2008ರ ಐಪಿಎಲ್ ಹರಾಜಿನಲ್ಲಿ ದೆಹಲಿ ತಂಡ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿದಾಗ ಆರ್ಸಿಬಿ ಅವರನ್ನು ಖರೀದಿಸಿ ಬೆಂಬಲಿಸಿತು. ಅಂದಿನಿಂದ ಇಂದಿನವರೆಗೂ ಒಂದೇ ಫ್ರಾಂಚೈಸಿಗೆ ನಿಷ್ಠರಾಗಿರುವ ಕೊಹ್ಲಿ, ಬೆಂಗಳೂರನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ್ದಾರೆ. ಆರ್ಸಿಬಿ ನೀಡಿದ ಬೆಂಬಲ ಮತ್ತು ನಾಯಕತ್ವವೇ ಅವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಅದು 2008ರ ಚೊಚ್ಚಲ ಐಪಿಎಲ್ ಹರಾಜು, ಐಪಿಎಲ್ ಅಂಡರ್-19 ಆಟಗಾರರ ಡ್ರಾಫ್ಟ್ನಲ್ಲಿ ಅಂದಿನ ಡೆಲ್ಲಿ ಡೇರ್ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡಕ್ಕೆ ಸ್ಥಳೀಯ ಹುಡುಗನಾಗಿದ್ದ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲ ಅವಕಾಶವಿತ್ತು. ಆದರೆ, ದೆಹಲಿ ಫ್ರಾಂಚೈಸಿಯು ಕೊಹ್ಲಿಯನ್ನು ಕಡೆಗಣಿಸಿ, ಬೌಲರ್ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡಿತು. ಅಂದೇ ಆತನ ಪ್ರತಿಭೆ ಗುರುತಿಸಿದ್ದ ಆರ್ಸಿಬಿ 12 ಲಕ್ಷದ ಮೂಲ ಬೆಲೆಗೆ ವಿರಾಟ್ ಕೊಹ್ಲಿಯನ್ನು ಖರೀದಿಸಿತ್ತು. ಅಂದಿನ ನಂಬಿಕೆಗೆ ಇಂದಿಗೂ ಋಣಿಯಾಗಿದ್ದಾರೆ ಕೊಹ್ಲಿ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಕೈಹಿಡಿದ ಕನ್ನಡದ ಕರ್ಮಭೂಮಿ ಮತ್ತು ಆರ್ಸಿಬಿ ನಂಬಿಕೆ!
ದೆಹಲಿ ಕೈಬಿಟ್ಟ ತಕ್ಷಣವೇ ಕೊಹ್ಲಿಯಲ್ಲಿದ್ದ ಪ್ರತಿಭೆ ಗುರುತಿಸಿ, ಕೇವಲ 12 ಲಕ್ಷ ರೂ.,ಗಳ ಮೂಲ ಬೆಲೆಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಅಂದಿನಿಂದ ಇಂದಿನವರೆಗೂ (2008 ರಿಂದ 2026ರ ಐಪಿಎಲ್ ರಿಟೆನ್ಶನ್ ವರೆಗೆ ಸತತ 19 ಸೀಸನ್) ಕೊಹ್ಲಿಯನ್ನು ಆರ್ಸಿಬಿ ಎಂದಿಗೂ ಕೈಬಿಡಲಿಲ್ಲ. ಏಕೆಂದರೆ, ಅವರ ಸ್ಥಿರತೆ, ಆ ರನ್ ಮಷಿನ್ ಆಟ, ಅವರ ಪ್ರತಿಭೆ ಗುರುತಿಸಿದ್ದ ಆರ್ಸಿಬಿ ಮುಂದೆಂದು ಅವರನ್ನು ಬಿಟ್ಟುಕೊಡಲಿಲ್ಲ, ಇದು ಇತಿಹಾಸ.
ಒಂದೇ ತಂಡಕ್ಕೆ ನಿಷ್ಠೆ; ಐಪಿಎಲ್ ಇತಿಹಾಸದ ದಾಖಲೆ!
ಐಪಿಎಲ್ ಇತಿಹಾಸದಲ್ಲಿ ಹರಾಜಿಗೆ ಹೋಗದೆ, ಆರಂಭದಿಂದಲೂ ಒಂದೇ ಫ್ರಾಂಚೈಸಿಗಾಗಿ ಆಡುತ್ತಿರುವ ಏಕೈಕ ವಿಶ್ವದರ್ಜೆಯ ಆಟಗಾರ ವಿರಾಟ್ ಕೊಹ್ಲಿ. ವಿಶ್ವದ ದೊಡ್ಡ ದೊಡ್ಡ ಫ್ರಾಂಚೈಸಿಗಳು ಕೋಟಿ ಕೋಟಿ ಆಫರ್ ನೀಡಿದರೂ, ತನಗೆ ಬದುಕು ಕೊಟ್ಟ ಆರ್ಸಿಬಿ ಮತ್ತು ಕರ್ನಾಟಕವನ್ನು ಕೊಹ್ಲಿ ತೊರೆಯಲಿಲ್ಲ. ವಿರಾಟ್ ಕೊಹ್ಲಿ ಅವರೇ ಹಲವು ಸಂದರ್ಶನಗಳಲ್ಲಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ: "ಮೊದಲ ಸೀಸನ್ನಲ್ಲಿ ಆರ್ಸಿಬಿ ನನ್ನನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ನನ್ನ ಬದುಕು ಏನಾಗುತ್ತಿತ್ತೋ ತಿಳಿಯದು. ಆರ್ಸಿಬಿ ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಸದಾ ಋಣಿ" ಎಂದು ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ಬೆಂಗಳೂರು ತನಗೆ ಎರಡನೇ ಮನೆಯಲ್ಲ, ಅದುವೇ ತನ್ನ ಸ್ವಂತ ಮನೆ ಎಂದು ಕೊಹ್ಲಿ ಹಲವು ಬಾರಿ ಕನ್ನಡಿಗರನ್ನು ಕೊಂಡಾಡಿದ್ದಾರೆ.
