ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಪರ ಆಡಲಿರುವ ವಿರಾಟ್ ಕೊಹ್ಲಿಯ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಸುರಕ್ಷತಾ ಕಾರಣಗಳಿಂದಾಗಿ ಪಂದ್ಯವನ್ನು ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ಗೆ ಸ್ಥಳಾಂತರಿಸಲಾಗಿದೆ.

ಬೆಂಗಳೂರು: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯು ಇದೇ ಡಿಸೆಂಬರ್ 24ರಿಂದ ಆರಂಭವಾಗಲಿದೆ. ಈ ಬಾರಿಯ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಡೆಲ್ಲಿ ಕ್ರಿಕೆಟ್ ತಂಡದ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಡೆಲ್ಲಿ ಆಡಲಿರುವ ಕೆಲ ಪಂದ್ಯಗಳನ್ನು ನಗರದ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಮುಂದಾಗಿತ್ತು. ಇನ್ನು ವಿರಾಟ್ ಕೊಹ್ಲಿಯವರನ್ನು ಮತ್ತೊಮ್ಮೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಹೀಗಿರುವಾಗಲೇ ಅವರ ಫ್ಯಾನ್ಸ್‌ಗೆ ದೊಡ್ಡ ಶಾಕ್ ಎದುರಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿ ಆಟ ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳು ಇನ್ನೂ ಕೆಲ ಕಾಲ ಕಾಯಬೇಕಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸದ್ಯಕ್ಕಿಲ್ಲ ಕೊಹ್ಲಿ ಆಟ:

ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆರ್‌ಸಿಬಿ ಪಾಲಿಗೆ ಚಿನ್ನಸ್ವಾಮಿ ಸ್ಟೇಡಿಯಂ ತವರಿನ ಅಂಗಳವಾಗಿದ್ದು, ಕೊಹ್ಲಿಯ ಫೇವರೇಟ್‌ ಸ್ಟೇಡಿಯಂಗಳಲ್ಲಿ ಒಂದು ಎನಿಸಿಕೊಂಡಿದೆ. ಇಲ್ಲಿ ವಿರಾಟ್ ಕೊಹ್ಲಿ ಹಲವು ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಫ್ಯಾನ್ಸ್‌ಗೆ ಭರಪೂರ ಮನರಂಜನೆ ನೀಡಿದ್ದಾರೆ. ಆದರೆ 2025ರ ಆರ್‌ಸಿಬಿ ಐಪಿಎಲ್ ಚಾಂಪಿಯನ್‌ ಬೆನ್ನಲ್ಲೇ ದುರಾದೃಷ್ಟವಶಾತ್ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಮ್ಯಾಚ್ ಆಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿಲ್ಲ. ಇದೀಗ ರಾಜ್ಯ ಸರ್ಕಾರವು ಸೂಕ್ತ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಪಂದ್ಯ ಆಯೋಜನೆಗೆ ಅನುಮತಿ ನೀಡಿತ್ತು.

ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದು ಖಚಿತವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆಲೂರಿನಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಡೆಲ್ಲಿ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂಗೆ ಶಿಫ್ಟ್ ಮಾಡಿತ್ತು. ಇದಾದ ಬಳಿಕ ಈ ಪಂದ್ಯಕ್ಕೆ ಫ್ಯಾನ್ಸ್ ಎಂಟ್ರಿ ಬಂದ್ ಮಾಡಲಾಗಿದೆ ಎಂದು ವರದಿಯಾಗಿತ್ತು. ಇದೀಗ ಕ್ರಿಕ್‌ಬಝ್ ವರದಿಯ ಪ್ರಕಾರ, ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ಗೆ ಶಿಫ್ಟ್ ಮಾಡಲಾಗಿದೆ. ಕೊಹ್ಲಿ ಮೈದಾನಕ್ಕಿಳಿಯುತ್ತಿರುವುದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೆಚ್ಚಿನ ಫ್ಯಾನ್ಸ್ ಜಮಾವಣೆಯಾಗುವ ಸಾಧ್ಯತೆಯಿದ್ದು, ಸುರಕ್ಷತೆಯ ನೆಪವೊಡ್ಡಿ ಮ್ಯಾಚ್ ಚಿನ್ನಸ್ವಾಮಿ ಸ್ಟೇಡಿಯಂನಿಂದ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

ವಿಜಯ್ ಹಜಾರೆ ಟೂರ್ನಿಯಲ್ಲಿ ಎಷ್ಟು ಮ್ಯಾಚ್ ಆಡ್ತಾರೆ ಕೊಹ್ಲಿ?

2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಡೆಲ್ಲಿ ಪರ ಕೇವಲ ಎರಡು ಪಂದ್ಯಗಳನ್ನು ಅಡಲಿದ್ದಾರೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ಡಿಸೆಂಬರ್ 24ರಂದು ಆಂಧ್ರ ಪ್ರದೇಶ ಎದುರು ಮೊದಲ ಪಂದ್ಯವನ್ನು ಆಡಲಿದ್ದಾರೆ ಎನ್ನುವುದನ್ನು ತಂಡದ ಕೋಚ್ ಸರಣ್‌ದೀಪ್ ಸಿಂಗ್ ಖಚಿತಪಡಿಸಿದ್ದಾರೆ. ಇದಾದ ಬಳಿಕ ಡಿಸೆಂಬರ್ 26ರಂದು ಗುಜರಾತ್ ಎದುರಿನ ಪಂದ್ಯದಲ್ಲೂ ಕೊಹ್ಲಿ ಡೆಲ್ಲಿ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಎರಡೂ ಪಂದ್ಯಗಳು ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

15 ವರ್ಷಗಳ ಬಳಿಕ ಡೆಲ್ಲಿ ಪರ ವಿಜಯ್ ಹಜಾರೆ ಟೂರ್ನಿ ಆಡಲಿರುವ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ಡೆಲ್ಲಿ ಪರ ವಿಜಯ್‌ ಹಜಾರೆ ಟ್ರೋಫಿ ಆಡಲು ರೆಡಿಯಾಗಿದ್ದಾರೆ. ಅವರು 2010ರಲ್ಲಿ ಸರ್ವಿಸಸ್‌ ವಿರುದ್ಧ ಕೊನೆ ಬಾರಿ ವಿಜಯ್‌ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ವರ್ಷ ಡೆಲ್ಲಿ ಪರ ರಣಜಿ ಪಂದ್ಯ ಆಡಿದ್ದರು.