ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಸ್ಪರ್ಧಿಸುವ ಸಾಧ್ಯತೆ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತದ ನಂತರ ಹೊಸ ಸಮಿತಿ ರಚನೆಯಾಗಲಿದೆ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಚುನಾವಣೆ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸ್ಪರ್ಧಿಸಲಿದ್ದಾರೆ. ಅವರ ಜೊತೆಗೆ ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಕೂಡಾ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ಕೆಎಸ್‌ಸಿಎ ಉನ್ನತ ಮೂಲಗಳಿಂದ ‘ಕನ್ನಡಪ್ರಭ’ಕ್ಕೆ ಮಾಹಿತಿ ಲಭ್ಯವಾಗಿದೆ.
ಭಾರತದ ಪರ 33 ಟೆಸ್ಟ್, 161 ಏಕದಿನ ಪಂದ್ಯಗಳನ್ನಾಡಿರುವ 56 ವರ್ಷದ ವೆಂಕಟೇಶ್ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರೆ, ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. 12 ವರ್ಷ ಬಳಿಕ ವೆಂಕಟೇಶ್ ಪ್ರಸಾದ್ ಮತ್ತೆ ಕೆಎಸ್‌ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದು, ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೇರಿಸುವ ವಿಶ್ವಾಸ ಹೊಂದಿದ್ದಾರೆ.
ಇನ್ನು, 2019ರಿಂದ 2022ರ ವರೆಗೆ ಕೆಎಸ್‌ಸಿಎ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ವಿನಯ್ ಮೃತ್ಯುಂಜಯ ಕೂಡಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ವಿನಯ್ ಅವರ ಅವಧಿಯಲ್ಲಿ ಕೆಎಸ್‌ಸಿಎ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಈ ಬಾರಿ ಮತ್ತೊಮ್ಮೆ ಕೆಎಸ್‌ಸಿಎಗೆ ಆಯ್ಕೆಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಅವರು ಬಿಸಿಸಿಐ ಆರ್ಥಿಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸದ್ಯ ಕೆಎಸ್‌ಸಿಎಗೆ ರಘುರಾಮ್ ಭಟ್ ಅಧ್ಯಕ್ಷರಾಗಿದ್ದಾರೆ. ಕಾರ್ಯದರ್ಶಿಯಾಗಿದ್ದ ಎ.ಶಂಕರ್, ಖಜಾಂಚಿಯಾಗಿದ್ದ ಇ.ಎಸ್. ಜೈರಾಮ್ ಇತ್ತೀಚೆಗೆ ಸಂಭವಿಸಿದ ಭೀಕರ ಕಾಲ್ತುಳಿತದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಲ್ತುಳಿತದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹಲವು ಮಹತ್ವದ ಟೂರ್ನಿ, ಸರಣಿ ಸ್ಥಳಾಂತರಗೊಂಡಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಹೊಸ ಸಮಿತಿಗೆ ಚಿನ್ನಸ್ವಾಮಿಯ ಗತವೈಭವ ಮರಳಿಸುವುದು ಸೇರಿ ಹಲವು ಸವಾಲುಗಳು ಎದುರಾಗಲಿವೆ.
ಮತ್ತೆ ರಾಜ್ಯ ಕ್ರಿಕೆಟ್‌ನ ಮೇಲೆತ್ತುವ ಸವಾಲು
ಚುನಾವಣೆಯಲ್ಲಿ ಸ್ಪರ್ಧಿಸಲಿರುವ ವೆಂಕಟೇಶ್, ವಿನಯ್ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೇರಿಸುವ ವಿಶ್ವಾಸ ಹೊಂದಿದ್ದಾರೆ. ಈ ಹಿಂದೆ ವಿನಯ್ ಅವರ ಅವಧಿಯಲ್ಲಿ ಕೆಎಸ್‌ಎ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಕ್ರೀಡಾಂಗಣದ ಸಬ್ ಏರ್ ಸಿಸ್ಟಮ್ ಸೇರಿ ಹಲವು ಅಭಿವೃದ್ಧಿ ಕಾರ್ಯಗಳ ಹಿಂದೆ ವಿನಯ್ ಕೊಡುಗೆ ಯಿದೆ. ಸದ್ಯ ಕಾಲ್ತುಳಿತದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹಲವು ಮಹತ್ವದ ಟೂರ್ನಿ, ಸರಣಿ ಸ್ಥಳಾಂತರಗೊಂಡಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಹೊಸ ಸಮಿತಿಗೆ ಚಿನ್ನಸ್ವಾಮಿಯ ಗತವೈಭವ ಮರಳಿಸುವುದು ಸೇರಿ ಹಲವು ಸವಾಲುಗಳು ಎದುರಾಗಲಿವೆ.
ಮಹಾರಾಜ ಟ್ರೋಫಿ ಟಿ20: ಬೆಂಗಳೂರಿಗೆ ಮೊದಲ ಗೆಲುವು
ಮೈಸೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಗೆಲುವು ದಾಖಲಿಸಿದೆ. ಆರಂಭಿಕ 2 ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ತಂಡ ಗುರುವಾರ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 5 ವಿಕೆಟ್‌ಗಳಲ್ಲಿ ಜಯಗಳಿಸಿತು. ಗುಲ್ಬರ್ಗಾ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗಾ 19.5 ಓವರ್‌ಗಳಲ್ಲಿ 112 ರನ್‌ಗೆ ಆಲೌಟಾಯಿತು. 67 ರನ್‌ಗೆ 9 ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಲಾವಿಶ್ ಕೌಶಲ್(30 ಎಸೆತಕ್ಕೆ ಔಟಾಗದೆ 54) 100ರ ಗಡಿ ದಾಟಿಸಿದರು. ಸುಲಭ ಗುರಿ ಬೆನ್ನತ್ತಿದ ಬೆಂಗಳೂರು 14.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಎಲ್.ಆರ್.ಚೇತನ್ ಔಟಾಗದೆ 75 ರನ್ ಗಳಿಸಿದರು.
ಮೊದಲ ಪಂದ್ಯ ರದ್ದು: ಗುರುವಾರ ನಡೆಯಬೇಕಿದ್ದ ಮಂಗಳೂರು ಹಾಗೂ ಮೈಸೂರು ನಡುವಿನ ಮೊದಲ ಪಂದ್ಯ ಭಾರೀ ಮಳೆಯಿಂದಾಗಿ ರದ್ದುಗೊಂಡಿತು. ಇತ್ತಂಡಗಳೂ ತಲಾ 1 ಅಂಕ ಪಡೆದವು.
