ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ 74 ರನ್ ಗಳಿಸಿದರೂ ಭಾರತ ಸೋಲನುಭವಿಸಿತು. ಕೊಹ್ಲಿಯ ಮಂದಗತಿಯ ಬ್ಯಾಟಿಂಗ್ ಸೋಲಿಗೆ ಕಾರಣವಾಯಿತೇ ಎಂಬ ಚರ್ಚೆಯ ನಡುವೆ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೊಹ್ಲಿಯ ಆಟವನ್ನು ಸಮರ್ಥಿಸಿಕೊಂಡು ಅವರ ಇನ್ನಿಂಗ್ಸ್‌ನ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಹೀಗಿದ್ದೂ ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ, ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ಟೀಂ ಇಂಡಿಯಾ ಸೋಲಿಗೆ ವಿರಾಟ್ ಕೊಹ್ಲಿ ಮಂದಗತಿಯ ಬ್ಯಾಟಿಂಗ್ ಕಾರಣ ಎನ್ನುವಂತಹ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಈ ಕುರಿತಂತೆ ಮೊದಲ ಸಲ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲಾರ್ಡ್ಸ್‌ ಮೈದಾನದಲ್ಲಿ ರನ್ ಗಳಿಸಿದ ರೀತಿಯ ಆಧಾರದಲ್ಲಿ ವಿರಾಟ್ ಕೊಹ್ಲಿಯ ಖ್ಯಾತಿ ಅವಲಂಬಿತವಾಗಿಲ್ಲ. ಈ ದಿಗ್ಗಜ ಕ್ರಿಕೆಟಿಗ ಈಗಾಗಲೇ ವಿಶ್ವದಾದ್ಯಂತ ತಮ್ಮ ಸಾಮರ್ಥ್ಯವನ್ನು ಅನಾವರಣ ಮಾಡಿದ್ದಾರೆ. ಲಾರ್ಡ್ಸ್‌ನಲ್ಲಿ ಬಾರಿಸಿದ ವಿರಾಟ್ ಕೊಹ್ಲಿಯ ಅರ್ಧಶತಕದ ಕ್ವಾಲಿಟಿಯನ್ನು ಮೆಚ್ಚಿಕೊಳ್ಳಬೇಕು ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಲಾರ್ಡ್ಸ್‌ ಮೈದಾನದಲ್ಲಿ ಗೆಲ್ಲಲು ಬರೋಬ್ಬರಿ 388 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ 74 ರನ್ ಸಿಡಿಸಿದರು. ಇದಷ್ಟೇ ಅಲ್ಲದೇ ರೋಹಿತ್ ಶರ್ಮಾ ಅವರ ಜತೆ ವಿರಾಟ್ ಕೊಹ್ಲಿ ಶತಕದ ಜತೆಯಾಟವಾಡಿದರು. ಹೀಗಿದ್ದೂ ಟೀಂ ಇಂಡಿಯಾ 27 ರನ್‌ಗಳ ರೋಚಕ ಸೋಲು ಅನುಭವಿಸಿತು. ವಿರಾಟ್ 74 ರನ್ ಸಿಡಿಸಲು 60 ಎಸೆತಗಳನ್ನು ತೆಗೆದುಕೊಂಡರು. ಇದು ಟೀಂ ಇಂಡಿಯಾ ಸೋಲಿಗೆ ಕಾರಣ ಎನ್ನುವಂತಹ ಚರ್ಚೆ ಜೋರಾಗಿದೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ ಇರ್ಫಾನ್ ಪಠಾಣ್

