ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ 150 ರನ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ, ಸತತ ಆರನೇ ಗೆಲುವಿನೊಂದಿಗೆ ಅಜೇಯವಾಗಿ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ನಾಯಕ ಮಯಾಂಕ್ ಅಗರ್‌ವಾಲ್ ಅವರ ಶತಕ ಹಾಗೂ ಪ್ರಸಿದ್ದ್ ಕೃಷ್ಣ ಅವರ 5 ವಿಕೆಟ್ ಗೊಂಚಲು ತಂಡದ ಈ ಭರ್ಜರಿ ಗೆಲುವಿಗೆ ಕಾರಣವಾಯಿತು.

ಅಹಮದಾಬಾದ್‌: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ಸತತ ಆರನೇ ಗೆಲುವು ದಾಖಲಿಸುವ ಮೂಲಕ ಅಜೇಯವಾಗಿ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿದೆ. 'ಎ' ಗುಂಪಿನ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ಎದುರು ಕರ್ನಾಟಕ ತಂಡವು 150 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಅಗ್ರಸ್ಥಾನಿಯಾಗಿ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.

ಉತ್ತಮ ಆರಂಭ ಪಡೆದ ಕರ್ನಾಟಕ

ಗುಜರಾತ್ ಕಾಲೇಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಮಯಾಂಕ್‌ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ 184 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ರೆಡ್‌ ಹಾಟ್ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ ಐದನೇ ಶತಕ ಸಿಡಿಸುವ ಅವಕಾಶವನ್ನು ಮಿಸ್ ಮಾಡಿಕೊಂಡರು. ಚುರುಕಾಗಿ ಬ್ಯಾಟ್ ಬೀಸಿದ ಪಡಿಕ್ಕಲ್ ಕೇವಲ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 91 ರನ್ ಸಿಡಸಿ ವಿಕೆಟ್ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ನಾಯಕನ ಆಟ ಪ್ರದರ್ಶಿಸಿದ ಮಯಾಂಕ್‌ ಅಗರ್‌ವಾಲ್ ಸಮಯೋಚಿತ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಮಯಾಂಕ್‌ ಅಗರ್‌ವಾಲ್ 107 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 100 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಅಭಿನವ್ ಮನೋಹರ್ 35 ರನ್ ಸಿಡಿಸಿದರೆ, ಕೆ ಎಲ್ ರಾಹುಲ್ ಮತ್ತೊಮ್ಮೆ ಸಾಧಾರಣ ಮೊತ್ತ(25) ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಅಂತಿಮವಾಗಿ ಕರ್ನಾಟಕ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಸಾಧಾರಣ ಮೊತ್ತಕ್ಕೆ ರಾಜಸ್ಥಾನ ಆಲೌಟ್

ಇನ್ನು ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ ತಂಡವು ಕರ್ನಾಟಕದ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ ಮಾರಕ ದಾಳಿಗೆ ತತ್ತರಿಸಿ ಕೇವಲ 174 ರನ್‌ಗಳಿಗೆ ಸರ್ವಪತನ ಕಂಡಿತು. ರಾಜಸ್ಥಾನ ಪರ ಕರಣ್ ಲಾಂಬಾ(55) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕನಿಷ್ಠ 30 ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ದೀಪಕ್ ಹೂಡಾ 29 ರನ್ ಗಳಿಸಿದ್ದೇ ರಾಜಸ್ಥಾನ ಪರ ಎರಡನೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.

ಕರ್ನಾಟಕ ಪರ ಮಾರಕ ದಾಳಿ ನಡೆಸಿದ ಪ್ರಸಿದ್ದ್ ಕೃಷ್ಣ ಕೇವಲ 36 ರನ್ ನೀಡಿ 5 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ ಹಾಗೂ ಶ್ರೀಶಾ ಆಚರ್ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ವೈಶಾಕ್ ವಿಜಯ್ ಕುಮಾರ್ ಒಂದು ವಿಕೆಟ್ ಪಡೆದರು.