* ವೆಸ್ಟ್ ಇಂಡೀಸ್ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್, ಜೈಸ್ವಾಲ್, ಕೊಹ್ಲಿ* ಶತಕದತ್ತ ದಾಪುಗಾಲು ಹಾಕುತ್ತಿರುವ ವಿರಾಟ್ ಕೊಹ್ಲಿ* ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಬಾರಿಸಿದ ಭಾರತ

ಪೋರ್ಟ್‌ ಆಫ್‌ ಸ್ಪೇನ್‌(ಜು.21): ವಿಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಜಯ ಸಾಧಿಸಿದ್ದ ಭಾರತ, 2ನೇ ಟೆಸ್ಟ್‌ ಪಂದ್ಯದಲ್ಲೂ ಭರ್ಜರಿ ಆರಂಭ ಪಡೆದಿದೆ. ಟಾಸ್ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಟೀಂ ಇಂಡಿಯಾಗೆ ನಾಯಕ ರೋಹಿತ್‌ ಶರ್ಮಾ ಹಾಗೂ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ಆಸರೆಯಾದರು. ಆರಂಭಿಕ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ ಭರ್ಜರಿ ಇನಿಂಗ್ಸ್‌ ಆಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ, 4 ವಿಕೆಟ್ ಕಳೆದುಕೊಂಡು 288 ರನ್ ಬಾರಿಸಿದೆ. 

ಇನ್ನಿಂಗ್ಸ್‌ನ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಇವರಿಬ್ಬರು 10-12 ಓವರ್‌ ಬಳಿಕ ಆಕ್ರಮಣಕಾರಿ ಆಟಕ್ಕಿಳಿದರು. ಮೊದಲು ರೋಹಿತ್‌ ಅರ್ಧಶತಕ ಪೂರೈಸಿದರೆ, ಆನಂತರ ಜೈಸ್ವಾಲ್‌ ಸಹ ಅರ್ಧಶತಕ ಬಾರಿಸಿ ಆಟ ಮುಂದುವರಿಸಿದರು. ಇವರಿಬ್ಬರೂ ಮೊದಲ ಟೆಸ್ಟ್‌ನಲ್ಲೂ ಶತಕದ ಜೊತೆಯಾಟವಾಡಿದ್ದಲ್ಲದೇ, ವೈಯಕ್ತಿಕ ಶತಕಗಳನ್ನೂ ದಾಖಲಿಸಿದ್ದರು. ಮೊದಲ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ 26 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 121 ರನ್‌ ಕಲೆಹಾಕಿತು. ರೋಹಿತ್‌ ಹಾಗೂ ಜೈಸ್ವಾಲ್‌ ಮೊದಲ ಅವಧಿಯಲ್ಲೇ ಒಟ್ಟು 13 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು.

WI vs IND ಭಾರತಕ್ಕೆ ಸರಣಿ ವೈಟ್‌ವಾಶ್‌ ಗುರಿ, 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್!

ಜೈಸ್ವಾಲ್‌ಗೆ ಜೀವದಾನ: ವಿಂಡೀಸ್‌ ಬೌಲರ್‌ಗಳು ಯಾವುದೇ ಹಂತದಲ್ಲೂ ಭಾರತೀಯರ ಮೇಲೆ ಮೇಲುಗೈ ಸಾಧಿಸದಿದ್ದರೂ, ಕೆಲ ಬೌಲರ್‌ಗಳ ಒಂದೆರಡು ಸ್ಪೆಲ್‌ಗಳು ಗಮನ ಸೆಳೆದವು. ಭೋಜನ ವಿರಾಮಕ್ಕೂ ಮುನ್ನ ಕೊನೆಯ ಓವರ್‌ನಲ್ಲಿ ವಿಂಡೀಸ್‌ಗೆ ಮೊದಲ ವಿಕೆಟ್‌ ಕಬಳಿಸುವ ಅವಕಾಶವಿತ್ತು. ಜೇಸನ್‌ ಹೋಲ್ಡರ್‌ರ ಎಸೆತವನ್ನು ಜೈಸ್ವಾಲ್‌ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದಾಗ ಚೆಂಡು ಅವರ ಬ್ಯಾಟ್‌ಗೆ ಸವರಿಕೊಂಡು ಸ್ಲಿಪ್ಸ್‌ನತ್ತ ಸಾಗಿತು. ಆದರೆ ಮೊದಲ ಸ್ಲಿಪ್‌ನಲ್ಲಿದ್ದ ಅಥನಾಜ್‌ ಕ್ಯಾಚ್‌ ಕೈಚೆಲ್ಲಿ, ಜೈಸ್ವಾಲ್‌ಗೆ ಜೀವದಾನ ನೀಡಿದರು.

