ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ 2027ರ ಏಕದಿನ ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರಿದ್ದು, ನಿತೀಶ್ ಕುಮಾರ್ ರೆಡ್ಡಿಯಂತಹ ಅಚ್ಚರಿಯ ಆಯ್ಕೆಗಳಿವೆ. ಗೌತಮ್ ಗಂಭೀರ್ ಅವರ ಆಪ್ತ ಆಟಗಾರ ಹರ್ಷಿತ್ ರಾಣಾಗೆ ತಂಡದಲ್ಲಿ ಸ್ಥಾನ ನೀಡಿಲ್ಲ.

ಬೆಂಗಳೂರು: 2027ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ನಡೆಯಲಿದೆ. ಈ ಹೈವೋಲ್ಟೇಜ್ ಟೂರ್ನಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯ ವಹಿಸಿವೆ. ಇನ್ನು ಇದೆಲ್ಲದರ ನಡುವೆ ಕಳೆದ ಬಾರಿಯ ರನ್ನರ್‌ ಅಪ್ ಭಾರತ ತಂಡವು ಮುಂಬರುವ ಏಕದಿನ ವಿಶ್ವಕಪ್ ಗೆಲ್ಲಲು ಪಣ ತೊಟ್ಟಿದೆ. ಹೀಗಿರುವಾಗಲೇ ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಭಾರತ ತಂಡ ಹೇಗಿರಬೇಕು ಎನ್ನುವುದರ ಕುರಿತಂತೆ ತಮ್ಮದೇ ಆದ ತಂಡವನ್ನು ಪ್ರಕಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪರ್ಫೆಕ್ಟ್ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿದ್ದಾರೆ.

ಆರ್‌ಸಿಬಿಯಂತೆ ಬಲಿಷ್ಠ ತಂಡ ಕಟ್ಟಿದ ಡಿಕೆ:

ದಿನೇಶ್ ಕಾರ್ತಿಕ್, ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ಆರ್‌ಸಿಬಿ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ. ಡಿಕೆ, ಆರ್‌ಸಿಬಿ ತಂಡದ ಮೆಂಟರ್ ಆಗುತ್ತಿದ್ದಂತೆಯೇ ತಂಡದ ಖದರ್ ಬದಲಾಗಿದ್ದು, ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಜಯಿಸುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಆರ್‌ಸಿಬಿ ತಂಡವು ಕಳೆದೆರಡು ಸೀಸನ್‌ನಲ್ಲಿ ಎಲ್ಲಾ ವಿಭಾಗದಲ್ಲೂ ಪರಿಪೂರ್ಣ ತಂಡವಾಗಿ ಹೊರಹೊಮ್ಮಿದೆ. ಇದೀಗ ಡಿಕೆ ಅದೇ ರೀತಿಯ ತಂಡವನ್ನು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೂ ಆಯ್ಕೆ ಮಾಡಿದ್ದಾರೆ.

ಬಲಿಷ್ಠ ಅಗ್ರಕ್ರಮಾಂಕದ ಬ್ಯಾಟಿಂಗ್ ವಿಭಾಗ:

ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಜತೆಗೆ ಬ್ಯಾಕ್‌ಅಪ್ ಓಪನ್ನರ್ ರೂಪದಲ್ಲಿ ಯಶಸ್ವಿ ಜೈಸ್ವಾಲ್‌ಗೆ ತಂಡದಲ್ಲಿ ಮಣೆ ಹಾಕಿದ್ದಾರೆ. ಇನ್ನು ಇದರ ಜತೆಗೆ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಅವರಿಗೆ ಬ್ಯಾಕ್‌ಅಪ್ ರೂಪದಲ್ಲಿ ಇಶಾನ್ ಕಿಶನ್ ಅವರಿಗೂ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಾರೆ.

ಅನುಭವಿಗಳನ್ನು ಒಳಗೊಂಡ ಮಧ್ಯಮ ಕ್ರಮಾಂಕ:

ಇನ್ನು ದಿನೇಶ್ ಕಾರ್ತಿಕ್ ಸಾಕಷ್ಟು ಅಳೆದುತೂಗಿ ಮಧ್ಯಮ ಕ್ರಮಾಂಕವನ್ನು ಆಯ್ಕೆ ಮಾಡಿದ್ದಾರೆ. ಈ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್‌ಗೆ ಮಣೆಹಾಕಿದ್ದಾರೆ. ಈ ಇಬ್ಬರು ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಆಡುವ ಕೌಶಲ್ಯವನ್ನು ಹೊಂದಿದ್ದು, ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ಆಸರೆಯಾಗಬಲ್ಲರು.

ಮೂವರು ಆಲ್ರೌಂಡರ್‌ಗಳು:

ಇನ್ನು ಯಾವುದೇ ತಂಡಕ್ಕೆ ಆಲ್ರೌಂಡರ್‌ಗಳು ಆಸ್ತಿಯಾಗಬಲ್ಲರು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಂತೆ ಡಿಕೆ ಭಾರತದ ನಂಬರ್ ಒನ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿಗೆ ಮಣೆಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಹೆಚ್ಚು ಸ್ಪಂದಿಸುವುದರಿಂದ ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟು ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ಕಲ್ಪಿಸಿರುವ ಸಾಧ್ಯತೆಯಿದೆ.

ಅನುಭವಿ ಬೌಲರ್‌ಗಳ ಪಡೆ ಆಯ್ಕೆ ಮಾಡಿದ ಡಿಕೆ:

ಇನ್ನು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವ ವೇಗಿಗಳಿಗಿಂತ ಅನುಭವಿ ವೇಗಿಗಳಿಗೆ ಡಿಕೆ ಮಣೆ ಹಾಕಿದ್ದಾರೆ. ಈ ಪೈಕಿ ಜಸ್ಪ್ರೀತ್ ಬುಮ್ರಾ ಭಾರತದ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಇತರೆ ವೇಗಗಳಾಗಿದ್ದಾರೆ. ಇದರ ಜತೆಗೆ ಕುಲ್ದೀಪ್ ಯಾದವ್ ಏಕೈಕ ತಜ್ಞ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಗಂಭೀರ್ ಆಪ್ತ ಆಟಗಾರನಿಗಿಲ್ಲ ಸ್ಥಾನ:

ಇನ್ನು ಇತ್ತೀಚಿಗಿನ ವರ್ಷಗಳಲ್ಲಿ ಮೂರು ಮಾದರಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಅವರ ಪಾಲಿನ ನೀಲಿಗಣ್ಣಿನ ಹುಡುಗ ಎಂದೇ ಕರೆಸಿಕೊಳ್ಳುವ ಹರ್ಷಿತ್ ರಾಣಾಗೆ ಡಿಕೆ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿಲ್ಲ. ಹೀಗಿದ್ದೂ ಡಿಕೆ ಆಯ್ಕೆ ಮಾಡಿದ ತಂಡವು ಮೇಲ್ನೋಟಕ್ಕೆ ಮುಂಬರುವ ಏಕದಿನ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.

2027ರ ಏಕದಿನ ವಿಶ್ವಕಪ್‌ಗೆ ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್.