12 ವರ್ಷಗಳ ಕಾಲ ಕತ್ತಲೆಯನ್ನು ಉಂಡಿದ್ದ ಆ ಕಣ್ಣುಗಳು ಅಂದು ಬೆಳಕನ್ನು ನೋಡಿ ಬೆರಗಾದವು. ನಮ್ಮ ಪಾಲಿಗೆ ಸುವೇಂದು ಅಧಿಕಾರಿ ಅವರು ಸಾಕ್ಷಾತ್ ದೇವರಂತೆ ಬಂದರು ಎಂದು ಕೃಷ್ಣ ಬೌರಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಅಷ್ಟಕ್ಕೂ ಏನಾಗಿತ್ತು? ಈ ಸ್ಟೋರಿ ಓದಿ..
ಪುರುಲಿಯಾ: ಬಡತನ ಎನ್ನುವುದು ಕೇವಲ ಹಸಿವಿನ ಹೆಸರಲ್ಲ, ಅದು ಕೆಲವೊಮ್ಮೆ ಅಸಹಾಯಕತೆಯ ಪರಮಾವಧಿ. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಸೈಕಲ್ ರಿಪೇರಿ ಮಾಡುವ ಕೃಷ್ಣ ಬೌರಿ ಎಂಬ ಬಡವನ ಕುಟುಂಬಕ್ಕೆ ಕಳೆದ 12 ವರ್ಷಗಳು ಕೇವಲ ಕತ್ತಲೆಯ ರಾತ್ರಿಯಾಗಿಯೇ ಉಳಿದಿದ್ದವು. ಹನ್ನೆರಡು ವರ್ಷಗಳ ಕಾಲ ಸೂರ್ಯ ಮುಳುಗಿದ ಮೇಲೆ ಆ ಮನೆಯಲ್ಲಿ ದೀಪ ಬೆಳಗುತ್ತಿರಲಿಲ್ಲ. ಆದರೆ ಈಗ, ಕೇವಲ 12 ದಿನಗಳಲ್ಲಿ ಆ ಮನೆಯ ಹಣೆಬರಹ ಬದಲಾಗಿದೆ!
ಕತ್ತಲೆಯಲ್ಲೇ ಕಮರಿಹೋದ ಮಗನ ಕನಸು
ಕೃಷ್ಣ ಬೌರಿ ಅವರಿಗೆ ಇಬ್ಬರು ಮಕ್ಕಳು. ಹೊಟ್ಟೆ ಹಸಿವಿದ್ದರೂ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಬಾರದು ಎಂದು ಅವರು ಹಗಲಿರುಳು ಸೈಕಲ್ ಚಕ್ರಗಳನ್ನು ರಿಪೇರಿ ಮಾಡುತ್ತಿದ್ದರು. ಮಗಳು ಹೇಗೋ ಕಷ್ಟಪಟ್ಟು ನರ್ಸಿಂಗ್ ಓದಿ ಬದುಕಿಗೆ ಆಸರೆಯಾದಳು. ಆದರೆ ಮಗ? ಆತನ ಕಣ್ಣಲ್ಲಿ ದೊಡ್ಡ ಕನಸುಗಳಿದ್ದವು. ಆದರೆ ಮನೆಯಲ್ಲಿ ಒಂದು ದೀಪವಿಲ್ಲದ ಮೇಲೆ ಆತ ಓದುವುದಾದರೂ ಹೇಗೆ? ಹತ್ತನೇ ತರಗತಿಯ ನಂತರ ಓದಬೇಕೆಂಬ ಆಸೆಯಿದ್ದರೂ, ರಾತ್ರಿಯ ಕತ್ತಲೆ ಆತನ ಕನಸನ್ನು ನುಂಗಿಹಾಕಿತು. ಬೆಳಕಿಲ್ಲದ ಕಾರಣ ಆತ ಓದನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಮನೆಯಲ್ಲಿ ಬೆಳಕಿದ್ದಿದ್ದರೆ ನನ್ನ ಮಗ ಇಂದು ದೊಡ್ಡ ಕೆಲಸದಲ್ಲಿರುತ್ತಿದ್ದ ಎಂದು ಕೃಷ್ಣ ಬೌರಿ ಹೇಳುವಾಗ ಅವರ ಧ್ವನಿ ಗದ್ಗದಿತವಾಗಿತ್ತು.

ದರ್ಪ ಮತ್ತು ದೌರ್ಭಾಗ್ಯದ ನಡುವೆ ಹೋರಾಟ
ಇದು ಬರೀ ಹಣದ ಕೊರತೆಯಾಗಿರಲಿಲ್ಲ. ಅಕ್ಕಪಕ್ಕದ ಮನೆಯವರ ದರ್ಪ ಮತ್ತು ಭೂ ವಿವಾದದ ನೆಪದಲ್ಲಿ ಬಡವನ ಮನೆಗೆ ವಿದ್ಯುತ್ ತಂತಿ ಬರಬಾರದು ಎಂಬ ಕ್ರೌರ್ಯ ಆ ಕುಟುಂಬವನ್ನು ಕತ್ತಲೆಯಲ್ಲಿ ಇಟ್ಟಿತ್ತು. ಹನ್ನೆರಡು ವರ್ಷಗಳ ಕಾಲ ಕೃಷ್ಣ ಬೌರಿ ಪ್ರತಿಯೊಬ್ಬ ಅಧಿಕಾರಿಯ ಕಾಲು ಹಿಡಿದರು, ಹತ್ತಾರು ಅರ್ಜಿಗಳನ್ನು ಹಿಡಿದು ಕಚೇರಿ ಕಚೇರಿ ಅಲೆದರು. ಆದರೆ ಯಾರೊಬ್ಬರೂ ಆ ಬಡವನ ಕಣ್ಣೀರನ್ನು ಕಾಣಲಿಲ್ಲ.
