2007ರಲ್ಲಿ ರಣಜಿ ಆಟಗಾರರಾಗಿದ್ದ ವಿರಾಟ್ ಕೊಹ್ಲಿ ಅವರ ಚೊಚ್ಚಲ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಕೊಹ್ಲಿ, ಭಾರತ ತಂಡದ ವಿಶ್ವಕಪ್ ಗೆಲುವಿನ ಸಾಧ್ಯತೆಗಳು ಮತ್ತು ವಿರೇಂದ್ರ ಸೆಹ್ವಾಗ್ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್, ಚೇಸ್ ಮಾಸ್ಟರ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಇದೀಗ ಕ್ರಿಕೆಟ್ ಜಗತ್ತಿನ ಜಾಗತಿಕ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ಚೊಚ್ಚಲ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ. ಸಂದರ್ಶನ ಮಾಡಿದ ಅಮಿತ್ ಭಾಟಿಯಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಮಿತ್ ಭಾಟಿಯಾ ಎನ್ನುವವರು ತಮ್ಮ ಕಾಲೇಜಿನ ಪ್ರಾಜೆಕ್ಟ್‌ಗಾಗಿ 2007ರಲ್ಲಿ ರಣಜಿ ಕ್ರಿಕೆಟಿಗರಾಗಿದ್ದ ವಿರಾಟ್ ಕೊಹ್ಲಿ ಹಾಗೂ ಪುನೀತ್ ಬಿಷ್ತ್ ಅವರನ್ನು ಸಂದರ್ಶನ ಮಾಡಿದ್ದರು. ಡೆಲ್ಲಿಯ ಇಬ್ಬರು ಹಿರಿಯ ರಣಜಿ ಕ್ರಿಕೆಟಿಗರು ಈ ಸಂದರ್ಶನದಲ್ಲಿ ಭಾಗಿಯಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಕೈಕೊಟ್ಟಿದ್ದರಿಂದ ವಿರಾಟ್ ಕೊಹ್ಲಿ ಹಾಗೂ ಪುನೀತ್ ಬಿಷ್ತ್ ಅವರನ್ನು ಈ ಇಂಟರ್‌ವೀವ್‌ಗೆ ಕಳಿಸಿಕೊಟ್ಟಿದ್ದರು. ಆಗಲೇ ಆ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಪ್ರಬುದ್ಧವಾಗಿ ಮಾತನಾಡಿ ಗಮನ ಸೆಳೆದಿದ್ದರು.
2007ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಿತ್ತು. ಆಗ ಸಂದರ್ಶನದಲ್ಲಿ ಭಾರತ ತಂಡವು ಈ ಬಾರಿ ವಿಶ್ವಕಪ್ ಗೆಲ್ಲಲಿದೆಯೇ ಎಂದು ಕೇಳುತ್ತಾರೆ. ಅಗ ಪುನೀತ್ ಬಿಷ್ತ್ ನಮ್ಮ ತಂಡ ಸಮತೋಲನದಿಂದ ಕೂಡಿದೆ. ಎರಡು ವಿಶ್ವದರ್ಜೆಯ ಸ್ಪಿನ್ನರ್ ನಮ್ಮ ತಂಡದಲ್ಲಿದ್ದಾರೆ. ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ. ಇದೇ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ನನಗೂ ಕೂಡಾ ಪುನೀತ್ ಮಾತಿಗೆ ಸಮ್ಮತಿಯಿದೆ. ಆನ್ ಪೇಪರ್ ನಮ್ಮ ತಂಡ ಚೆನ್ನಾಗಿದೆ. ಮೈದಾನದಲ್ಲಿ ಹೇಗೆ ಆಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ ಎಂದು ಕೊಹ್ಲಿ ಹೇಳಿದ್ದರು.
ಇನ್ನು ಇದೇ ವೇಳೆ ತಂಡದ ಆಯ್ಕೆಯಲ್ಲಿ ವಿರೇಂದ್ರ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿದ್ದು ಸರಿಯೇ? ಎನ್ನುವ ಪ್ರಶ್ನೆಗೆ ವಿರಾಟ್ ಕೊಹ್ಲಿ ಸಮಯೋಚಿತವಾಗಿ ಉತ್ತರಿಸುತ್ತಾರೆ. ಇನ್ನು ಸೆಹ್ವಾಗ್ ಕಳೆದ ಎರಡು ವರ್ಷಗಳಿಂದ ಒಂದು ಶತಕವನ್ನು ಬಾರಿಸಿಲ್ಲ. ಕಳೆದ 10 ಪಂದ್ಯಗಳಲ್ಲಿ 21ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇನ್ನು ಆರಂಭಿಕರಾಗಿ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ರಾಬಿನ್ ಉತ್ತಪ್ಪ ಹಾಗೂ ವಿರೇಂದ್ರ ಸೆಹ್ವಾಗ್ ಅವರನ್ನು ಕರೆದುಕೊಂಡು ಹೋಗಿದ್ದು ಸರಿಯೇ ಎಂದು ಕೇಳುತ್ತಾರೆ. ಆಗ ವಿರಾಟ್ ಕೊಹ್ಲಿ, ಸೆಹ್ವಾಗ್ ಓರ್ವ ಅನುಭವಿ ಆಟಗಾರರಾಗಿದ್ದಾರೆ. ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಅನುಭವಿ ಆಟಗಾರರ ಅಗತ್ಯವಿರುತ್ತದೆ. ಸೆಹ್ವಾಗ್ ಅವರ ಆಯ್ಕೆ ಸರಿಯಾಗಿದೆ ಎಂದು ಕೊಹ್ಲಿ, ವೀರೂ ಪರ ಬ್ಯಾಟ್ ಬೀಸಿದ್ದರು. ಈ ಹಳೆಯ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2007ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಎದುರು ಮುಗ್ಗರಿಸುವ ಮೂಲಕ ಗ್ರೂಪ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ಇನ್ನು ಅದೇ ವಿಶ್ವಕಪ್ ಟೂರ್ನಿಯಲ್ಲಿ ಬರ್ಮೊಡಾ ವಿರುದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದರು. ವಿರೇಂದ್ರ ಸೆಹ್ವಾಗ್ ಆ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದರು.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ, 2007ರಲ್ಲಿ ನೀಡಿದ ಸಂದರ್ಶನ, ಆಡಿದ ಮಾತುಗಳು ವಿವೇಚನಾಯುತವಾಗಿದ್ದು, ಹಳೆಯ ವಿಡಿಯೋ ವೈರಲ್ ಆಗಿದೆ. ಬಳಿಕ ವಿರಾಟ್ ಕೊಹ್ಲಿ ಅಂಡರ್ 19 ವಿಶ್ವಕಪ್ ಗೆದ್ದು ಟೀಂ ಇಂಡಿಯಾಗೂ ಎಂಟ್ರಿಕೊಟ್ಟರು. ಈಗ ಕೊಹ್ಲಿ ಜಾಗತಿಕ ಕ್ರಿಕೆಟ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ.
