ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಬೆಂಚ್ ಮೇಲೆ ಕೂರಿಸಿದ್ದಕ್ಕಾಗಿ ಅವರ ಮಾಜಿ ಕೋಚ್ ಮನೀಶ್ ಓಜಾ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತು ಗೌತಮ್ ಗಂಭೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಾವಂತ ಆಟಗಾರನಿಗೆ ಸತತ ಅವಕಾಶ ನೀಡದಿರುವುದು ಅನ್ಯಾಯ ಹಾಗೂ ಇದು ಆತನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಮುಂಬೈ: ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮಾಜಿ ಕೋಚ್ ಮನೀಶ್ ಓಜಾ, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಹಾಗೂ ಕೋಚ್ ಗೌತಮ್ ಗಂಭೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಈಗ ಸರ್ವಾಧಿಕಾರ ನಡೆಯುತ್ತಿದೆ. ವೈಭವ್‌ಗೆ ಆಡಲು ಅವಕಾಶ ನೀಡದೆ ಬೆಂಚ್ ಮೇಲೆ ಕೂರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮನೀಶ್ ಓಜಾ ನೇರವಾಗಿ ಟೀಕಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ ಅವಕಾಶ ನೀಡದೇ ಇರುವುದು ಅನ್ಯಾಯ!

ವೈಭವ್‌ರಂತಹ ಅದ್ಭುತ ಪ್ರತಿಭೆ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಕೊಡದಿರುವುದು ನಿಜಕ್ಕೂ ಅನ್ಯಾಯ. ಟೀಂ ಮ್ಯಾನೇಜ್‌ಮೆಂಟ್ ಪ್ರತಿಭಾವಂತ ಆಟಗಾರರಿಗೆ ಸತತ ಅವಕಾಶಗಳನ್ನು ನೀಡಬೇಕು. ಆಗ ಮಾತ್ರ ಅವರು ಪಂದ್ಯದ ಒತ್ತಡವನ್ನು ನಿಭಾಯಿಸಲು ಮತ್ತು ತಮ್ಮ ಆಟವನ್ನು ಸುಧಾರಿಸಿಕೊಳ್ಳಲು ಸಾಧ್ಯ. ಆದರೆ, ಟೀಂ ಇಂಡಿಯಾ ಆಟಗಾರರನ್ನು ಬೆಂಚ್ ಮೇಲೆ ಕೂರಿಸಿ ಬೆಳೆಸುವ ವಿಚಿತ್ರ ಸಂಪ್ರದಾಯವನ್ನು ಅನುಸರಿಸುತ್ತಿದೆ. ಬೆಂಚ್ ಮೇಲೆ ಕೂತು ಯಾವ ಆಟಗಾರನೂ ಬೆಳೆದಿಲ್ಲ ಎಂದು ಓಜಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸತತ ಪಂದ್ಯಗಳಲ್ಲಿ ಹೊರಗುಳಿಯುತ್ತಿರುವುದು ವೈಭವ್ ಅವರ ಆತ್ಮವಿಶ್ವಾಸದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಓಜಾ ಆತಂಕ ವ್ಯಕ್ತಪಡಿಸಿದ್ದಾರೆ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಈ ಸುದೀರ್ಘ ಸಮಯ ವೈಭವ್ ಅವರ ಪ್ರದರ್ಶನ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರಬಹುದು ಎಂದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ವೈಭವ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಮಾಜಿ ಕೋಚ್, ನಾಲ್ಕನೇ ಪಂದ್ಯದಲ್ಲೂ ಅವರು ಬೆಂಚ್ ಕಾಯುವ ಸಾಧ್ಯತೆಯಿದೆ ಎಂಬ ಮಾಹಿತಿ ಹೊರಬೀಳುತ್ತಿರುವ ಬೆನ್ನಲ್ಲೇ ಈ ಕಟು ಪ್ರತಿಕ್ರಿಯೆ ನೀಡಿದ್ದಾರೆ.

19 ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಿಂದ ಹೊರಗೆ:

ಐಪಿಎಲ್ ಹಾಗೂ ಜೂನಿಯರ್ ಕ್ರಿಕೆಟ್ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ವೈಭವ್ ಸೂರ್ಯವಂಶಿಯನ್ನು 2026ರ ಜೂನ್‌ನಲ್ಲಿ ಟೀಂ ಇಂಡಿಯಾಗೆ ಆಯ್ಕೆ ಮಾಡಲಾಯಿತು. ಮೊದಲಿಗೆ ಐರ್ಲೆಂಡ್ ಎದುರಿನ ಸರಣಿಯಲ್ಲಿ ಸ್ಥಾನ ಪಡೆದರೂ ಅಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದಾದ ಬಳಿಕ ಕಳೆದ ಜುಲೈನಲ್ಲಿ ಇಂಗ್ಲೆಂಡ್ ಎದುರು ಟೀಂ ಇಂಡಿಯಾಗೆ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತಿ ಕಿರಿಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಸೂರ್ಯವಂಶಿ ಪಾತ್ರರಾಗಿದ್ದರು.

ವೈಭವ್ ಸೂರ್ಯವಂಶಿ ಇದುವರೆಗೂ ಭಾರತ ಪರ 8 ಟಿ20 ಪಂದ್ಯಗಳನ್ನಾಡಿದ್ದು, 30.75ರ ಬ್ಯಾಟಿಂಗ್ ಸರಾಸರಿಯಲ್ಲಿ 246 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ವೈಭವ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ಭಾರತ ತಂಡವು ಇದುವರೆಗೂ 19 ಪಂದ್ಯಗಳನ್ನು ಆಡಿದೆ. ಈ ಪೈಕಿ ವೈಭವ್‌ಗೆ 11 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.