ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡುವುದರ ಬಗ್ಗೆ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ. ಇದಕ್ಕೆ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೊಹ್ಲಿ ಹೆಸರು ಬಳಸದೆ ಕೆಲವರಿಗೆ ಜೀವನವಿಲ್ಲ ಎಂದಿದ್ದಾರೆ. 

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯ, ಮುಂಬರುವ ಜನವರಿ 11ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ಹೆಸರು ಹೇಳದೇ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್‌ಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಸಂಜಯ್ ಮಂಜ್ರೇಕರ್, 'ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡೋದು ನೋಡೋಕೆ ಆಗ್ತಿಲ್ಲ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಕೊಡುವ ಬದಲು ಸಂಪೂರ್ಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಕೊಡಬೇಕಿತ್ತು. ಏಕದಿನ ಕ್ರಿಕೆಟ್ ಆಡೋದು ತುಂಬಾ ಸುಲಭ. ಟೆಸ್ಟ್ ಕ್ರಿಕೆಟ್‌ ನಿಜವಾದ ಕ್ರಿಕೆಟ್ ಆಟ. ಅಲ್ಲಿ ಸತ್ವ ಪರೀಕ್ಷೆಯಾಗುವುದು ಎಂದು ಹೇಳಿದ್ದರು.

ಇದೀಗ ಈ ಕುರಿತಂತೆ ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ, 'ಕೆಲವರಿಗಂತೂ ವಿರಾಟ್ ಕೊಹ್ಲಿ ಹೆಸರು ಬಳಸಿಕೊಂಡಿಲ್ಲ ಅಂದ್ರೆ ರೋಟಿ-ದಾಲ್ ಸಿಗೊಲ್ಲ ಅನಿಸುತ್ತೆ' ಎಂದು ಹೇಳಿದ್ದಾರೆ. ಇದು ಕೊಹ್ಲಿ ಫ್ಯಾನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ.

ಜನವರಿ 07ರ ಬುಧವಾರ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ವಡೋದರಾ ಏರ್‌ಪೋರ್ಟ್‌ಗೆ ಬಂದಿಳಿದರು. ಈ ವೇಳೆ 37 ವರ್ಷದ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಮುಗಿಬಿದ್ದರು. ಭದ್ರತಾ ಸಿಬ್ಬಂದಿಗಳ ಹರಸಾಹಸದಿಂದಾಗಿ ಕೊಹ್ಲಿ, ಹೋಟೆಲ್ ತಲುಪಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದೆ.

Scroll to load tweet…

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಮಿಂಚಿದ ಕೊಹ್ಲಿ:

ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಮೂರನೇ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದರು. ಮೊದಲ ಪಂದ್ಯದಲ್ಲಿ 135, ಎರಡನೇ ಪಂದ್ಯದಲ್ಲಿ 102 ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಜೇಯ 65 ರನ್ ಸಿಡಿಸಿದ್ದರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 302 ರನ್ ಬಾರಿಸಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು.

ಇದಾದ ಬಳಿಕ ಬರೋಬ್ಬರಿ 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿದ ವಿರಾಟ್ ಕೊಹ್ಲಿ, ಆಂಧ್ರಪ್ರದೇಶ ಎದುರು 131 ರನ್ ಹಾಗೂ ಗುಜರಾತ್ ಎದುರು 77 ರನ್ ಸಿಡಿಸಿ ಮಿಂಚಿದ್ದರು. ಇದೀಗ ಕಿವೀಸ್ ಎದುರಿನ ಏಕದಿನ ಸರಣಿಯಲ್ಲೂ ತಮ್ಮ ಬ್ಯಾಟಿಂಗ್ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

ನ್ಯೂಜಿಲೆಂಡ್ ಎದುರು ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕೊಹ್ಲಿ:

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 11ರಿಂದ ಆರಂಭವಾಗಲಿದ್ದು, ಮೊದಲ ಏಕದಿನ ಪಂದ್ಯವು ವಡೋದರದಲ್ಲಿ ನಡೆಯಲಿದೆ. ಇನ್ನು ಕೊಹ್ಲಿ ಕಿವೀಸ್ ಎದುರು ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ನ್ಯೂಜಿಲೆಂಡ್ ಎದುರು ಕೊಹ್ಲಿ 33 ಇನ್ನಿಂಗ್ಸ್‌ಗಳನ್ನಾಡಿ 55.23ರ ಬ್ಯಾಟಿಂಗ್ ಸರಾಸರಿಯಲ್ಲಿ 1,657 ರನ್ ಸಿಡಿಸಿದ್ದಾರೆ.