ಭರವಸೆಯ ಬೆಳಕಾಗಿ ಬಂದ ಜನತಾ ದರ್ಬಾರ್
ಎಲ್ಲಾ ಬಾಗಿಲುಗಳು ಮುಚ್ಚಿದಾಗ, ಕೃಷ್ಣ ಬೌರಿಯ ಪತ್ನಿ ಕಲ್ಪನಾ ಮತ್ತು ಅವರ ಮಗಳು ಕೊನೆಯ ಆಸೆಯೊಂದಿಗೆ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದರು. ಜುಲೈ 13 ರಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ 'ಜನತಾ ದರ್ಬಾರ್' ಮೆಟ್ಟಿಲೇರಿದರು. ನೂರಾರು ಜನರ ನಡುವೆ ನಿಂತು ತಮ್ಮ 12 ವರ್ಷಗಳ ನೋವನ್ನು ಹಂಚಿಕೊಂಡರು. ಅಲ್ಲಿ ಅವರ ದೂರನ್ನು ದಾಖಲಿಸಿಕೊಂಡ ಅಧಿಕಾರಿಗಳು, ಚಿಂತಿಸಬೇಡಿ, ನಿಮ್ಮ ಮನೆಗೆ ಬೆಳಕು ಬರುತ್ತದೆ ಎಂಬ ಭರವಸೆ ನೀಡಿದರು. ಆ ಒಂದು ಮಾತು ಆ ಕುಟುಂಬದ ಪಾಲಿಗೆ ದೈವವಾಣಿಯಂತೆ ಕೇಳಿಸಿತು.
12 ವರ್ಷಗಳ ನೋವಿಗೆ 12 ದಿನಗಳಲ್ಲಿ ಸಿಕ್ಕ ನ್ಯಾಯ!
ಮುಖ್ಯಮಂತ್ರಿ ಕಚೇರಿಯಿಂದ ಬಂದ ಒಂದೇ ಒಂದು ಫೋನ್ ಕರೆ ಇಡೀ ವ್ಯವಸ್ಥೆಯನ್ನೇ ಎಚ್ಚರಿಸಿತು. 12 ವರ್ಷಗಳಿಂದ ಕದಲದ ಕಡತಗಳು ಕೇವಲ 12 ದಿನಗಳಲ್ಲಿ ವಿಲೇವಾರಿಯಾದವು. ಪೊಲೀಸರು ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ವತಃ ಸ್ಥಳಕ್ಕೆ ಬಂದು, ಅಡ್ಡಿಪಡಿಸುತ್ತಿದ್ದವರ ಬಾಯಿ ಮುಚ್ಚಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಶುಕ್ರವಾರ ಸಂಜೆ.. ಕೃಷ್ಣ ಬೌರಿಯ ಮನೆಯ ಮೂಲೆಯಲ್ಲಿದ್ದ ಆ ಒಂದು ಬಲ್ಬ್ ಮಿನುಗಿದಾಗ, ಇಡೀ ಕುಟುಂಬದ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. 12 ವರ್ಷಗಳ ಕಾಲ ಕತ್ತಲೆಯನ್ನು ಉಂಡಿದ್ದ ಆ ಕಣ್ಣುಗಳು ಅಂದು ಬೆಳಕನ್ನು ನೋಡಿ ಬೆರಗಾದವು. ನಮ್ಮ ಪಾಲಿಗೆ ಸುವೇಂದು ಅಧಿಕಾರಿ ಅವರು ಸಾಕ್ಷಾತ್ ದೇವರಂತೆ ಬಂದರು ಎಂದು ಕೃಷ್ಣ ಬೌರಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಮನೆಯ ಕತ್ತಲೆ ದೂರವಾಗಿದೆಯೇನೋ ನಿಜ, ಆದರೆ ಕತ್ತಲೆಯಿಂದಾಗಿ ಮಗನ ಕಳೆದುಹೋದ ವಿದ್ಯಾಭ್ಯಾಸದ ವರ್ಷಗಳ ನೋವು ಆ ಬೆಳಕಿನಲ್ಲೂ ಕೃಷ್ಣ ಬೌರಿ ಅವರಿಗೆ ಕಾಡುತ್ತಿತ್ತು. ಆದರೂ, ಇನ್ಮುಂದೆ ನನ್ನ ಮೊಮ್ಮಕ್ಕಳಾದರೂ ಬೆಳಕಿನಲ್ಲಿ ಓದುತ್ತಾರಲ್ಲ ಎಂಬ ಸಮಾಧಾನ ಆ ತಂದೆಯ ಮುಖದಲ್ಲಿ ಕಂಡಿತು.


