Asianet Suvarna News Asianet Suvarna News

Vijay Hazare Trophy: ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್, ಕರ್ನಾಟಕಕ್ಕೆ ಸತತ 4ನೇ ಜಯ

ಮೊದಲು ಬ್ಯಾಟ್ ಮಾಡಿದ ಬಿಹಾರ, ಸಕಿಬುಲ್ ಗನಿ ಅವರ ಶತಕ (100 ಎಸೆತದಲ್ಲಿ 113* ರನ್)ದ ಹೊರತಾಗಿಯೂ 50 ಓವರಲ್ಲಿ 7 ವಿಕೆಟ್‌ಗೆ 217 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಕರ್ನಾಟಕ 33.4 ಓವರಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Vijay Hazare Trophy Karnataka register 4th consecutive win in the tournament kvn
Author
First Published Nov 30, 2023, 11:41 AM IST

ಅಹಮದಾಬಾದ್(ನ.30): ಜೆ.ಸುಚಿತ್‌ರ ಆಕರ್ಷಕ ಬೌಲಿಂಗ್ ಹಾಗೂ ದೇವದತ್ ಪಡಿಕ್ಕಲ್‌ರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 2023ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿದೆ. ಬುಧವಾರ ಇಲ್ಲಿ ನಡೆದ ಬಿಹಾರ ವಿರುದ್ಧದ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ 7 ವಿಕೆಟ್‌ಗಳಿಂದ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಬಿಹಾರ, ಸಕಿಬುಲ್ ಗನಿ ಅವರ ಶತಕ (100 ಎಸೆತದಲ್ಲಿ 113* ರನ್)ದ ಹೊರತಾಗಿಯೂ 50 ಓವರಲ್ಲಿ 7 ವಿಕೆಟ್‌ಗೆ 217 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಕರ್ನಾಟಕ 33.4 ಓವರಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಡಿಕ್ಕಲ್ ಕೇವಲ 57 ಎಸೆತದಲ್ಲಿ 9 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಔಟಾಗದೆ 93 ರನ್ ಸಿಡಿಸಿದರು. ಮೊದಲ ಓವರಲ್ಲೇ ಆರ್.ಸಮರ್ಥ್ (04) ಔಟಾದ ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಮಯಾಂಕ್ ಅಗರ್‌ವಾಲ್(28) ಹಾಗೂ ನಿಕಿನ್ ಜೋಸ್ 71 ರನ್ ಜೊತೆಯಾಟವಾಡಿದರು. ನಾಯಕ ಮಯಾಂಕ್ ಔಟಾದ ಬಳಿಕ ನಿಕಿನ್(69), ಪಡಿಕ್ಕಲ್ ಜೊತೆ 71 ರನ್ ಸೇರಿಸಿದರು. ಮನೀಶ್ ಪಾಂಡೆ ಔಟಾಗದೆ 17 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಆಯ್ಕೆ ಇಂದು; ರೋಹಿತ್ ಶರ್ಮಾ ಲಭ್ಯತೆ ಅನುಮಾನ?

ಇದಕ್ಕೂ ಮುನ್ನ 33.3 ಓವರಲ್ಲಿ 110 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಬಿಹಾರಕ್ಕೆ ಸಕಿಬುಲ್ ಹಾಗೂ ನಾಯಕ ಅಶುತೋಷ್ ಅಮನ್(33) ಆಸರೆಯಾದರು. ಇವರಿಬ್ಬರು ಮುರಿಯದ 8ನೇ ವಿಕೆಟ್‌ಗೆ 107 ರನ್ ಸೇರಿಸಿದರು. ಕರ್ನಾಟಕದ ಸ್ಪಿನ್ನರ್ ಸುಚಿತ್ 10 ಓವರಲ್ಲಿ 2 ಮೇಡನ್ ಸಹಿತ ಕೇವಲ 27 ರನ್ ನೀಡಿ 3 ವಿಕೆಟ್ ಕಿತ್ತರು. ಈ ಜಯದ ಹೊರತಾಗಿಯೂ ಕರ್ನಾಟಕ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದಿದೆ. 4 ಗೆಲುವು ಸಾಧಿಸಿರುವ ಹರ್ಯಾಣ ನೆಟ್ ರನ್‌ರೇಟ್ ಆಧಾರದ ಮೇಲೆ ಮೊದಲ ಸ್ಥಾನ ಪಡೆದಿದೆ. ಕರ್ನಾಟಕಕ್ಕೆ ಇನ್ನು 3 ಪಂದ್ಯ ಬಾಕಿ ಇದ್ದು, ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

