿದ್ದೇನು..?
ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಸ್ನೇಹಿತರಿಬ್ಬರ ನಡುವೆ ನಡೆದ ಚರ್ಚೆ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ತಮಿಳುನಾಡಿನ ಅರಿಯಾಲೂರ್ ಜಿಲ್ಲೆಯಲ್ಲಿ ನಡೆದಿದೆ. ಆರ್‌ಸಿಬಿ ತಂಡವನ್ನು ಲೇವಡಿ ಮಾಡಿದ್ದ ಕಾರಣಕ್ಕಾಗಿ ಸ್ನೇಹಿತ ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮನ ಅಭಿಮಾನಿಯನ್ನು ಕೊಲೆ ಮಾಡಿದ್ದಾನೆ. ಕೊಲೆ ಆರೋಪಿಯನ್ನು ಈಗಾಗಲೇ ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯಪಾನ ಮಾಡಿಕೊಂಡು ಇಬ್ಬರೂ ಸ್ನೇಹಿತರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಕುರಿತಾಗಿ ಅಭಿಮಾನದಿಂದ ವಾಗ್ವಾದ ಮಾಡುತ್ತಿದ್ದರು. ವಾಗ್ವಾದ ವಿಕೋಪಕ್ಕೆ ತಿರುಗಿ ಧರ್ಮರಾಜ್ ತನ್ನ ಸ್ನೇಹಿತನಾಗಿದ್ದ ವಿಘ್ನೇಶ್ ಎನ್ನುವ ವ್ಯಕ್ತಿಯನ್ನು ಬಾಟಲಿಯಿಂದ ಹೊಡೆದು ಸಾಯಿಸಿದ್ದಾನೆ.
ಕ್ರಿಕೆಟ್‌ಗೂ ಕಾಲಿಡ್ತಾ ಸ್ಟಾರ್ ವಾರ್! ಆರ್‌ಸಿಬಿ ಲೇವಡಿ ಮಾಡಿದ ರೋಹಿತ್ ಅಭಿಮಾನಿಯ ಮರ್ಡರ್!
ಈ ಘಟನೆಯ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿಯನ್ನು ಬಂಧಿಸಿ ಎನ್ನುವ ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕೆ ಕೌಂಟರ್ ನೀಡುವ ಪ್ರಯತ್ನವನ್ನು ಕೊಹ್ಲಿ ಹಾಗೂ ಆರ್‌ಸಿಬಿ ಅಭಿಮಾನಿಗಳು ಮಾಡಿದ್ದಾರೆ.
ಓರ್ವ ನೆಟ್ಟಿಗ ವ್ಯಂಗ್ಯವಾಗಿ ಚೋಕ್ಲಿ ಅಭಿಮಾನಿಗಳು ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ ಎಂದು ಲೇವಡಿ ಮಾಡಿದ್ದಾರೆ. ಮತ್ತೋರ್ವ ನೆಟ್ಟಿಗ, ಈ ಅಪರಾಧ ಕೃತ್ಯವನ್ನು ಕೊಹ್ಲಿ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂದು ಮಾನವೀಯತೆ ಸತ್ತಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇನ್ನೋರ್ವ ನೆಟ್ಟಿಗ, ವಿರಾಟ್ ಕೊಹ್ಲಿ ಯಾವಾಗಲೂ ಆಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸುತ್ತಿದ್ದರು. ಹೀಗಾಗಿಯೇ ಅವರ ಅಭಿಮಾನಿಗಳು, ಇದನ್ನೇ ಅನುಸರಿಸಿ ಓರ್ವ ಅಮಾಯಕನನ್ನು ಹತ್ಯೆ ಮಾಡಿ ಅಪರಾಧ ಕೃತ್ಯ ಎಸಗಿದ್ದಾರೆ. ಹೀಗಾಗಿ ಕೊಹ್ಲಿಯನ್ನು ಕಂಬಿ ಹಿಂದೆ ಬಂಧಿಸಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಯಾವುದೇ ಅಭಿಮಾನ ಒಂದು ಜೀವ ತೆಗೆಯುವ ಹಂತಕ್ಕೆ ತಲುಪಿದ್ದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಐಪಿಎಲ್‌ನಲ್ಲಿ ಕಾದಾಡುವ ಇದೇ ಆಟಗಾರರು, ಟೀಂ ಇಂಡಿಯಾ ಪರ ಒಟ್ಟಿಗೆ ಕಣಕ್ಕಿಳಿಯುವ ಮೂಲಕ ದೇಶವೇ ಗರ್ವ ಪಡುವಂತಹ ರೀತಿಯಲ್ಲಿ ಆಡುತ್ತಿದ್ದಾರೆ. ಮೈದಾನದೊಳಗೆ ಹಾಗೂ ಮೈದಾನದಾಚೆಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ಒಳ್ಳೆಯ ಬಾಂದವ್ಯವಿದೆ. ಹೀಗಿದ್ದೂ, ಐಪಿಎಲ್ ವಿಚಾರವಾಗಿ ಅಭಿಮಾನಿಗಳ ನಡುವೆ ಅತಿರೇಕದ ಬಣಗಳಾಗಿ ಕಿತ್ತಾಡಿಕೊಳ್ಳುತ್ತಿರುವುದು ನಿಜಕ್ಕೂ ದುರಂತವೇ ಸರಿ.
