ದಂಬುಲ್ಲಾದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ತ್ರಿಕೋನ ಸರಣಿಯ ಪಂದ್ಯವು ಸೂಪರ್ ಓವರ್‌ನಲ್ಲಿ ಅಂತ್ಯಗೊಂಡಿದ್ದು, ಶ್ರೀಲಂಕಾ 'ಎ' ಜಯ ಸಾಧಿಸಿತು. ಪಂದ್ಯದ ನಂತರ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅಂಪೈರ್ ತೀರ್ಪುಗಳ ಬಗ್ಗೆಯೂ ಗೊಂದಲ ಸೃಷ್ಟಿಯಾಗಿತ್ತು.
ದಂಬುಲ್ಲಾ (ಜೂ.15): ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವಿನ ತ್ರಿಕೋನ ಸರಣಿಯ ಪಂದ್ಯವು ಅತ್ಯಂತ ರೋಚಕ, ಹೈ-ಡ್ರಾಮಾ ಮತ್ತು ಮೈದಾನದ ಆಕ್ರೋಶಕ್ಕೆ ಸಾಕ್ಷಿಯಾಯಿತು.. ಸೂಪರ್ ಓವರ್‌ವರೆಗೂ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದಲ್ಲಿ ಅಂತಿಮವಾಗಿ ಶ್ರೀಲಂಕಾ ‘ಎ’ ತಂಡ ಜಯಭೇರಿ ಬಾರಿಸಿತು.
ಪಂದ್ಯ ಮುಗಿದ ತಕ್ಷಣವೇ ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಅಸಭ್ಯ ರೀತಿಯಲ್ಲಿ ಕೊನೆಗೊಂಡಿತು. ಸೂಪರ್ ಓವರ್‌ನ ಅಂತಿಮ ಎಸೆತಗಳಲ್ಲಿ ರನ್ ಗಳಿಸಲು ವಿಫಲರಾದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ, ಶ್ರೀಲಂಕಾ ‘ಎ’ ತಂಡದ ಆಟಗಾರನೊಂದಿಗೆ ಮೈದಾನದಲ್ಲೇ ಗರಂ ಆಗಿ ವಾಗ್ವಾದಕ್ಕಿಳಿದರು. ಇಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ, ತಕ್ಷಣವೇ ಶ್ರೀಲಂಕಾ ತಂಡದ ಮತ್ತೊಬ್ಬ ಆಟಗಾರ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿ ದೂರ ಕರೆದೊಯ್ಯಬೇಕಾಯಿತು. ಮಾತಿನ ಚಕಮಕಿಯ ಬೆನ್ನಲ್ಲೇ ಶ್ರೀಲಂಕಾ ಎ ತಂಡದ ಆಟಗಾರರನ ಎದೆಗ ಕೂಯಿಟ್ಟು ವೈಭವ್ ದೂಡಿದ ಬಳಿಕ ವಾಗ್ವಾದ ಇನ್ನೂ ಜೋರಾಯಿತು.
ಸೂಪರ್ ಓವರ್‌ನಲ್ಲಿ ಶ್ರೀಲಂಕಾ ನೀಡಿದ್ದ 17 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ‘ಎ’ ತಂಡಕ್ಕೆ ಕೇವಲ 9 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಶ್ರೀಲಂಕಾದ ಕುಗಾಥಾಸ್ ಮಥುಲನ್ ಅಂತಿಮ ಎಸೆತಗಳನ್ನು ಅತ್ಯಂತ ಯಶಸ್ವಿಯಾಗಿ ಬೌಲಿಂಗ್ ಮಾಡುವ ಮೂಲಕ ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ವಾಸ್ತವವಾಗಿ, ಸೂಪರ್ ಓವರ್‌ನ ಆರಂಭದಲ್ಲೇ ಸ್ಫೋಟಕ ಆಟಗಾರ ಸೂರ್ಯವಂಶಿ ಅವರಿಗೆ ಸ್ಟ್ರೈಕ್ ನೀಡದೆ ಭಾರತ ‘ಎ’ ತಂಡ ದೊಡ್ಡ ತಂತ್ರಗಾರಿಕೆಯ ತಪ್ಪು ಎಸಗಿದಂತೆ ಕಾಣಿಸಿತು.
ಟೈ ಆದ ಸ್ಕೋರ್: ತಿಲಕ್ ವರ್ಮಾ ಮತ್ತು ಅಂಪೈರ್ ನಡುವೆ ತೀವ್ರ ವಾಗ್ವಾದ!