2024ರ ಜುಲೈ-ಆಗಸ್ಟ್‌ನಲ್ಲಿ ಭಾರತದಿಂದ ಲಂಕಾ ಪ್ರವಾಸ

ಕೊಲಂಬೊ: ಆರ್ಥಿಕ ಸಂಕಷ್ಟದಿಂದ ನಲುಗಿರುವ ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ(ಎಸ್‌ಎಲ್‌ಸಿ)ಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, 2024ರ ಜುಲೈ, ಆಗಸ್ಟ್‌ನಲ್ಲಿ ಭಾರತ ತಂಡ ಲಂಕಾ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳು ತಲಾ 3 ಪಂದ್ಯಗಳ ಏಕದಿನ, ಟಿ20 ಸರಣಿಗಳನ್ನು ಆಡಲಿವೆ. ಈ ಸರಣಿಗಳ ಪ್ರಸಾರ ಹಕ್ಕು, ಪ್ರಾಯೋಜಕತ್ವದಿಂದ ಲಂಕಾ ಕ್ರಿಕೆಟ್‌ ಮಂಡಳಿ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದಿಸುವ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಮಂಡಳಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗ್ರೀನ್ ಎಂಟ್ರಿಯಿಂದ ಬದಲಾಗುತ್ತಾ RCB ಹಣೆಬರಹ..? ಎದುರಾಳಿಗೆ ನಡುಕ ಹುಟ್ಟಿಸುತ್ತಿದೆ ಬ್ಯಾಟಿಂಗ್ ಲೈನ್ಅಪ್..!

ಕಿವೀಸ್‌ ವಿರುದ್ಧ ಇನ್ನಿಂಗ್ಸ್‌ ಮುನ್ನಡೆಯತ್ತ ಬಾಂಗ್ಲಾ

ಸೈಲ್ಹೆಟ್‌: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇನ್‌ ವಿಲಿಯಮ್ಸನ್‌ರ ಹೋರಾಟದ ಶತಕ (104)ದ ಹೊರತಾಗಿಯೂ ನ್ಯೂಜಿಲೆಂಡ್‌ ಇನ್ನಿಂಗ್ಸ್‌ ಹಿನ್ನಡೆ ಭೀತಿಯಲ್ಲಿದೆ. ಮೊದಲ ದಿನದಂತ್ಯಕ್ಕೆ 9 ವಿಕೆಟ್‌ಗೆ 310 ರನ್‌ ಗಳಿಸಿದ್ದ ಬಾಂಗ್ಲಾ, 2ನೇ ದಿನವಾದ ಬುಧವಾರ ಮೊದಲ ಎಸೆತದಲ್ಲೇ ತನ್ನ ಕೊನೆಯ ವಿಕೆಟ್‌ ಕಳೆದುಕೊಂಡಿತು. ಬಳಿಕ ಬ್ಯಾಟಿಂಗ್‌ ಆರಂಭಿಸಿದ ಕಿವೀಸ್‌ಗೆ ಕೇನ್‌, ಫಿಲಿಪ್ಸ್‌(42) ಹಾಗೂ ಮಿಚೆಲ್‌(41) ಆಸರೆಯಾದರು. 2ನೇ ದಿನದಂತ್ಯಕ್ಕೆ ಕಿವೀಸ್‌ 8 ವಿಕೆಟ್‌ಗೆ 266 ರನ್‌ ಗಳಿಸಿದ್ದು ಇನ್ನೂ 44 ರನ್‌ ಹಿನ್ನಡೆಯಲ್ಲಿದೆ.
 

Follow Us:
Download App:
  • android
  • ios