ಶ್ರೀಲಂಕಾ ವಿರುದ್ಧ ಅಜೇಯ 131 ರನ್ ಸಿಡಿಸಿದ ನಂತರ ದೇವದತ್ ಪಡಿಕ್ಕಲ್ ತೀವ್ರ ಭಾವುಕರಾದರು. ರಾಷ್ಟ್ರೀಯ ತಂಡದಿಂದ ದೂರವಿದ್ದ ಕಳೆದ ಒಂದೂವರೆ ವರ್ಷಗಳಲ್ಲಿ ಪಟ್ಟ ಕಠಿಣ ಪರಿಶ್ರಮ ಮತ್ತು ಅನುಭವಿಸಿದ ಮಾನಸಿಕ ಸಂಘರ್ಷದ ಫಲವೇ ಈ ಶತಕ ಎಂದು ಅವರು ತಿಳಿಸಿದರು.

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಟೀಮ್ ಇಂಡಿಯಾದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ (Devdutt Padikkal) ಅತ್ಯಂತ ಭಾವುಕರಾಗಿದ್ದಾರೆ. ಶತಕದ ನಂತರ ಮಾತನಾಡಿದ ಅವರು, ಈ ಒಂದು ಇನಿಂಗ್ಸ್‌ಗಾಗಿ ಕಳೆದ ಒಂದೂವರೆ ವರ್ಷಗಳಿಂದ ತಾವು ಅನುಭವಿಸಿದ ಮಾನಸಿಕ ಸಂಘರ್ಷ ಮತ್ತು ಪಟ್ಟ ಶ್ರಮವನ್ನು ಹಂಚಿಕೊಂಡಿದ್ದಾರೆ.

ಬೆಂಚ್ ಮೇಲೆ ಕೂರುವುದು ಸುಲಭವಲ್ಲ

2024ರ ಆರಂಭದಲ್ಲಿ ಪರ್ತ್ ಟೆಸ್ಟ್ ಆಡಿದ ನಂತರ ಪಡಿಕ್ಕಲ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸುದೀರ್ಘ ಕಾಲ ಕಾಯಬೇಕಾಯಿತು. ಈ ಬಗ್ಗೆ ಬಿಸಿಸಿಐ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅವರು, ಯಾವುದೇ ಕ್ರೀಡಾಪಟುವಿಗೂ ಬೆಂಚ್ ಮೇಲೆ ಕುಳಿತು ಬೇರೆಯವರು ಆಡುವುದನ್ನು ನೋಡುವುದು ಸುಲಭವಲ್ಲ. ಆ ಸಮಯದಲ್ಲಿ ಮಾನಸಿಕವಾಗಿ ಧೃತಿಗೆಡದೆ, ನನ್ನ ಬ್ಯಾಟಿಂಗ್‌ನಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದೆ. ಆ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿರುವುದು ಎದೆಯನ್ನು ತುಂಬಿ ಬರುವಂತೆ ಮಾಡಿದೆ ಎಂದು ಭಾವುಕರಾಗಿ ನುಡಿದರು.

ಗಾಲೆ ಮೈದಾನದ ಹವಾಮಾನದ ಬಗ್ಗೆ ವಿವರಿಸಿದ ಪಡಿಕ್ಕಲ್, ಅಲ್ಲಿ ವಿಪರೀತ Humidity ಇತ್ತು. ಬೆವರಿನಿಂದಾಗಿ ದೇಹ ಬಹಳ ಸುಸ್ತಾಗುತ್ತಿತ್ತು. ವಿಶೇಷವಾಗಿ ಮೂರನೇ ಸೆಷನ್‌ನಲ್ಲಿ ದೇಹ ಸಹಕರಿಸದಿದ್ದರೂ ವಿಕೆಟ್ ಕಳೆದುಕೊಳ್ಳಬಾರದು ಎಂಬ ಏಕಾಗ್ರತೆಯಿಂದ ಬ್ಯಾಟಿಂಗ್ ಮುಂದುವರಿಸಿದೆ. ಪಿಚ್ ಬ್ಯಾಟಿಂಗ್‌ಗೆ ಅಷ್ಟು ಸುಲಭವಾಗಿರಲಿಲ್ಲ. ಅನಗತ್ಯ ಶಾಟ್‌ಗಳನ್ನು ಆಡದೆ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವುದೇ ನನ್ನ ಗುರಿಯಾಗಿತ್ತು ಎಂದರು. ಶತಕಕ್ಕೆ ಹತ್ತಿರವಾದಾಗ ಸ್ವಲ್ಪ ಆತಂಕವಿತ್ತು, ಆದರೆ ಅದನ್ನು ಮೆಟ್ಟಿ ನಿಂತು ಸಿಡಿಸಿದ ಈ ಶತಕ ಕೆರಿಯರ್‌ನಲ್ಲೇ ಸ್ಪೆಷಲ್ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಸಾಯಿ ಸುದರ್ಶನ್ ಅವರಿಗೆ ಗಾಯವಾದ ಕಾರಣ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡಿಕ್ಕಲ್‌ಗೆ ಸಿಕ್ಕಿತ್ತು. ಈ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಟೆಸ್ಟ್ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲೂ ಅವರು ಶತಕ ಬಾರಿಸಿದ್ದರು. ವಿಜಯ್ ಹಜಾರೆ, ರಣಜಿ ಟ್ರೋಫಿ ಮತ್ತು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಪಡಿಕ್ಕಲ್, ಆ ಫಾರ್ಮ್ ಅನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಮುಂದುವರಿಸಿದ್ದಾರೆ.

ತಂಡದ ಮೊತ್ತ 47 ರನ್ ಆಗಿದ್ದಾಗ ಯಶಸ್ವಿ ಜೈಸ್ವಾಲ್ ಔಟಾದ ನಂತರ ಕ್ರೀಸ್‌ಗೆ ಬಂದ ಪಡಿಕ್ಕಲ್, ಅನುಭವಿ ಕೆಎಲ್ ರಾಹುಲ್ ಜೊತೆಗೂಡಿ 150 ರನ್‌ಗಳ ಅಮೋಘ ಜೊತೆಯಾಟವಾಡಿದರು. ರಾಹುಲ್ 77 ರನ್‌ಗಳಿಗೆ 'ರಿಟೈರ್ಡ್ ಹರ್ಟ್' ಆಗಿ ಹೊರನಡೆದ ನಂತರವೂ ಪಡಿಕ್ಕಲ್ ಎದೆಗುಂದದೆ ರಿಷಬ್ ಪಂತ್ ಜೊತೆಗೂಡಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಒಟ್ಟು ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 230 ಬಾಲ್‌ಗಳನ್ನ ಎದುರಿಸಿರುವ ಅವರು, 167 ರನ್‌ಗಳಿಸಿ ಔಟ್ ಆದರು. ಒಟ್ಟಾರೆಯಾಗಿ ಕನ್ನಡಿಗ ಪಡಿಕ್ಕಲ್ ಅವರ ಈ ಶತಕ ಅವರ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಜಯವಾಗಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.