2023ರ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದ ಕೆಕೆಆರ್ ಬ್ಯಾಟರ್ ವೆಂಕಟೇಶ್ ಅಯ್ಯರ್ಬಿಡುವಿನ ಸಮಯ ಎಂಜಾಯ್ ಮಾಡುತ್ತಿರುವ ತಮಿಳುನಾಡು ಮೂಲದ ಬ್ಯಾಟರ್‌ದೇವಸ್ಥಾನದಲ್ಲಿ ವೇದ ಪಾಠಶಾಲಾ ವಿದ್ಯಾರ್ಥಿಗಳ ಜತೆ ಕ್ರಿಕೆಟ್ ಆಡಿದ ವೆಂಕಿ

ಕಾಂಚಿಪುರಂ(ಜೂ.06): ಇತ್ತೀಚೆಗಷ್ಟೇ ಮುಕ್ತಾಯವಾದ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಬ್ಯಾಟರ್ ವೆಂಕಟೇಶ್ ಅಯ್ಯರ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದರು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 14 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ 404 ರನ್ ಸಿಡಿಸಿದ್ದರು. ಬ್ರೆಂಡನ್ ಮೆಕ್ಕಲಂ ಬಳಿಕ ಕೆಕೆಆರ್ ಪರ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಎರಡನೇ ಬ್ಯಾಟರ್ ಎನ್ನುವ ಕೀರ್ತಿಗೂ ವೆಂಕಿ ಅಯ್ಯರ್ ಪಾತ್ರರಾಗಿದ್ದರು. ವೆಂಕಟೇಶ್ ಅಯ್ಯರ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪ್ಲೇ ಆಫ್‌ ಗೇರಲು ವಿಫಲವಾಗಿತ್ತು. ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ತನ್ನ ಅಭಿಯಾನವನ್ನು ಮುಗಿಸಿತ್ತು. ಇನ್ನು ಐಪಿಎಲ್‌ ಬಳಿಕ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ 29 ವರ್ಷದ ವೆಂಕಿ, ಇದೀಗ ತಮಿಳುನಾಡಿನ ಕಾಂಚಿಪುರಂನಲ್ಲಿನ ದೇವಾಸ್ಥಾನದ ಆವರಣದಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋವನ್ನು ಸ್ವತಃ ವೆಂಕಟೇಶ್ ಅಯ್ಯರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕಾಂಚಿಪುರಂನ ವೇದ ಪಾಠಶಾಲೆಯ ವಿದ್ಯಾರ್ಥಿಗಳ ಜತೆ ಕ್ರಿಕೆಟ್ ಆಡಿರುವುದಾಗಿ ಬರೆದುಕೊಂಡಿದ್ದಾರೆ.

ಕ್ರಿಕೆಟ್‌ ಮೇಲಿನ ಪ್ರೀತಿ ನಂಬಲಸಾಧ್ಯವಾದದ್ದು, ಕಾಂಚಿಪುರಂನ ಯುವ ವೇದ ಪಾಠಶಾಲಾ ವಿದ್ಯಾರ್ಥಿಗಳ ಜತೆ ಕೆಲಕಾಲ ಒಳ್ಳೆಯ ಸಮಯವನ್ನು ಕಳೆದೆ ಎಂದು ವೆಂಕಿ ಅಯ್ಯರ್‌, ವಿಡಿಯೋ ಜತೆಗೆ ಬರೆದುಕೊಂಡಿದ್ದಾರೆ.

View post on Instagram

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ಖಂಡಿತವಾಗಿಯೂ ಮಕ್ಕಳ ಪಾಲಿಗೆ ಕನಸು ನನಸಾದ ಕ್ಷಣವಿದು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೋರ್ವ ನೆಟ್ಟಿಗ, ನಿಮ್ಮ ಮೇಲಿನ ಗೌರವ ಕೋಟಿ ಪಟ್ಟು ಹೆಚ್ಚಾಯಿತು ಎಂದು ಕಮೆಂಟ್ ಮಾಡಿದ್ದಾರೆ. 

ಧೋನಿ-ಜಡ್ಡು ಮನಸ್ತಾಪ ವಿಚಾರ: 'ಮಗಾ ಬಾ ಇಲ್ಲಿ...' ಎನ್ನುತ್ತಾರೆಂದ ವಾಸೀಂ ಅಕ್ರಂ...!

ಐಪಿಎಲ್ ಇತಿಹಾಸದಲ್ಲಿ ವೆಂಕಟೇಶ್ ಅಯ್ಯರ್ ಇದುವರೆಗೂ ಒಟ್ಟು 36 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ 7 ಅರ್ಧಶತಕ ಸಹಿತ 956 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ವೆಂಕಿ ಅಯ್ಯರ್, ಐಪಿಎಲ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ ಪರ 2 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. 

ಇನ್ನು 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ ಅವರ ಸ್ಪೋಟಕ ಶತಕ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಮೆಚ್ಚುಗೆಗೂ ಪಾತ್ರವಾಗಿತ್ತು. ಮುಂಬೈ ಇಂಡಿಯನ್ಸ್ ಎದುರು ವೆಂಕಟೇಶ್ ಅಯ್ಯರ್ ವಿಸ್ಪೋಟಕ ಶತಕ ಸಿಡಿಸಿದ್ದರು.

"ವೆಂಕಟೇಶ್ ಅಯ್ಯರ್ ಅವರೊಬ್ಬ ಸ್ಪೆಷಲ್ ಆಟಗಾರ ಎನ್ನುವುದು ತಾವು ಬಾರಿಸಿದ ಚೊಚ್ಚಲ ಶತಕದ ಮೂಲಕ ಸಾಬೀತುಪಡಿಸಿದ್ದಾರೆ. ಡೇವಿಡ್ ವಾರ್ನರ್, ಕೆ ಎಲ್ ರಾಹುಲ್ ಅವರಂತಹ ಆಟಗಾರರು, ವೆಂಕಟೇಶ್ ಅಯ್ಯರ್ ಅವರ ಈ ಇನಿಂಗ್ಸ್‌ನಿಂದ ನೋಡಿ ಕಲಿಯುವುದಿದೆ ಎಂದು ಭಜ್ಜಿ ಕಿವಿಮಾತು ಹೇಳಿದ್ದರು.