ವಿಜಯ್ ಹಜಾರೆ ಟ್ರೋಫಿಯಲ್ಲಿ, ಜಾರ್ಖಂಡ್ ನೀಡಿದ 413 ರನ್‌ಗಳ ಬೃಹತ್ ಗುರಿಯನ್ನು ಕರ್ನಾಟಕ ಯಶಸ್ವಿಯಾಗಿ ಬೆನ್ನಟ್ಟಿದೆ. ಇದು ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ರನ್ ಚೇಸ್ ಆಗಿದೆ. ದೇವದತ್ ಪಡಿಕ್ಕಲ್ ಅವರ ಭರ್ಜರಿ 147 ರನ್‌ಗಳ ನೆರವಿನಿಂದ ಕರ್ನಾಟಕ ಈ ಐತಿಹಾಸಿಕ ಜಯ ಸಾಧಿಸಿತು.
ಅಹಮದಾಬಾದ್: ಬುಧವಾರ ಆರಂಭಗೊಂಡ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಮೊದಲ ದಿನವೇ ರನ್ ಮಳೆ ಸುರಿದಿದ್ದು, ದಾಖಲೆಗಳ ಪ್ರವಾಹ ನಿರ್ಮಾಣವಾಗಿದೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಜಾರ್ಖಂಡ್ ವಿರುದ್ಧ 413 ರನ್‌ಗಳ ಗುರಿಯನ್ನು 47.3 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿದೆ. ಇದು ವಿಜಯ್ ಹಜಾರೆ ಇತಿಹಾಸದಲ್ಲೇ ಅತ್ಯಧಿಕ ರನ್ ಚೇಸ್. 2012ರಲ್ಲಿ ಬೆಂಗಳೂರಿನಲ್ಲಿ ಗೋವಾ ವಿರುದ್ಧ ಆಂಧ್ರ ತಂಡ 385 ರನ್ ಬೆನ್ನತ್ತಿ ಗೆದ್ದಿದ್ದ ದಾಖಲೆ ಪತನಗೊಂಡಿತು. ಒಟ್ಟಾರೆ ಲಿಸ್ಟ್ ‘ಎ’ ಕ್ರಿಕೆಟ್(50 ಓವರ್)ನಲ್ಲಿದು 2ನೇ ಗರಿಷ್ಠ ರನ್ ಚೇಸ್. 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದ.ಆಫ್ರಿಕಾ 438 ರನ್ ಬೆನ್ನತ್ತಿ ಗೆದ್ದಿದ್ದು ಈಗಲೂ ದಾಖಲೆ.
ದಾಖಲೆ ರನ್ ಚೇಸ್ ಮಾಡಿ ಗೆದ್ದ ಕರ್ನಾಟಕ
ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 9 ವಿಕೆಟ್‌ಗೆ 412 ರನ್ ಗಳಿಸಿತು. ಇದು ವಿಜಯ್ ಹಜಾರೆಯಲ್ಲಿ ಜಾರ್ಖಂಡ್‌ನ 2ನೇ ಗರಿಷ್ಠ ಸ್ಕೋರ್. ನಿಧಾನ ಆರಂಭ ಪಡೆದರೂ ಬಳಿಕ ತಂಡ ಸ್ಫೋಟಕ ಆಟವಾಡಿತು. ವಿರಾಟ್ ಸಿಂಗ್ 88, ಕುಮಾರ್ ಕುಶಾಗ್ರ 63 ರನ್ ಗಳಿಸಿದರೆ, ನಾಯಕ ಇಶಾನ್ ಕಿಶನ್ 33 ಎಸೆತಗಳಲ್ಲೇ ಶತಕ ಸಿಡಿಸಿದರು. ಅವರ 39 ಎಸೆತಗಳಲ್ಲಿ 125 ರನ್ ಸಿಡಿಸಿ ಔಟಾದರು. ಅಭಿಲಾಶ್ ಶೆಟ್ಟಿ 72 ರನ್ ನೀಡಿ 4 ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ರಾಜ್ಯ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಮಯಾಂಗ್ 54, ಕರುಣ್ ನಾಯರ್ 29, ಆರ್.