ಧೋನಿ-ಜಡ್ಡು ಮನಸ್ತಾಪ ವಿಚಾರ: 'ಮಗಾ ಬಾ ಇಲ್ಲಿ...' ಎನ್ನುತ್ತಾರೆಂದ ವಾಸೀಂ ಅಕ್ರಂ...!
5ನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಜಡ್ಡು-ಧೋನಿ
ಧೋನಿ-ಜಡೇಜಾ ನಡುವಿನ ಮನಸ್ತಾಪದ ಬಗ್ಗೆ ತುಟಿಬಿಚ್ಚಿದ ವಾಸೀಂ ಅಕ್ರಂ
ನವದೆಹಲಿ(ಜೂ.06): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಿಎಸ್‌ಕೆ ತಂಡವು 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಪಿಲ್ಲರ್ ರೀತಿಯಲ್ಲಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಧೋನಿ ತಮ್ಮ ತಂತ್ರಗಾರಿಕೆ ಮೂಲಕ ನಾಯಕನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ, ಜಡೇಜಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವುದರ ಜತೆಗೆ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರು.
ಗುಜರಾತ್ ಟೈಟಾನ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಮೋಹಿತ್ ಶರ್ಮಾ ಬೌಲಿಂಗ್‌ನ 5ನೇ ಎಸೆತವನ್ನು ಜಡ್ಡು ಸಿಕ್ಸರ್‌ಗಟ್ಟಿದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ಟಿದ್ದರು. ಇನ್ನು 2023ರ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ರವೀಂದ್ರ ಜಡೇಜಾಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಧೋನಿ ಜತೆ ಮನಸ್ತಾಪವಿದೆ ಎನ್ನುವ ಗಾಳಿಸುದ್ದಿಯೊಂದು ಸಾಕಷ್ಟು ಸದ್ದು ಮಾಡಿತ್ತು. ಈ ಕುರಿತಂತೆ ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಂ ತುಟಿಬಿಚ್ಚಿದ್ದು, ಇಂತಹ ಗಾಳಿಸುದ್ದಿಯನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.
"ಧೋನಿ ಅವರೊಬ್ಬ ಮುತ್ತಿನಂತ ಕ್ರಿಕೆಟಿಗ. ಒಂದೇ ತಂಡದ ಪರವಾಗಿ ಅವರು 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಇದೇನು ಸಣ್ಣ ಸಾಧನೆಯಲ್ಲ. ಅವರಿಗೆ ಎಂತಹ ತಂಡವೇ ಕೊಟ್ಟರು ಅದನ್ನು ಫೈನಲ್‌ಗೆ ಕೊಂಡೊಯ್ಯುತ್ತಾರೆ. ಅವರಿಗೆ ಸಾಕಷ್ಟು ಅನುಭವವಿದೆ, ತಾಳ್ಮೆಯಿದೆ, ಕ್ರಿಕೆಟ್ ಜ್ಞಾನವಿದೆ. ನೀವು ಎಷ್ಟು ಫಿಟ್ ಆಗಿದ್ದೀರಿ ಎನ್ನುವುದಕ್ಕಿಂತ ಕ್ರಿಕೆಟ್ ಕುರಿತಾಗಿ ನೀವೆಷ್ಟು ಆಸಕ್ತಿ ಹೊಂದಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಅದು ಧೋನಿ ಬಳಿ ಇದೆ" ಎಂದು ಅಕ್ರಂ ಹೇಳಿದ್ದಾರೆ.
ಕ್ರೀಡಾ ವೆಬ್‌ಸೈಟ್ Sportskeeda ಜತೆ ಮಾತನಾಡಿರುವ ಅಕ್ರಂ, ಧೋನಿ ಹಾಗೂ ಜಡೇಜಾ ನಡುವಿನ ಮನಸ್ತಾಪದ ಕುರಿತಂತೆಯೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. " ಇವೆಲ್ಲವೂ ಸಾಮಾಜಿಕ ಜಾಲತಾಣದ ಗಾಳಿಸುದ್ದಿಗಳಷ್ಟೇ. ಈಗಂತೂ ಎಲ್ಲೋ ಒಂದು ಮೂಲೆಯಲ್ಲಿ ಕೂತುಕೊಂಡು ಸ್ಟೋರಿ ಬರೆಯುತ್ತಾರೆ. ಅದು ವೈರಲ್ ಆಗುತ್ತದೆ. ಜಡೇಜಾಗೆ ಆತ್ಮವಿಶ್ವಾಸ ತುಂಬಿದ್ದೇ ಧೋನಿ. ಧೋನಿಯ ಗರಡಿಯಲ್ಲಿ ಜಡೇಜಾ ಸಾಕಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಒಂದು ವೇಳೆ ಈ ರೀತಿ ಮನಸ್ತಾಪ ಇದ್ದಿದ್ದೇ ಆದರೆ, ಸ್ವತಃ ಧೋನಿ, ಜಡೇಜಾ ಅವರನ್ನು ಕರೆದು, "ಮಗಾ ಇಲ್ಲಿ ಬಾ ಎಂದು ಕರೆದು ಎಲ್ಲಾ ಗೊಂದಲಗಳನ್ನು ತಿಳಿಗೊಳಿಸುತ್ತಿದ್ದರು' ಎಂದು ಅಕ್ರಂ ಹೇಳಿದ್ದಾರೆ.
ಮದುವೆಗೂ ಮುನ್ನ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಗಾಯಕ್ವಾಡ್ ಭಾವಿಪತ್ನಿ ಉತ್ಕರ್ಷ..! ವಿಡಿಯೋ ವೈರಲ್
"ಇನ್ನು ಸ್ವತಃ ಜಡೇಜಾ ಕೂಡಾ ಈಗಾಗಲೇ ಹೇಳಿದ್ದಾರೆ, ನನ್ನ ಯಶಸ್ಸಿನ ಹಿಂದೆ ಕ್ಯಾಪ್ಟನ್ ಧೋನಿಯ ಪಾತ್ರವಿದೆ ಎಂದು. ಇದನ್ನೇ ಹೇಳುವುದು, ನಾಯಕನಾಗಿ ತಂಡವನ್ನು ಮುನ್ನಡೆಸುವುದು ಎಂದು. ವಿಶ್ವದ ಅತ್ಯಂತ ಕಠಿಣ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ 5 ಟ್ರೋಫಿ ಗೆದ್ದ ಚೆನ್ನೈ ಹಾಗೂ ಧೋನಿ ಸಾಧನೆಯ ಬಗ್ಗೆ ಹೆಮ್ಮೆಪಡುವಂತಹದ್ದು. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ" ಎಂದು ವಾಸೀಂ ಅಕ್ರಂ ಹೇಳಿದ್ದಾರೆ.
ಇನ್ನು ಐಪಿಎಲ್ ಟ್ರೋಫಿ ಜಯಿಸಿದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರವೀಂದ್ರ ಜಡೇಜಾ, ಈ ಟ್ರೋಫಿ ಗೆದ್ದಿದ್ದು ನಿಮಗಾಗಿ. ನಿಮಗಾಗಿ ನಾವು ಏನುಬೇಕಾದರೂ ಮಾಡಬಲ್ಲೇ ಎನ್ನುವ ಮೂಲಕ ಸ್ವತಃ ಜಡ್ಡು ಗಾಳಿಸುದ್ದಿಗೆ ತೆರೆ ಎಳೆದಿದ್ದರು.