ಭಾರತದ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಅವಧಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ನಾಯಕನಾಗಿ ಅತಿ ಹೆಚ್ಚು ದ್ವಿಶತಕ, ಅತಿ ಹೆಚ್ಚು ಟೆಸ್ಟ್ ಗೆಲುವು ಹಾಗೂ ಅತಿ ಹೆಚ್ಚು ರನ್ ಗಳಿಸಿದಂತಹ ಅವರ ಮೂರು ಪ್ರಮುಖ ದಾಖಲೆಗಳನ್ನು ಮುರಿಯುವುದು ಸವಾಲಿನ ಸಂಗತಿಯಾಗಿದೆ.

ಬೆಂಗಳೂರು: ಭಾರತದ ಕ್ರಿಕೆಟ್ ದಂತಕತೆ ವಿರಾಟ್ ಕೊಹ್ಲಿ, ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೇ ಓರ್ವ ಆಟಗಾರನಾಗಿ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆಗುರುತುಗಳನ್ನು ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ ಕಳೆದ ವರ್ಷವಷ್ಟೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಓರ್ವ ಬ್ಯಾಟರ್ ಆಗಿ, ಓರ್ವ ನಾಯಕನಾಗಿ ಕೆಲವು ಅಪರೂಪದಲ್ಲೇ ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಡೆಲ್ಲಿ ಮೂಲದ ಬ್ಯಾಟರ್ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕರಾದ ಬಳಿಕ ತಂಡವು ತವರಿನಾಚೆ ಮತ್ತಷ್ಟು ಆಕ್ರಮಣಕಾರಿ ಆಟವಾಡಲು ಶುರು ಮಾಡಿತು.

ವಿರಾಟ್ ಕೊಹ್ಲಿ ನಾಯಕನಾಗಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಮೂರು ಟೆಸ್ಟ್ ರೆಕಾರ್ಡ್‌ಗಳನ್ನು ಯಾರಿಂದಲೂ ಮುರಿಯೋದು ಅಷ್ಟು ಸುಲಭವಲ್ಲ. ಅಷ್ಟಕ್ಕೂ ಆ ಮೂರು ದಾಖಲೆಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

1. ಟೆಸ್ಟ್‌ನಲ್ಲಿ ಅತಿಹೆಚ್ಚು ದ್ವಿಶತಕ ಸಿಡಿಸಿದ ನಾಯಕ ಕೊಹ್ಲಿ: 7 ಡಬಲ್ ಸೆಂಚುರಿ

ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕನಾಗಿ ಅತಿಹೆಚ್ಚು ದ್ವಿಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾರತ ಪರ ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಏಳು ಬಾರಿ 200+ ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕೊಹ್ಲಿ ನಾಯಕರಾಗಿದ್ದಾಗ ಅವರಿಂದ ಮೂಡಿ ಬಂದ ಅತ್ಯಂತ ಸ್ಥಿರ ಪ್ರದರ್ಶನ ಎನಿಸಿಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ, ಕ್ರಿಕೆಟ್ ಲೆಜೆಂಡ್ ಬ್ರಿಯಾನ್ ಲಾರಾ ಅವರಂತಹ ಟೆಸ್ಟ್‌ ನಾಯಕರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಲಾರಾ ನಾಯಕರಾಗಿ ಕೇವಲ 5 ಬಾರಿ ಮಾತ್ರ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಹೀಗಾಗಿ ನಾಯಕನಾಗಿ ಟೆಸ್ಟ್‌ನಲ್ಲಿ 7 ದ್ವಿಶತಕ ಸಿಡಿಸುವುದು ಅಷ್ಟು ಸುಲಭದ ಮಾತಲ್ಲ.

2. ಭಾರತ ಟೆಸ್ಟ್ ತಂಡದ ಯಶಸ್ವಿ ನಾಯಕ ವಿರಾಟ್:

ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಆಡಿದ 68 ಪಂದ್ಯಗಳ ಪೈಕಿ 40 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಕೊಹ್ಲಿ ಭಾರತದಲ್ಲಿ ಮಾತ್ರವಲ್ಲದೇ ಭಾರತದಾಚೆಯೂ ಅದರಲ್ಲೂ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಿತ್ತು. ಟೆಸ್ಟ್‌ನಲ್ಲಿ 40 ಗೆಲುವು ನಿಜಕ್ಕೂ ಸಾಧನೆಯೇ ಸರಿ.

3. ಟೆಸ್ಟ್ ತಂಡದ ನಾಯಕನಾಗಿ ಅತಿಹೆಚ್ಚು ರನ್ ಬಾರಿಸಿದ ಕೊಹ್ಲಿ:

ವಿರಾಟ್ ಕೊಹ್ಲಿ ನಾಯಕನಾಗಿ ಅತಿಹೆಚ್ಚು ಗೆಲುವು ದಾಖಲಿಸುವುದರ ಜತೆಗೆ ಸ್ವತಃ ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. 68 ಪಂದ್ಯಗಳಲ್ಲಿ ನಾಯಕರಾಗಿದ್ದ ಕೊಹ್ಲಿ 20 ಶತಕ ಹಾಗೂ 18 ಅರ್ಧಶತಕ ಸಹಿತ 5,864 ರನ್ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್‌ ನಾಯಕರಾಗಿ ಭಾರತ ಪರ ಅತಿಹೆಚ್ಚು ರನ್ ಬಾರಿಸಿರುವ ಕೊಹ್ಲಿ ದಾಖಲೆ ಬ್ರೇಕ್ ಆಗೋದು ಸದ್ಯಕ್ಕಂತೂ ಅನುಮಾನ.