ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ ವಿಜೆಡಿ ನಿಯಮದನ್ವಯ 55 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ, ಬ್ಯಾಡ್ ಲೈಟ್‌ನಿಂದ ಪಂದ್ಯ ಸ್ಥಗಿತಗೊಂಡಾಗ ಕರ್ನಾಟಕ ಸುಸ್ಥಿತಿಯಲ್ಲಿತ್ತು.
ಬೆಂಗಳೂರು: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡವು ಮೊದಲ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ದ ಕರ್ನಾಟಕ ತಂಡವು ವಿಜೆಡಿ ನಿಯಮದನ್ವಯ 55 ರನ್‌ಗಳ ಜಯಭೇರಿ ಬಾರಿಸುವ ಮೂಲಕ ಸೆಮೀಸ್ ಪ್ರವೇಶಿಸಿದೆ. ಈ ಪಂದ್ಯಕ್ಕೆ ಮಂದ ಬೆಳಕು ಹಾಗೂ ಮಳೆ ಅಡ್ಡಿ ಪಡಿಸಿದ್ದರಿಂದ ಫಲಿತಾಂಶಕ್ಕೆ ವಿಜೆಡಿ ನಿಯಮದ ಮೊರೆ ಹೋಗಲಾಯಿತು.
ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲ್ಲಲು 255 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯಿತು. ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ 44 ರನ್‌ಗಳ ಜತೆಯಾಟವಾಡಿದರು. ಮಯಾಂಕ್ ಅಗರ್‌ವಾಲ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಎರಡನೇ ವಿಕೆಟ್‌ಗೆ ಜತೆಯಾದ ಕರುಣ್ ನಾಯರ್ ಹಾಗೂ ದೇವದತ್ ಪಡಿಕ್ಕಲ್ ಮುಂಬೈ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 143 ರನ್‌ಗಳ ಜತೆಯಾಟವಾಡುವ ಮೂಲಕ ರಾಜ್ಯ ತಂಡಕ್ಕೆ ಆಸರೆಯಾದರು. ಭರ್ಜರಿ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ 95 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ ಅಜೇಯ 81 ರನ್ ಸಿಡಿಸಿದರು. ಇನ್ನು ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡಿದ ಅನುಭವಿ ಬ್ಯಾಟರ್ ಕರುಣ್ ನಾಯರ್ 80 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 74 ರನ್ ಬಾರಿಸಿ ಅಜೇಯರಾಗುಳಿದರು.
ಪಂದ್ಯಕ್ಕೆ ಬ್ಯಾಡ್ ಲೈಟ್ ಅಡ್ಡಿ; ಫಲಿತಾಂಶಕ್ಕೆ ವಿಜೆಡಿ ನಿಯಮಕ್ಕೆ ಮೊರೆ:
ಕರ್ನಾಟಕ ತಂಡವು 33 ಓವರ್ ಅಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿ ಜಯದತ್ತ ದಾಪುಗಾಲು ಹಾಕುತ್ತಿತ್ತು. ಆದರೆ ಈ ವೇಳೆ ಪಂದ್ಯಕ್ಕೆ ಬ್ಯಾಡ್ ಲೈಟ್ ಅಡ್ಡಿಯಾಯಿತು. ಆಗ ಕರ್ನಾಟಕ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸಲು 102 ಎಸೆತಗಳಲ್ಲಿ ಕೇವಲ 68 ರನ್‌ಗಳ ಅಗತ್ಯವಿತ್ತು. ಆದರೆ ಬ್ಯಾಡ್ ಲೈಟ್‌ನಿಂದಾಗಿ ಪಂದ್ಯ ಮುಂದುವರೆಸಲು ಸಾಧ್ಯವಾಗದೇ ಇದ್ದಾಗ, ಫಲಿತಾಂಶಕ್ಕಾಗಿ ದೇಶಿ ಕ್ರಿಕೆಟ್‌ನಲ್ಲಿ ಬಳಸುವ ವಿಜೆಡಿ ನಿಯಮದ ಮೊರೆ ಹೋಗಲಾಯಿತು. ಪರಿಣಾಮ ಕರ್ನಾಟಕ ತಂಡಕ್ಕೆ 55 ರನ್ ಅಂತರದ ಜಯ ಎಂದು ಘೋಷಿಸಲಾಯಿತು.
ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಮುಂಬೈ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮುಂಬೈ 60 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮಧ್ಯಮ ಕ್ರಮಾಂಕದಲ್ಲಿ ಶಮ್ಸ್ ಮುಲಾನಿ ಆಕರ್ಷಕ 86 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 5ನೇ ವಿಕೆಟ್‌ಗೆ ಶಮ್ಸ್ ಮುಲಾನಿ ಹಾಗೂ ನಾಯಕ ಸಿದ್ದೇಶ್ ಲಾಡ್ 76 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಿದ್ದೇಶ್ ಲಾಡ್ 38 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ಸಾಯಿರಾಜ್ ಪಾಟೀಲ್ ಅಜೇಯ 33 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರೈವತ್ತರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕರ್ನಾಟಕ ತಂಡದ ಪರ ವಿದ್ಯಾಧರ್ ಪಾಟೀಲ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ವಿದ್ವತ್ ಕಾವೇರಪ್ಪ ಹಾಗೂ ಅಭಿಲಾಷ್ ಶೆಟ್ಟಿ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ವೈಶಾಕ್ ವಿಜಯ್‌ಕುಮಾರ್ ಒಂದು ವಿಕೆಟ್ ಕಬಳಿಸಿದರು.
ಉತ್ತರ ಪ್ರದೇಶ ಎದುರು ಸೌರಾಷ್ಟ್ರ ಜಯಭೇರಿ:
ಇನ್ನು ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಪ್ರದೇಶ ಎದುರು ಸೌರಾಷ್ಟ್ರ ತಂಡವು ವಿಜೆಡಿ ನಿಯಮದನ್ವಯ 17 ರನ್‌ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ ತಂಡವು ಅಭಿಷೇಕ್ ಗೋಸ್ವಾಮಿ ಹಾಗೂ ಸಮೀರ್ ರಿಜ್ವಿ ಬಾರಿಸಿದ ತಲಾ 88 ರನ್‌ಗಳ ನೆರವಿನಿಂದ 8 ವಿಕೆಟ್ ಕಳೆದುಕೊಂಡು 310 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಸೌರಾಷ್ಟ್ರ ತಂಡವು ನಾಯಕ ಹಾರ್ವಿಕ್ ದೇಸಾಯಿ ಬಾರಿಸಿದ ಅಜೇಯ 100 ಹಾಗೂ ಪ್ರೇರಕ್ ಮಂಕಡ್ ಅವರ ಅರ್ಧಶತಕ(67)ದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ವಿಜೆಡಿ ನಿಯಮದನ್ವಯ ಸೌರಾಷ್ಟ್ರ ತಂಡಕ್ಕೆ 17 ರನ್‌ಗಳ ಜಯ ಘೋಷಿಸಲಾಯಿತು.


