ಅಂಡರ್-19 ಏಷ್ಯಾಕಪ್‌ನಲ್ಲಿ, ವೈಭವ್ ಸೂರ್ಯವಂಶಿಯವರ ಸ್ಪೋಟಕ 171 ರನ್‌ಗಳ ನೆರವಿನಿಂದ ಭಾರತ ತಂಡವು ಯುಎಇ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಆರೋನ್ ಜಾರ್ಜ್ ಮತ್ತು ವಿಹಾನ್ ಮಲ್hಹೋತ್ರಾ ಕೂಡಾ ಅರ್ಧಶತಕ ಬಾರಿಸಿ ತಂಡದ ಮೊತ್ತ 433ಕ್ಕೆ ತಲುಪಲು ನೆರವಾದರು.
ದುಬೈ: ವೈಭವ್ ಸೂರ್ಯವಂಶಿಯ ದ್ವಿಶತಕ ವಂಚಿತ ಬ್ಯಾಟಿಂಗ್(171) ಹಾಗೂ ಆರೋನ್ ಜಾರ್ಜ್ ಮತ್ತು ವಿಹಾನ್ ಮಲ್ಹೋತ್ರಾ ಆಕರ್ಷಕ ಅರ್ಧಶತಕಗಳ ನೆರವಿನಿಂದ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಬೃಹತ್ ಮೊತ್ತ ಕಲೆಹಾಕಿದೆ. ನಿಗದಿತ 50 ಓವರ್‌ಗಳಲ್ಲಿ ಭಾರತ ತಂಡವು ಕೇವಲ 6 ವಿಕೆಟ್ ಕಳೆದುಕೊಂಡು 433 ರನ್ ಕಲೆಹಾಕಿದ್ದು, ಆತಿಥೇಯ ಯುಎಇ ತಂಡಕ್ಕೆ ಕಠಿಣ ಗುರಿ ನೀಡಿದೆ.
ಇಲ್ಲಿನ ಐಸಿಸಿ ಅಕಾಡೆಮಿ ಗ್ರೌಂಡ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಭಾರತ ಅಂಡರ್-19 ತಂಡವು ಆಯುಷ್ ಮಾತ್ರೆ(4) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ವೈಭವ್ ಸೂರ್ಯವಂಶಿ ಹಾಗೂ ಆರೋನ್ ಜಾರ್ಜ್ ಎರಡನೇ ವಿಕೆಟ್‌ಗೆ ಬರೋಬ್ಬರಿ 212 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರೋನ್ ಜಾರ್ಜ್ ಕೇವಲ 73 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 69 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಮತ್ತೆ ಅಬ್ಬರಿಸಿದ ವೈಭವ್ ಸೂರ್ಯವಂಶಿ; ದ್ವಿಶತಕ ಮಿಸ್!
ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಆರಂಭಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಬಳಿಕವೂ ಸೂರ್ಯವಂಶಿ ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಯುಎಇ ಎದುರು ಭಾರತದ ವೈಭವ್ ಸೂರ್ಯವಂಶಿ ಕೇವಲ 56 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ವೈಭವ್ ಸೂರ್ಯವಂಶಿ 95 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 14 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 171 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ದ್ವಿಶತಕ ಸಿಡಿಸುವ ಸುವರ್ಣಾವಕಾಶವನ್ನು ವೈಭವ್ ಸೂರ್ಯವಂಶಿ ಕೈಚೆಲ್ಲಿದರು.
ಕೇವಲ 10 ದಿನಗಳ ನಂತರ ಎರಡನೇ ಶತಕ ಚಚ್ಚಿದ ವೈಭವ್ ಸೂರ್ಯವಂಶಿ:
ಭಾರತದ ಪ್ರತಿಭಾನ್ವಿತ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 10 ದಿನಗಳ ಅಂತರದಲ್ಲಿ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೊದಲು ವೈಭವ್ ಸೂರ್ಯವಂಶಿ ಡಿಸೆಂಬರ್ 02ರಂದು ಮಹರಾಷ್ಟ್ರ ಎದುರು ಬಿಹಾರ ಪರ ಅಜೇಯ 108 ರನ್ ಬಾರಿಸಿದ್ದರು. ಇದೀಗ ಅದೇ ಫಾರ್ಮ್ ಮುಂದುವರೆಸುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.
ಇನ್ನುಳಿದಂತೆ ಭಾರತ ಪರ ವಿಹಾನ್ ಮಲ್ಹೋತ್ರಾ 69 ರನ್ ಸಿಡಿಸಿದರೆ, ವೇದಾಂತ್ ತ್ರಿವೇದಿ(38), ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂದು ಅಜೇಯ 32 ಹಾಗೂ ಕನಿಶ್ಕ್ ಚೌಹ್ಹಾಣ್ 28 ರನ್ ಸಿಡಿಸಿ ತಂಡದ ಮೊತ್ತ ನಾನೂರರ ಗಡಿ ದಾಟಿಸಲು ನೆರವಾದರು.