ಲಾರ್ಡ್ಸ್‌ನಲ್ಲಿ ರನ್ ಗಳಿಸುವುದು ಏಕೆ ಮುಖ್ಯ ಎಂದು ನಾನು ಯಾವಾಗಲೂ ಯೋಚಿಸುತ್ತಿದ್ದೆ. ವಿರಾಟ್ ಪ್ರಪಂಚದಾದ್ಯಂತ ರನ್ ಗಳಿಸಿದ್ದಾರೆ. ಅದು ಪ್ರತಿಷ್ಠೆಯ ವಿಷಯವಾಗಿರಬಹುದು, ಆದರೆ ಈ ಅರ್ಧಶತಕ ಬರದಿದ್ದರೆ, ವಿಶ್ವ ಕ್ರಿಕೆಟ್ ಅಥವಾ ಭಾರತೀಯ ಕ್ರಿಕೆಟ್‌ನಲ್ಲಿ ಅವರ ಮಹತ್ವ ಕಡಿಮೆಯಾಗುತ್ತಿತ್ತೇ? ಖಂಡಿತವಾಗಿಯೂ ಇಲ್ಲ. ಅವರು ಲಾರ್ಡ್ಸ್‌ನಲ್ಲಿ ರನ್ ಗಳಿಸುತ್ತಾರೋ ಇಲ್ಲವೋ ಎಂಬುದಕ್ಕೆ ಅತಿಯಾದ ಮಹತ್ವ ನೀಡಬಾರದು, ವಿಶೇಷವಾಗಿ ಭಾರತೀಯ ಅಭಿಮಾನಿಯ ದೃಷ್ಟಿಕೋನದಿಂದ. ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರರಾಗಿದ್ದರು ಮತ್ತು ಮುಂದೆಯೂ ಹಾಗೆಯೇ ಇರುತ್ತಾರೆ," ಎಂದು ಪಠಾಣ್ 'ಜಿಯೋಸ್ಟಾರ್'ಗೆ ತಿಳಿಸಿದರು.

ಆದರೆ ಈ ಪಂದ್ಯದಲ್ಲಿ, ಅವರು ಬ್ಯಾಟಿಂಗ್ ಮಾಡಿದ ರೀತಿ ಎದ್ದು ಕಾಣುವಂತಿತ್ತು. ಅವರು ಸುಮಾರು 45 ರನ್‌ಗಳನ್ನು ತಲುಪಿದಾಗ, ಅಗತ್ಯವಿದ್ದ ರನ್-ರೇಟ್‌ನ ಕಾರಣದಿಂದಾಗಿ ತಾವು ಆಕ್ರಮಣಕಾರಿ ಆಟಕ್ಕೆ ಬದಲಾಗಬೇಕೆಂದು ಅವರಿಗೆ ಅರಿವಾಯಿತು. ಅಂತಿಮ ಹಂತದಲ್ಲಿ ನಮ್ಮ ಬೌಲಿಂಗ್ ಉತ್ತಮವಾಗಿದ್ದು, ಅವರ ಇನ್ನಿಂಗ್ಸ್ ಇನ್ನೂ ಸ್ವಲ್ಪ ಕಾಲ ಮುಂದುವರಿದಿದ್ದಿದ್ದರೆ, ಫಲಿತಾಂಶ ಬೇರೆಯದೇ ಆಗಿರಬಹುದಿತ್ತು ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದ ದಿಕ್ಕನ್ನೇ ಬದಲಿಸಿದ ವಿರಾಟ್ ಕೊಹ್ಲಿ ವಿಕೆಟ್

ವಿರಾಟ್ ಕೊಹ್ಲಿ ಮೈದಾನದಲ್ಲಿ ಇರುವರೆಗೂ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲಿಡುತ್ತಾ ಇತ್ತು. ಆದರೆ ವಿರಾಟ್ ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆಯೇ ಪಂದ್ಯ ಇಂಗ್ಲೆಂಡ್ ಪರ ವಾಲಿತು. 388 ರನ್‌ಗಳ ಗುರಿ ಬೆನ್ನತ್ತಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 360 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 2-1 ಅಂತರದಲ್ಲಿ ಏಕದಿನ ಸರಣಿ ಜಯಿಸುವಲ್ಲಿ ಯಶಸ್ವಿಯಾಯಿತು.