ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ನೀಡಿದ ಕಿವಿಮಾತನ್ನು ಮರೆತಂತೆ ವರ್ತಿಸಿರುವ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಆಟಗಾರರೊಂದಿಗೆ ಮೈದಾನದಲ್ಲೇ ಜಗಳವಾಡಿದ್ದಾರೆ. ಈ ಹಿಂದೆ ಕೂಡಾ ಇದೇ ರೀತಿ ಆಕ್ರಮಣಕಾರಿ ವರ್ತನೆ ತೋರಿದ್ದ ವೈಭವ್, ತಮ್ಮ ಪ್ರತಿಭೆಯ ಜೊತೆಗೆ ಕ್ರೀಡಾಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂಬುದು ಲೇಖನದ ಸಾರ.
ಬೆಂಗಳೂರು: ಎರಡು ವಾರಗಳ ಹಿಂದಷ್ಟೇ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 15 ವರ್ಷದ ಯುವ ಪ್ರತಿಭಾನ್ವಿತ ಬ್ಯಾಟರ್ ವೈಭವ್ ಸೂರ್ಯವಂಶಿ ಹೆಗಲ ಮೇಲೆ ಕೈಹಾಕಿ ಒಂದಷ್ಟು ಒಳ್ಳೆಯ ಕಿವಿಮಾತು ಹೇಳಿದ್ದರು. ಇದಾಗಿ ತಿಂಗಳು ತುಂಬುವುದರೊಳಗೆ ವೈಭವ್ ಸೂರ್ಯವಂಶಿ, ಕೊಹ್ಲಿಯ ಮಾತನ್ನು ಗಾಳಿಗೆ ತೂರುವ ಕೆಲಸ ಮಾಡಿದ್ದಾರೆ.
"ಯಾರು ಏನೇ ಹೇಳಿದರೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ" ಇದು ಐಪಿಎಲ್ ಫೈನಲ್ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ, ವೈಭವ್ ಸೂರ್ಯವಂಶಿ ಅವರನ್ನು ಉದ್ದೇಶಿಸಿ ಹೇಳಿದ ಮಾತಿದು. 2026ರ ಐಪಿಎಲ್ ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅಕ್ಷರಶಃ ವೈಭವ್ ಸೂರ್ಯವಂಶಿಯ ಹಿರಿಯಣ್ಣನಂತೆ ಹೆಗಲ ಮೇಲೆ ಕೈಹಾಕಿ ಆತ್ಮೀಯವಾಗಿ ಕಿವಿಮಾತು ಹೇಳಿದ್ದರು. ಈ ಬಗ್ಗೆ ಮಾತನಾಡಿದ್ದ ವೈಭವ್ ಸೂರ್ಯವಂಶಿ, ಇದೊಂಥರ ಕನಸಿನಂತೆ ಫೀಲ್ ಆಗುತ್ತಿದೆ ಎಂದೆಲ್ಲಾ ಹೇಳಿದ್ದರು.
ಮೈದಾನದಲ್ಲೇ ಕಿರಿಕ್ ಮಾಡಿಕೊಂಡ ವೈಭವ್ ಸೂರ್ಯವಂಶಿ:
ಸೋಮವಾರ ತ್ರಿಕೋನ ಸರಣಿಯಲ್ಲಿ ರೋಚಕ ಪಂದ್ಯದ ಬಳಿಕ ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆದು, ಪರಸ್ಪರ ದೂಡಿದ ಘಟನೆಯೂ ನಡೆಯಿತು.