ಕನ್ನಡಿಗರ ಒಡಲಾಳದ ಪ್ರೀತಿ ಮತ್ತು 'ಕಿಂಗ್' ಪಟ್ಟ!
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಕ್ರೀಸ್ಗೆ ಬಂದಾಗ ಸಿಗುವ ಜೈಕಾರ ಜಗತ್ತಿನ ಬೇರೆಲ್ಲೂ ಸಿಗುವುದಿಲ್ಲ. ದೆಹಲಿಯ ಹುಡುಗನಿಗೆ 'ಕಿಂಗ್ ಕೊಹ್ಲಿ' ಎಂಬ ಬಿರುದು ನೀಡಿ, ತಮ್ಮ ಮನೆಯ ಮಗನಂತೆ ಸಾಕಿ ಸನ್ಮಾನಿಸಿದ್ದು ಕನ್ನಡಿಗರ ಹೆಮ್ಮೆಯ ಅಭಿಮಾನ. ವಿರಾಟ್ ಕೊಹ್ಲಿ ಕೇವಲ ಇಲ್ಲಿ ಕ್ರಿಕೆಟ್ ಆಡಲಿಲ್ಲ, ಬದಲಿಗೆ ಕನ್ನಡಿಗರ ಹೃದಯ ಗೆದ್ದರು. ಪ್ರೆಸ್ ಕಾನ್ಫರೆನ್ಸ್ಗಳಲ್ಲಿ ಮತ್ತು ಆರ್ಸಿಬಿ ಕಾರ್ಯಕ್ರಮಗಳಲ್ಲಿ "ಈ ಸಲ ಕಪ್ ನಮ್ದೆ" ಎಂದು ಕನ್ನಡದಲ್ಲೇ ಹೇಳುವ ಮೂಲಕ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಗೆ ಅಪಾರ ಗೌರವ ನೀಡಿದ್ದಾರೆ. ಜನ್ಮಭೂಮಿಯ ಭಾಷೆಗಿಂತಲೂ ಹೆಚ್ಚಾಗಿ ಕರ್ಮಭೂಮಿಯ ಭಾಷೆಯಾದ ಕನ್ನಡವನ್ನು ಅವರು ತಮ್ಮ ಯಶಸ್ಸಿನ ಮಂತ್ರವಾಗಿಸಿಕೊಂಡರು.
ನಾಯಕತ್ವದ ಜವಾಬ್ದಾರಿ ನೀಡಿ ಬೆಳೆಸಿದ ಕರ್ಮಭೂಮಿ!
ಕೇವಲ ಬ್ಯಾಟರ್ ಆಗಿದ್ದ ಕೊಹ್ಲಿಯನ್ನು ನಂಬಿ, 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅವರಿಗೆ ಪೂರ್ಣ ಪ್ರಮಾಣದ ನಾಯಕತ್ವದ ಜವಾಬ್ದಾರಿಯನ್ನು ನೀಡಿತು. ಆರ್ಸಿಬಿ ನೀಡಿದ ಈ ನಾಯಕತ್ವದ ಅನುಭವ ಮತ್ತು ಆತ್ಮವಿಶ್ವಾಸವೇ ಮುಂದೆ ಅವರು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಲು ಬಲವಾದ ಅಡಿಪಾಯ ಹಾಕಿಕೊಟ್ಟಿತು. ಕೊಹ್ಲಿ ಅವರು ಇತ್ತೀಚಿನ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಗಳ ಸಮಯದಲ್ಲೂ ಸೇರಿ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ನಾನು ಐಪಿಎಲ್ನಲ್ಲಿ ಆಡುವ ಕೊನೆಯ ದಿನದವರೆಗೂ ಆರ್ಸಿಬಿ ಪರವಾಗಿಯೇ ಆಡುತ್ತೇನೆ. ಜನ್ಮಭೂಮಿ ದೆಹಲಿ ತನಗೆ ನೀಡದ ಗೌರವ ಮತ್ತು ಸ್ಥಾನಮಾನವನ್ನು ಕರ್ಮಭೂಮಿ ಕರ್ನಾಟಕ ನೀಡಿದ್ದರಿಂದ, ಅವರು ತಮ್ಮ ಕ್ರಿಕೆಟ್ ಬದುಕಿನ ಕೊನೆಯವರೆಗೂ ಈ ಮಣ್ಣಿಗೆ ನಿಷ್ಠರಾಗಿರಲು ನಿರ್ಧರಿಸಿದ್ದಾರೆ.






