ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ನೀಡಿದ 255 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಅಜೇಯ ಶತಕದ ಜೊತೆಯಾಟದ ನೆರವಿನಿಂದ ಗೆಲುವಿನತ್ತ ಸಾಗುತ್ತಿದೆ. ಬ್ಯಾಡ್ ಲೈಟ್‌ನಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಬೆಂಗಳೂರು: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ಹಾಗೂ ಮುಂಬೈ ತಂಡಗಳು ಸೆಣಸುತ್ತಿವೆ. ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಗೆಲುವಿನತ್ತ ದಾಪುಗಾಲಿಡುತ್ತಿದೆ. ಹೀಗಿರುವಾಗಲೇ ಬ್ಯಾಡ್ ಲೈಟ್ ಕಾರಣದಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಹೌದು, ಗೆಲ್ಲಲು 255 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ 9.2 ಓವರ್‌ಗಳಲ್ಲಿ 44 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮಯಾಂಕ್ ಅಗರ್‌ವಾಲ್ 12 ರನ್ ಗಳಿಸಿ ಮೋಹಿತ್ ಅವಸ್ತಿಗೆ ವಿಕೆಟ್ ಒಪ್ಪಿಸಿದರು.
ಪಡಿಕ್ಕಲ್-ನಾಯರ್ ಭರ್ಜರಿ ಜತೆಯಾಟ:
ಮಯಾಂಕ್ ಅಗರ್‌ವಾಲ್ ವಿಕೆಟ್ ಪತನದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ಅನುಭವಿ ಬ್ಯಾಟರ್ ಕರುಣ್ ನಾಯರ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಈ ಜೋಡಿ ಎರಡನೇ ವಿಕೆಟ್‌ಗೆ ಮುರಿಯದ 143 ರನ್‌ಗಳ ಜತೆಯಾಟವಾಡಿದೆ. ರೆಡ್ ಹಾಟ್ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಕೇವಲ 95 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 81 ರನ್ ಗಳಿಸಿದ್ದು, ಮತ್ತೊಂದು ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡುತ್ತಿರುವ ಅನುಭವಿ ಬ್ಯಾಟರ್ ಕರುಣ್ ನಾಯರ್ 80 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 74 ರನ್ ಸಿಡಿಸಿ ಅಜೇಯರಾಗುಳಿದಿದ್ದಾರೆ.
ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ:
ವಿಜಯ್ ಹಜಾರೆ ಟ್ರೋಫಿ ಟೂರ್ನಿಯ 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡವು ಮುಂಬೈ ಎದುರು ದಿಟ್ಟ ಹೋರಾಟ ನೀಡುತ್ತಿದ್ದು, ಸದ್ಯ ಗೆಲುವಿನ ಹೊಸ್ತಿಲಲ್ಲಿದೆ. ಸದ್ಯ ಕರ್ನಾಟಕ ತಂಡವು 33 ಓವರ್ ಅಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿದೆ. ಸದ್ಯ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಲು 102 ಎಸೆತಗಳಲ್ಲಿ ಕೇವಲ 68 ರನ್‌ಗಳ ಅಗತ್ಯವಿದೆ.
ಸಾಧಾರಣ ಮೊತ್ತಕ್ಕೆ ಕುಸಿದ ಮುಂಬೈ:
ಇನ್ನು ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಮುಂಬೈ ತಂಡವು ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಮಧ್ಯಮ ಕ್ರಮಾಂಕದಲ್ಲಿ ಶಮ್ಸ್ ಮುಲಾನಿ(86) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಜವಾಬ್ದಾರಿಯುತ ಪ್ರದರ್ಶನ ತೋರಲಿಲ್ಲ. ನಾಯಕ ಸಿದ್ದೇಶ್ ಲಾಡ್ 38 ರನ್ ಬಾರಿಸಿದ್ದೇ ತಂಡದ ಪರ ದಾಖಲಾದ ಎರಡನೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.
ಕರ್ನಾಟಕ ತಂಡದ ಪರ ವಿದ್ಯಾಧರ್ ಪಾಟೀಲ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ವಿದ್ವತ್ ಕಾವೇರಪ್ಪ ಹಾಗೂ ಅಭಿಲಾಷ್ ಶೆಟ್ಟಿ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ವೈಶಾಕ್ ವಿಜಯ್‌ಕುಮಾರ್ ಒಂದು ವಿಕೆಟ್ ಕಬಳಿಸಿದರು.