ಸ್ಮರಣ್ 27, ಕೆ.ಎಲ್.ಶ್ರೀಜಿತ್ 38 ರನ್ ಗಳಿಸಿದರೆ, ತಮ್ಮ ಅಭೂತಪೂರ್ವ ಲಯ ಮುಂದುವರಿಸಿದ ದೇವದತ್ ಪಡಿಕ್ಕಲ್ 118 ಎಸೆತಕ್ಕೆ 147 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಕೊನೆಯಲ್ಲಿ ಅಭಿನವ್ ಮನೋಹರ್ 32 ಎಸೆತಕ್ಕೆ ಔಟಾಗದೆ 56, ಧ್ರುವ್ ಪ್ರಭಾಕರ್ 22 ಎಸೆತಕ್ಕೆ ಔಟಾಗದೆ 40 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಒಂದು ದಿನದಲ್ಲಿ ಬರೋಬ್ಬರಿ 22 ಶತಕ ದಾಖಲು:
ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಮೊದಲ ದಿನವಾದ ನಿನ್ನೆ ಒಟ್ಟು 22 ಶತಕಗಳು ದಾಖಲಾಗಿವೆ. ಇದು ಮೊದಲ ದಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಶತಕ ಎನಿಸಿಕೊಂಡಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಅವರಷ್ಟೇ ಅಲ್ಲದೇ ಇನ್ನೂ 18 ಮಂದಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೊದಲು 2021ರ ಡಿಸೆಂಬರ್ 12ರಂದು ಹಾಗೂ 2025ರ ಜನವರಿ 03ರಂದು ತಲಾ 19 ಶತಕಗಳು ದಾಖಲಾಗಿದ್ದವು.
-- ಇಂದಿನ ಫಲಿತಾಂಶಗಳು
ಗೆದ್ದ ತಂಡ ಎದುರಾಳಿ ಅಂತರ
ಕರ್ನಾಟಕ ಜಾರ್ಖಂಡ್ 5 ವಿಕೆಟ್
ಮುಂಬೈ ಸಿಕ್ಕಿಂ 8 ವಿಕೆಟ್
ಡೆಲ್ಲಿ ಆಂಧ್ರ 4 ವಿಕೆಟ್
ಗುಜರಾತ್ ಸರ್ವಿಸಸ್ 8 ವಿಕೆಟ್
ಸೌರಾಷ್ಟ್ರ ಒಡಿಶಾ 5 ವಿಕೆಟ್
ಮ.ಪ್ರದೇಶ ರಾಜಸ್ಥಾನ 99 ರನ್
ಕೇರಳ ತ್ರಿಪುರಾ 145 ರನ್
ಜಮ್ಮ-ಕಾಶ್ಮೀರ ಚಂಡೀಗಢ 10 ವಿಕೆಟ್
ಬರೋಡಾ ಅಸ್ಸಾಂ 5 ವಿಕೆಟ್
ಯುಪಿ ಹೈದ್ರಾಬಾದ್ 84 ರನ್
ಬೆಂಗಾಲ್ ವಿದರ್ಭ 3 ವಿಕೆಟ್
ಹಿಮಾಚಲ ಉತ್ತರಾಖಂಡ 95 ರನ್
ಗೋವಾ ಛತ್ತೀಸ್‌ಗಢ 6 ವಿಕೆಟ್
ಪಂಜಾಬ್ ಮಹಾರಾಷ್ಟ್ರ 51 ರನ್
ತಮಿಳುನಾಡು ಪುದುಚೇರಿ 101 ರನ್
ರೈಲ್ವೇಸ್ ಹರ್ಯಾಣ 6 ವಿಕೆಟ್