ಇದಕ್ಕೂ ಮುನ್ನ ಶ್ರೀಲಂಕಾ ‘ಎ’ ತಂಡ ಗುರಿ ಬೆನ್ನಟ್ಟುತ್ತಿದ್ದಾಗ ಪಂದ್ಯವು ಭಾರೀ ಕುತೂಹಲ ಮೂಡಿಸಿತ್ತು. ನಿಗದಿತ 50 ಓವರ್‌ಗಳು ಮುಕ್ತಾಯಗೊಂಡಾಗ ಉಭಯ ತಂಡಗಳ ಸ್ಕೋರ್ ಸಮಬಲಗೊಂಡು (ಟೈ) ಪಂದ್ಯ ರೋಚಕ ಹಂತ ತಲುಪಿತ್ತು. ಆದರೆ, ಇದರ ಬೆನ್ನಲ್ಲೇ ಸೂಪರ್ ಓವರ್ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮೈದಾನದಲ್ಲಿ ದೊಡ್ಡ ಹೈಡ್ರಾಮಾ ಮತ್ತು ಗೊಂದಲ ಸೃಷ್ಟಿಯಾಯಿತು.
ಈ ವೇಳೆ ಭಾರತ ‘ಎ’ ತಂಡದ ನಾಯಕ ತಿಲಕ್ ವರ್ಮಾ ತೀವ್ರ ಆಕ್ರೋಶಗೊಂಡಂತೆ ಕಾಣಿಸಿದರು ಮತ್ತು ಅಂಪೈರ್‌ಗಳೊಂದಿಗೆ ಸುದೀರ್ಘ ಹಾಗೂ ಚರ್ಚೆಯಲ್ಲಿ ತೊಡಗಿದ್ದರು. ಮೊದಲಿಗೆ ಸೂಪರ್ ಓವರ್ ನಡೆಸುವ ನಿಯಮದ ಬಗ್ಗೆ ಅಂಪೈರ್ ಜೊತೆ ಆವೇಶಭರಿತ ಚರ್ಚೆ ನಡೆಸಿದ ತಿಲಕ್, ಆ ಬಳಿಕ ಶ್ರೀಲಂಕಾ ತಂಡ ಬ್ಯಾಟಿಂಗ್ ಮಾಡುತ್ತಿದ್ದ ಸೂಪರ್ ಓವರ್‌ನ ಅಂತಿಮ ಎಸೆತದಲ್ಲಿ ಅಂಪೈರ್ ನೀಡಿದ 'ನೋ-ಬಾಲ್' ತೀರ್ಪಿನ ವಿರುದ್ಧವೂ ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ನೋ-ಬಾಲ್ ಡ್ರಾಮಾದ ನೆರವಿನಿಂದ ಶ್ರೀಲಂಕಾ ತಂಡ ಸೂಪರ್ ಓವರ್‌ನಲ್ಲಿ 16 ರನ್ ಕಲೆಹಾಕಿತು.
ಭಾರತಕ್ಕೆ 10 ರನ್ ದಂಡ ವಿಧಿಸಿದ ಅಂಪೈರ್
ದಂಬುಲ್ಲಾದಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಸೂರ್ಯಾಂಶ್ ಶೆಡ್ಗೆ 72 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ವಿಪ್ರಜ್ ನಿಗಮ್ 51 ರನ್‌ಗಳ ಕೊಡುಗೆ ನೀಡಿದರು. ಆದರೆ, ಬ್ಯಾಟಿಂಗ್ ವೇಳೆ ವಿಪ್ರಜ್ ನಿಗಮ್ ಎರಡು ಬಾರಿ ಪಿಚ್‌ನ ಮಧ್ಯದಲ್ಲಿ (ಡೇಂಜರ್ ಝೋನ್) ನಡೆದ ಕಾರಣಕ್ಕಾಗಿ ಅಂಪೈರ್‌ಗಳು ಭಾರತಕ್ಕೆ 10 ರನ್‌ಗಳ ಪೆನಾಲ್ಟಿ (ದಂಡ) ವಿಧಿಸಿದರು. ಇದು ಭಾರತಕ್ಕೆ ಭಾರಿ ಹಿನ್ನಡೆಯಾಗಿ ಪರಿಣಮಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ ‘ಎ’ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಸರಿಯಾಗಿ 265 ರನ್ ಗಳಿಸಿತು. ಲಂಕಾ ಪರ ಸದೀರ ಸಮರವಿಕ್ರಮ 93 ರನ್‌ಗಳ ಭರ್ಜರಿ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಟೈ ಹಂತಕ್ಕೆ ತಂದರು. ಅಂತಿಮವಾಗಿ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ‘ಎ’ ತಂಡ 7 ರನ್‌ಗಳ ರೋಚಕ ಜಯ ಸಾಧಿಸಿತು.


