ಸಂಜೀವ್ ಗೋಯೆಂಕಾ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್‌ ತಂಡವು ದಿ ಹಂಡ್ರೆಡ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್‌ ವಿರುದ್ಧ ರೋಚಕ ಜಯ ಸಾಧಿಸಿದ ಜೋಸ್ ಬಟ್ಲರ್ ಪಡೆ, ಗೋಯೆಂಕಾ ಅವರ ಟ್ರೋಫಿ ಬರವನ್ನು ನೀಗಿಸಿದೆ. ಟಿಮ್ ಸೈಫರ್ಟ್‌ ಫೈನಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನ ರೂವಾರಿಯಾದರು.

ಲಂಡನ್: ದಿ ಹಂಡ್ರೆಡ್ 2026 ಟೂರ್ನಿ ಫೈನಲ್‌ನಲ್ಲಿ ಸಂಜೀವ್ ಗೋಯೆಂಕಾ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್‌ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಗೂ ಜೋಸ್ ಬಟ್ಲರ್ ನೇತೃತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್‌ ತಂಡವು ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಸಂಜೀವ್ ಗೋಯೆಂಕಾ ನೇತೃತ್ವದ ಫ್ರಾಂಚೈಸಿ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಟ್ರೋಫಿ ಬರ ನೀಗಿಸಿಕೊಂಡಿದೆ.

ಫೈನಲ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹಾಗೂ ಟ್ರೆಂಟ್ ರಾಕೆಟ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್‌ ನಿಗದಿತ 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 158 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಟಿಮ್ ಸೈಫರ್ಟ್‌ 38 ಎಸೆತಗಳಲ್ಲಿ 72 ರನ್ ಸಿಡಿಸುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಹೀಗಿದ್ದೂ ಕೊನೆಯ 3 ಎಸೆತಗಳಲ್ಲಿ ಮ್ಯಾಂಚೆಸ್ಟರ್ ತಂಡಕ್ಕೆ 3 ರನ್‌ಗಳ ಅಗತ್ಯವಿತ್ತು. ಈ ವೇಳೆ ಲಿಯಾಮ್ ಡಾಸನ್ ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ 2 ಎಸೆತ ಬಾಕಿ ಇರುವಂತೆಯೇ ರೋಚಕ ಗೆಲುವು ತಂದುಕೊಟ್ಟರು.

ಕೊನೆಗೂ ವಿಕೆಟ್ ಕೀಪರ್ ಬ್ಯಾಟರ್ ನಂಬಿ ಕಪ್ ಗೆದ್ದ

ಲಖನೌ ಸೂಪರ್ ಜೈಂಟ್ಸ್‌ ತಂಡದ ಮಾಲೀಕರಾಗಿರುವ ಸಂಜೀವ್ ಗೋಯೆಂಕಾ, ದಿ ಹಂಡ್ರೆಡ್ ಟೂರ್ನಿಯಲ್ಲಿ ವಿಕೆಟ್ ಕೀಪರ್ ನಂಬಿಯೇ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಐಪಿಎಲ್‌ನಲ್ಲಿ ಸಂಜೀವ್ ಗೋಯೆಂಕಾ, ಭಾರತದ ವಿಕೆಟ್ ಕೀಪರ್ ಬ್ಯಾಟರ್‌ಗಳಾಗಿರುವ ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರನ್ನು ಕರೆತಂದು ನಾಯಕತ್ವ ಪಟ್ಟ ಕಟ್ಟಿದ್ದರು. ಆದರೆ ಲಖನೌ ತಂಡಕ್ಕೆ ಐಪಿಎಲ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಪಟ್ಟು ಬಿಡದ ಗೋಯೆಂಕಾ, ದಿ ಹಂಡ್ರೆಡ್ ಟೂರ್ನಿಯಲ್ಲೂ ಟಿಮ್ ಸೈಫರ್ಟ್, ಜೋಸ್ ಬಟ್ಲರ್ ಹಾಗೂ ಹೆನ್ರಿಚ್ ಕ್ಲಾಸೆನ್ ಅವರಂತಹ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದರು. ಈ ಮೂವರು ಆಟಗಾರರು ಈ ಬಾರಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೈಫರ್ಟ್ ಫೈನಲ್‌ನಲ್ಲಿ 72 ರನ್ ಚಚ್ಚಿದರೆ, ನಾಯಕ ಬಟ್ಲರ್ 23 ಹಾಗೂ ಕ್ಲಾಸೆನ್ 11 ರನ್ ಸಿಡಿಸಿದರು. ಟೂರ್ನಿಯಲ್ಲಿ ಸೀಫರ್ಟ್ 394 ರನ್ ಸಿಡಿಸಿ ಎಂವಿಪಿ ಆಟಗಾರನಾಗಿ ಹೊರಹೊಮ್ಮಿದರೆ, ನಾಯಕ ಬಟ್ಲರ್ 334 ರನ್ ಹಾಗೂ ಕ್ಲಾಸೆನ್ 177 ರನ್ ಸಿಡಿಸಿದ್ದಾರೆ.

ಈ ಇಬ್ಬರು ವಿಕೆಟ್ ಕೀಪರ್‌ ಬ್ಯಾಟರ್‌ಗೆ ಐಪಿಎಲ್‌ನಲ್ಲಿ ಗೋಯೆಂಕಾ ಗಾಳ?

ಐಪಿಎಲ್ ಟ್ರೋಫಿ ಗೆಲ್ಲುವ ಸಂಜೀವ್ ಗೋಯೆಂಕಾ ಕನಸು ಇಲ್ಲಿಯವರೆಗೆ ಮರಿಚಿಕೆಯಾಗಿಯೇ ಉಳಿದಿದೆ. ಇದೀಗ ದಿ ಹಂಡ್ರೆಡ್ ಟೂರ್ನಿಯಲ್ಲಿ ಜೋಸ್ ಬಟ್ಲರ್, ಗೋಯೆಂಕಾ ಅವರಿಗೆ ಟ್ರೋಫಿ ಬರ ನೀಗಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಗೋಯೆಂಕಾ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಜೋಸ್ ಬಟ್ಲರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಿಷಭ್ ಪಂತ್ ಲಖನೌ ತಂಡವನ್ನು ತೊರೆದಿದ್ದಾರೆ. ಹೀಗಾಗಿ ಬಟ್ಲರ್‌ ಅವರನ್ನು ಕರೆ ತಂದು ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕನ ಪಟ್ಟ ಕಟ್ಟುವ ಸಾಧ್ಯತೆಯಿದೆ. ಇದಷ್ಟೇ ಅಲ್ಲದೇ ಕೆಕೆಆರ್ ತಂಡದಲ್ಲಿರವ ಟಿಮ್ ಸೈಫರ್ಟ್ ಅವರಿಗೂ ಗೋಯೆಂಕಾ ಗಾಳ ಹಾಕಿದರೆ ಅಚ್ಚರಿಯೇನಿಲ್ಲ.