ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ರೆಡ್ಡಿಟ್ ಸಂವಾದದಲ್ಲಿ ತಮ್ಮ ನಾಯಕತ್ವದ ಅನುಭವ, ನೆಚ್ಚಿನ ನಾಯಕರು ಮತ್ತು ಯುವ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಧೋನಿ ಮತ್ತು ಗಂಗೂಲಿ ತಮ್ಮ ನೆಚ್ಚಿನ ನಾಯಕರು ಎಂದು ಹೇಳಿರುವ ಅವರು, ಯುವ ಆಟಗಾರರಿಗೆ ಆತುರದಲ್ಲಿ ಜವಾಬ್ದಾರಿ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು(ನ.05): ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಹಲವು ಮಹತ್ವದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಭಾರತ ತಂಡದ ನಾಯಕನಾಗಿದ್ದಾಗಿನ ಅನುಭವ, ತಮಗೆ ಇಷ್ಟವಾದ ನಾಯಕರು ಹಾಗೂ ಯುವ ಆಟಗಾರರಿಗೆ ನೀಡಲಾಗುತ್ತಿರುವ ಜವಾಬ್ದಾರಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ರೆಡ್ಡಿಟ್ನಲ್ಲಿ ನಡೆದ 'ಆಸ್ಕ್ ಮಿ ಎನಿಥಿಂಗ್' (Ask Me Anything) ಸಂವಾದದಲ್ಲಿ ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಭಾರತ ತಂಡದ ಪರ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಆಡಿದ್ದು, ಬರೋಬ್ಬರಿ 24 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನ ಹೊಂದಿದ್ದಾರೆ. 1989ರ ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು, 2013ರ ನವೆಂಬರ್ 16ರಂದು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಈ ಅವಧಿಯಲ್ಲಿ 1990ರ ದಶಕದಲ್ಲಿ ಎರಡು ಪ್ರತ್ಯೇಕ ಅವಧಿಗಳಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು. ಆದರೆ, ನಾಯಕನಾಗಿ ಅವರ ದಾಖಲೆ ಅಷ್ಟೊಂದು ಯಶಸ್ವಿಯಾಗಿರಲಿಲ್ಲ.
ನಾಯಕನಾಗಿದ್ದಾಗ ಆಡುವ 11ರ ಬಳಗ ಆಯ್ಕೆ ಮಾಡುವ ಸ್ವಾತಂತ್ರ್ಯವೂ ಇರಲಿಲ್ಲ!
ತಮ್ಮ ನಾಯಕತ್ವದ ಅನುಭವವನ್ನು ಮೆಲುಕು ಹಾಕಿದ ಸಚಿನ್, ಭಾರತ ತಂಡವನ್ನು ಮುನ್ನಡೆಸುವುದು ತಮಗೆ ಅಪಾರ ಹೆಮ್ಮೆಯ ವಿಷಯವಾಗಿತ್ತು ಎಂದು ಹೇಳಿದ್ದಾರೆ. ಆದರೆ, ನಾಯಕನಾಗಿದ್ದಾಗಲೂ ಎಲ್ಲ ಸಂದರ್ಭಗಳಲ್ಲಿ ಆಡುವ 11ರ ಬಳಗವನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ತಮಗಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. 1990ರ ದಶಕದಲ್ಲಿ ಭಾರತೀಯ ಕ್ರಿಕೆಟ್ ಹಲವು ಸವಾಲಿನ ಪರಿಸ್ಥಿತಿಗಳನ್ನು ಎದುರಿಸಿತ್ತು ಎಂದೂ ಅವರು ನೆನಪಿಸಿಕೊಂಡಿದ್ದಾರೆ. ಅಂದಿನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂದಿನ ಬಿಸಿಸಿಐ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪ್ರಸ್ತುತ ಬಿಸಿಸಿಐ ಹೆಚ್ಚು ವೃತ್ತಿಪರ ಸಂಸ್ಥೆಯಾಗಿ ಬೆಳೆದಿದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ಏನ್ ಬೇಕಾದ್ರೂ ಕೇಳಿ ಎಂದು ಸಚಿನ್ ಅಚ್ಚರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಧೋನಿ, ಗಂಗೂಲಿ ನನ್ನ ನೆಚ್ಚಿನ ನಾಯಕರು ಎಂದ ಸಚಿನ್!
ಭಾರತದ ನೆಚ್ಚಿನ ನಾಯಕರನ್ನು ಹೆಸರಿಸುವಂತೆ ಕೇಳಿದಾಗ ಸಚಿನ್ ತೆಂಡೂಲ್ಕರ್ ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ಅವರ ಹೆಸರನ್ನು ಹೇಳಿದ್ದಾರೆ. ಈ ಇಬ್ಬರೂ ನಾಯಕರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸಚಿನ್ ಅವರ ಕ್ರಿಕೆಟ್ ಜೀವನದಲ್ಲೂ ವಿಶೇಷ ನಂಟು ಹೊಂದಿದ್ದಾರೆ.
