ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಎರಡು ವರ್ಷಗಳ ಬಳಿಕ ತಮ್ಮ ಕ್ರಿಕೆಟ್ ಅಭ್ಯಾಸದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಬೆಂಗಳೂರು: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಇದೀಗ ಎಲ್ಲರ ಕಣ್ಣು ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮೇಲಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 302 ರನ್ ಸಿಡಿ ಮಿಂಚಿದ್ದರು. ಇದರ ಜತೆಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲೂ ಅದೇ ಫಾರ್ಮ್ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ. ಇದೀಗ ಸ್ವತಃ ವಿರಾಟ್ ಕೊಹ್ಲಿ, ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ ವಿರಾಟ್ ಕೊಹ್ಲಿ ಫೋಸ್ಟ್:
ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಮೂರು ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ತಬ್ಬಿಬ್ಬಾಗಿ ಹೋಗಿದ್ದಾರೆ. ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಲ್ಲಿ ಹಲವು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಮಾಡಿದ್ದಾರೆ. ಆದರೆ ಅವೆಲ್ಲವೂ ಕೇವಲ ಜಾಹೀರಾತು, ತಮ್ಮ ಪತ್ನಿ ಜತೆಗಿನ ಪೋಸ್ಟ್‌ಗಳನ್ನು ಹಾಗೂ ಟೀಂ ಇಂಡಿಯಾ ಗೆಲುವಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಇವನ್ನು ಹೊರತುಪಡಿಸಿ ಕ್ರಿಕೆಟ್ ಕುರಿತಾದ ಬೇರೆ ಯಾವ ಫೋಟೋಗಳನ್ನು ಕೊಹ್ಲಿ ಹಂಚಿಕೊಳ್ಳುತ್ತಿಲ್ಲವಲ್ಲ ಎಂದು ಅವರ ಫ್ಯಾನ್ಸ್ ನಿರಾಶರಾಗಿದ್ದರು. ಇದೀಗ ಅಚ್ಚರಿಯ ಸಂಗತಿಯೆಂದರೇ, ಕಳೆದೆರಡು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಫೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 62 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.
ವಡೋದರಾ ತಲುಪಿರುವ ವಿರಾಟ್ ಕೊಹ್ಲಿ:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 11ರಿಂದ ಆರಂಭವಾಗಲಿದ್ದು, ಈ ಸರಣಿ ಆರಂಭಕ್ಕೆ ಕೆಲವು ದಿನಗಳ ಮೊದಲೇ ತಯಾರಿ ನಡೆಸಲು ವಿರಾಟ್ ಕೊಹ್ಲಿ ವಡೋದರಾಗೆ ಬಂದಿಳಿದಿದ್ದಾರೆ. ವಿರಾಟ್ ಕೊಹ್ಲಿ ಜತೆಗೆ ಕೆ ಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ ಹಾಗೂ ಯಶಸ್ವಿ ಜೈಸ್ವಾಲ್ ಕೂಡಾ ವಡೋದರದಲ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿಯನ್ನು ವಡೋದರದ ಅಭಿಮಾನಿಗಳು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.
ಕಳೆದ ನಾಲ್ಕು ಏಕದಿನ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಬ್ಯಾಟಿಂಗ್:
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಜೇಯ 74 ರನ್ ಸಿಡಿಸಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 65 ರನ್ ಸಿಡಿಸಿದ್ದರು. ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದ ಕೊಹ್ಲಿ, ಕಿವೀಸ್ ಎದುರು ಅದೇ ಬ್ಯಾಟಿಂಗ್ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.