Scroll to load tweet…

ಅಂತಿಮವಾಗಿ ಯಶಸ್ವಿ ಜೈಸ್ವಾಲ್‌ 74 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 57 ರನ್‌ ಬಾರಿಸಿ ಜೇಸನ್ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಆಕರ್ಷಕ ಬ್ಯಾಟಿಂಗ್ ಮೂಲಕ ಶತಕದತ್ತ ದಾಪುಗಾಲಿಡುತ್ತಿದ್ದ ನಾಯಕ ರೋಹಿತ್ ಶರ್ಮಾ 80 ರನ್ ಬಾರಿಸಿದ್ದಾರೆ ವಾರಿಕನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಕ್ರೀಸ್‌ಗಿಳಿದ ಶುಭ್‌ಮನ್‌ ಗಿಲ್ ಕೇವಲ 10 ರನ್‌ ಬಾರಿಸಿ ಕೀಮರ್‌ ರೋಚ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇನ್ನು ಉಪನಾಯಕ ಅಜಿಂಕ್ಯ ರಹಾನೆ(08) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

ಮುಂಬೈ ಪ್ಲೇಯರ್ಸ್ ಬಳಿಯಿದೆ ಅದ್ಭುತ ಟಾಲೆಂಟ್, ಆದ್ರೆ ಮುಂಬೈಕರ್ಸ್ ಬಳಿಯಿಲ್ಲ ಉತ್ತಮ ಫಿಟ್ನೆಸ್..!

ಶತಕದತ್ತ ಕೊಹ್ಲಿ ದಾಪುಗಾಲು: 182 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಒಂದು ಕ್ಷಣ ತಬ್ಬಿಬ್ಬಾದ ಭಾರತ ತಂಡಕ್ಕೆ 5ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಮುರಿಯದ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಆಕರ್ಷಕ ಬ್ಯಾಟಿಂಗ್ ನಡೆಸುತ್ತಿರುವ ವಿರಾಟ್ ಕೊಹ್ಲಿ, 161 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 87 ರನ್‌ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಶತಕ ಬಾರಿಸಲು ಕೇವಲ 13 ರನ್ ದೂರದಲ್ಲಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿರುವ ರವೀಂದ್ರ ಜಡೇಜಾ 36 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.

ಶಾರ್ದೂಲ್‌ಗೆ ಗಾಯ: ಮುಕೇಶ್‌ ಪಾದಾರ್ಪಣೆ

ಬೌಲಿಂಗ್ ಆಲ್ರೌಂಡರ್‌ ಶಾರ್ದೂಲ್‌ ಠಾಕೂರ್‌ ಪಂದ್ಯಕ್ಕೂ ಮುನ್ನ ತೊಡೆ ಗಾಯಕ್ಕೆ ತುತ್ತಾದ ಕಾರಣ 2ನೇ ಟೆಸ್ಟ್‌ನಿಂದ ಅವರು ಹೊರಬಿದ್ದರು. ಅವರ ಬದಲು ಬಿಹಾರ ಮೂಲದ, ದೇಸಿ ಕ್ರಿಕೆಟಲ್ಲಿ ಬಂಗಾಳವನ್ನು ಪ್ರತಿನಿಧಿಸುವ ಮುಕೇಶ್‌ ಕುಮಾರ್‌ಗೆ ಸ್ಥಾನ ನೀಡಲಾಯಿತು. ಮುಕೇಶ್‌ ಭಾರತ ಪರ ಟೆಸ್ಟ್‌ ಕ್ರಿಕೆಟ್‌ ಆಡುತ್ತಿರುವ 308ನೇ ಆಟಗಾರ.

500 ಅಂ.ರಾ. ಪಂದ್ಯ:ವಿರಾಟ್‌ ಮೈಲಿಗಲ್ಲು!

ಪೋರ್ಟ್‌ ಆಫ್‌ ಸ್ಪೇನ್‌: ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್‌ ಕೊಹ್ಲಿ 500 ಅಂತಾರಾಷ್ಟ್ರೀಯ ಪಂದ್ಯಗಳ ಮೈಲಿಗಲ್ಲು ತಲುಪಿದ್ದಾರೆ. ವಿಂಡೀಸ್‌ ವಿರುದ್ಧ ಗುರುವಾರ ಆರಂಭಗೊಂಡ 2ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್‌ ಈ ಸಾಧನೆಗೈದರು. 500 ಪಂದ್ಯಗಳನ್ನಾಡಿದ ಭಾರತದ 4ನೇ ಹಾಗೂ ವಿಶ್ವದ 10ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಸಚಿನ್‌ ತೆಂಡುಲ್ಕರ್‌ 664 ಪಂದ್ಯಗಳನ್ನಾಡಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಹೇಲಾ ಜಯವರ್ಧನೆ 652 ಪಂದ್ಯವಾಡಿ 2ನೇ ಸ್ಥಾನ ಪಡೆದಿದ್ದಾರೆ. ಲಂಕಾದ ಕುಮಾರ ಸಂಗಕ್ಕರ 594 ಪಂದ್ಯಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. 500 ಪಂದ್ಯವಾಡಿದ ಭಾರತೀಯರ ಪಟ್ಟಿಯಲ್ಲಿ ಎಂ.ಎಸ್‌.ಧೋನಿ(538 ಪಂದ್ಯ) ಹಾಗೂ ರಾಹುಲ್‌ ದ್ರಾವಿಡ್‌(509 ಪಂದ್ಯ) ಇದ್ದಾರೆ.