ಧೋನಿ ನಾಯಕತ್ವದಲ್ಲೇ ಸಚಿನ್ ತೆಂಡೂಲ್ಕರ್ ಅವರ ಬಹು ವರ್ಷಗಳ ಕನಸಾದ ಏಕದಿನ ವಿಶ್ವಕಪ್ ಗೆಲುವು ನನಸಾಗಿತ್ತು. 2011ರಲ್ಲಿ ಭಾರತ ತಂಡ ತವರಿನಲ್ಲೇ ವಿಶ್ವಕಪ್ ಗೆದ್ದಾಗ ಸಚಿನ್ ತಂಡದ ಪ್ರಮುಖ ಆಟಗಾರರಾಗಿದ್ದರು. ಇನ್ನು ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ 2003ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಆ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಸರಣಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು.
ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ನಾಯಕತ್ವಕ್ಕೂ ಸಚಿನ್ ಮೆಚ್ಚುಗೆ
ಭಾರತದ ನಾಯಕರ ಬಗ್ಗೆ ಮಾತನಾಡುವುದರ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರ ನಾಯಕತ್ವದ ಗುಣಗಳನ್ನೂ ಸಚಿನ್ ತೆಂಡೂಲ್ಕರ್ ಪ್ರಶಂಸಿಸಿದ್ದಾರೆ. ಬವುಮಾ ಅವರ ಹೋರಾಟದ ಮನೋಭಾವವನ್ನು ಮೆಚ್ಚಿಕೊಂಡಿರುವ ಸಚಿನ್, ಬಲಗೈ ಬ್ಯಾಟರ್ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ಗೆ ಗಮನಾರ್ಹ ಯಶಸ್ಸು ತಂದುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಐಸಿಸಿ ಪ್ರಶಸ್ತಿ ಗೆದ್ದಿರುವುದನ್ನೂ ಅವರು ಸ್ವಾಗತಿಸಿದ್ದಾರೆ. ವಿಶ್ವ ಕ್ರಿಕೆಟ್ನ ದೃಷ್ಟಿಯಿಂದ ಇದು ಸಕಾರಾತ್ಮಕ ಬೆಳವಣಿಗೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ತೆಂಬಾ ಬವುಮಾ ನಾಯಕತ್ವದಲ್ಲಿ 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ತೆಂಬಾ ಬವುಮಾ ನಾಯಕತ್ವದಲ್ಲೇ ಆಸ್ಟ್ರೇಲಿಯಾವನ್ನು ಸೋಲಿಸಿ ದಶಕಗಳ ಬಳಿಕ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು.
ವೈಭವ್ ಸೂರ್ಯವಂಶಿಗೆ ನಾಯಕತ್ವದ ಜವಾಬ್ದಾರಿ ನೀಡುವುದು ಆತುರದ ನಿರ್ಧಾರ?
ರೆಡ್ಡಿಟ್ ಸಂವಾದದಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಸಂಬಂಧಿಸಿದ್ದಾಗಿತ್ತು. 2026ರ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯದ ಉಪನಾಯಕನನ್ನಾಗಿ ವೈಭವ್ ಅವರನ್ನು ನೇಮಿಸಿರುವ ನಿರ್ಧಾರದ ಬಗ್ಗೆ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನ ಆಟಗಾರನಿಗೆ ಈ ಹಂತದಲ್ಲೇ ದೊಡ್ಡ ಜವಾಬ್ದಾರಿ ನೀಡುವುದು ಸ್ವಲ್ಪ ಆತುರದ ನಿರ್ಧಾರವಾಗಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಮೊದಲು ವೈಭವ್ ಸೂರ್ಯವಂಶಿ ಹೆಚ್ಚು ರೆಡ್ ಬಾಲ್ ಕ್ರಿಕೆಟ್ ಆಡಬೇಕು. ಆ ಮೂಲಕ ಅನುಭವ ಪಡೆದುಕೊಂಡು ಹಂತ ಹಂತವಾಗಿ ತಮ್ಮ ಆಟವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ.
ಯುವ ಆಟಗಾರರಿಗೆ ಬೆಳೆಯಲು ಸಾಕಷ್ಟು ಸಮಯ ಮತ್ತು ಅವಕಾಶ ನೀಡಬೇಕು. ಆರಂಭದಲ್ಲೇ ದೊಡ್ಡ ನಾಯಕತ್ವದ ಜವಾಬ್ದಾರಿಗಳನ್ನು ವಹಿಸುವ ಬದಲು, ಅವರ ಸಾಮರ್ಥ್ಯ ಮತ್ತು ಅನುಭವಕ್ಕೆ ಅನುಗುಣವಾಗಿ ಹಂತ ಹಂತವಾಗಿ ಜವಾಬ್ದಾರಿಗಳನ್ನು ನೀಡುವುದು ಸೂಕ್ತ ಎಂಬುದು ಮಾಸ್ಟರ್ ಬ್ಲಾಸ್ಟರ್ ಅಭಿಪ್ರಾಯವಾಗಿದೆ.