ಸೂಪರ್ ಓವರ್ ಗೆದ್ದ ನಂತರ ಲಂಕಾ ಆಟಗಾರರು ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ವೈಭವ್ ಪೆವಿಲಿಯನ್ ಕಡೆ ಹೋಗುತ್ತಿದ್ದರು. ಆಗ ಸೂರ್ಯಾನ್ಶ್ ಹಾಗೂ ವೈಭವ್‌ರನ್ನು ಲಂಕಾ ಆಟಗಾರರು ಕೆಣಕಿದ್ದಾರೆ. ಈ ವೇಳೆ ಅವರ ಹತ್ತಿರ ಹೋದ ವೈಭವ್, ವಿಶೇನ್ ಹಾಲಂಬಗೆಯನ್ನ ತಳ್ಳಿದ್ದಾರೆ. ಅವರು ಕೂಡ ವೈಭವ್‌ರನ್ನು ತಳ್ಳಿದ್ದಾರೆ. ಆಗ ಇತರ ಆಟಗಾರರು ಮಧ್ಯಪ್ರವೇಶಿಸಿದ್ದಾರೆ. ಬಳಿಕ ವೈಭವ್ ಲಂಕಾ ಆಟಗಾರರ ಕಡೆ ಕೈ ತೋರಿಸಿ ಕೋಪದಲ್ಲಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈಭವ್ ಸೂರ್ಯವಂಶಿ ಮೈದಾನದಲ್ಲಿ ಸಿಟ್ಟಾಗಿದ್ದು ಇದೇ ಮೊದಲ ಸಲವೇನಲ್ಲ!
ಅಂದಹಾಗೆ ವೈಭವ್ ಸೂರ್ಯವಂಶಿ, ಮೈದಾನದಲ್ಲಿ ತಾಳ್ಮೆ ಕಳೆದುಕೊಂಡಿದ್ದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದಷ್ಟೇ ದುಬೈನಲ್ಲಿ ನಡೆದ ಐಸಿಸಿ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ತಂಡವು 348 ರನ್‌ಗಳ ಕಠಿಣ ಗುರಿ ಬೆನ್ನತ್ತಿತ್ತು. ಭಾರತ ಪರ ಇನ್ನಿಂಗ್ಸ್ ಆರಂಭಿಸಿದ್ದ ವೈಭವ್ ಸೂರ್ಯವಂಶಿ ಕೇವಲ 10 ಎಸೆತಗಳಲ್ಲಿ 26 ರನ್ ಚಚ್ಚಿದ್ದರು. ಬಳಿಕ ಪಾಕಿಸ್ತಾನದ ವೇಗಿ ಅಲಿ ರಾಜಾ, ವೈಭವ್ ವಿಕೆಟ್ ಪಡೆದು ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದರು. ಇದಷ್ಟೇ ಅಲ್ಲದೇ ವೈಭವ್ ಅವರನ್ನು ಬೊಟ್ಟು ಮಾಡಿ ಇದು ಅಬ್ಬರಿಸಲು ನಿಮ್ಮ ಐಪಿಎಲ್ ಅಲ್ಲ ಎಂಬರ್ಥದಲ್ಲಿ ಹೇಳಿದ್ದರು. ಆಗ ಪೆವಿಲಿಯನ್‌ನತ್ತ ವಾಪಾಸ್ಸಾಗುತ್ತಿದ್ದ ವೈಭವ್ ಸೂರ್ಯವಂಶಿ, ಪಾಕ್ ಬೌಲರ್‌ಗೆ ನೀವು ನನ್ನ ಕಾಲಿನ ಧೂಳಿಗೆ ಸಮವಲ್ಲ ಎಂಬರ್ಥದ ಸನ್ಹೆ ಮಾಡಿದ್ದರು. ಆ ವಿಡಿಯೋ ಕೂಡಾ ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕೇವಲ 15ನೇ ವಯಸ್ಸಿಗೆ ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಕಗಿಸೋ ರಬಾಡ ಅವರಂತಹ ವಿಶ್ವದರ್ಜೆಯ ಬೌಲರ್‌ಗಳನ್ನು ಚೆಂಡಾಡಿರುವ ವೈಭವ್ ತನ್ನ ಸಾಮರ್ಥ್ಯ ಅನಾವರಣ ಮಾಡಿದ್ದಾರೆ. ಆದರೆ ಓರ್ವ ಕ್ರಿಕೆಟಿಗನಾಗಿ ಸೂರ್ಯವಂಶಿ ಕೊಂಚ ಪಳಗಬೇಕು ಜತೆಗೆ ಕ್ರೀಡಾಸ್ಪೂರ್ತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.


