ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಭೀಕರ ಅಪಘಾತದಲ್ಲಿ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ಪಂತ್ ಜೊತೆ ಕಿತ್ತಾಡಿಕೊಂಡಿದ್ದ ಊರ್ವಶಿ ರೌಟೇಲಾ ಕುತೂಹಲಕಾರಿ ಪೋಸ್ಟ್ ಹಾಕಿದ್ದರೆ, ಇದೀಗ ಊರ್ವಶಿ ತಾಯಿ ಪಂತ್ ಚೇತರಿಕೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ. ಮತ್ತೆ ಊರ್ವಶಿ ರೌಟೇಲಾ ಟ್ರೋಲ್ ಆಗಿದ್ದಾರೆ. 

ನವದೆಹಲಿ(ಡಿ.03): ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಪಘಾತ ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿತ್ತು. ರಿಷಬ್ ಪಂತ್ ಚೇತರಿಕಿಗೆ ಟೀಂ ಇಂಡಿಯಾ ಕ್ರಿಕೆಟಿಗರು, ವಿದೇಶಿ ಕ್ರಿಕೆಟಿಗರು ಪ್ರಾರ್ಥಿಸಿದ್ದಾರೆ. ಇತ್ತ ರಿಷಬ್ ಪಂತ್ ಜೊತೆ ಕಿತ್ತಾಡಿಕೊಂಡು ಸುದ್ದಿಯಾಗಿರುವ ನಟಿ ಊರ್ವಶಿ ರೌಟೇಲಾ, ಪಂತ್ ಹೆಸರು ಹೇಳದೆ, ಫೋಟೋ ಹಾಕದೆ ತಮ್ಮದೇ ಫೋಟೋ ಹಾಕಿ ಪ್ರಾರ್ಥಿಸುತ್ತಿದ್ದೇನೆ ಅನ್ನೋ ಪೋಸ್ಟ್ ಹಾಕಿದ್ದರು. ಇದೀಗ ಊರ್ವಶಿ ರೌಟೇಲಾ ತಾಯಿ, ರಿಷಬ್ ಪಂತ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಉತ್ತರಖಂಡಕ್ಕೆ ವಿಶ್ವಮಟ್ಟದಲ್ಲಿ ಕೀರ್ತಿ ತಂದುಕೊಟ್ಟ ರಿಷಬ್ ಪಂತ್ ಶೀಘ್ರ ಚೇತರಿಕೆಗ ಎಲ್ಲರ ಪ್ರಾರ್ಥನೆ ಇರಲಿ ಎಂದು ಪೋಸ್ಟ್ ಹಾಕಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಅಸಲಿ ಐಡಿ ಬಳಸಿ ಪೋಸ್ಟ್ ಹಾಕಿ ಎಂದು ಊರ್ವಶಿ ರೌಟೇಲಾ ಕಾಲೆಳೆದಿದ್ದಾರೆ.

ಊರ್ವಶಿ ರೌಟೇಲಾ ತಾಯಿ ಮೀರಾ ರೌಟೇಲಾ ಪೋಸ್ಟ್ ಬೆನ್ನಲ್ಲೇ ಹಲವರು ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಪಂತ್‌ಗಾಗಿ ಮೀರಾ ರೌಟೇಲಾ ಪೋಸ್ಟ್ ಮಾಡಿರುವುದು ಉತ್ತಮ ಬೆಳವಣಿಗೆ. ಪಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಆದರೆ ಹೆಚ್ಚಿನವರು ಮೀರಾ ರೌಟೇಲಾ ಪೋಸ್ಟ್‌ಗೆ ಊರ್ವಶಿ ರೌಟೇಲಾರನ್ನು ಟ್ರೋಲ್ ಮಾಡಿದ್ದಾರೆ. ಪಂತ್ ಜೊತೆ ಕಿತ್ತಾಡಿ ಇದೀಗ ನೇರವಾಗಿ ಏನೂ ಹೇಳಲಾಗದೆ ಇರುವ ಊರ್ವಶಿ ರೌಟೇಲಾ ತಾಯಿ ಸಾಮಾಜಿಕ ಜಾಲತಾಣ ಖಾತೆ ಮೂಲಕ ಪೋಸ್ಟ್ ಮಾಡುವುದು ನಿಲ್ಲಿಸಿ, ನಿಮ್ಮ ಅಸಲಿ ಖಾತೆ ಮೂಲಕ ಪೋಸ್ಟ್ ಮಾಡಿ ಎಂದು ಟ್ರೋಲ್ ಮಾಡಿದ್ದಾರೆ. 

View post on Instagram

ರಿಷಬ್ ಪಂತ್ ಅಪಘಾತ, ಪ್ರಾರ್ಥನೆ ಸಂದೇಶದೊಂದಿಗೆ ಸಸ್ಪೆನ್ಸ್ ಮುಂದುವರಿಸಿದ ನಟಿ ಊರ್ವಶಿ!

ಪಂತ್ ಅಪಘಾತ
ರಿಷಭ್‌ ಪಂತ್ ತಮ್ಮ ಮರ್ಸಿಡೀಸ್‌ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು. ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್‌ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ ಯಾವುದೇ ಮೂಳೆ ಮುರಿದಿಲ್ಲ. ಬೆಂಕಿಯಿಂದ ಸುಟ್ಟಗಾಯಗಳೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಅಪಘಾತದಲ್ಲಿ 25 ವರ್ಷದ ಪಂತ್‌ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ಎಂಆರ್‌ಐ ಸ್ಕಾ್ಯನ್‌ ಮೂಲಕ ಅವರ ಮಿದುಳು, ಬೆನ್ನು ಹುರಿ(ಸ್ಪೈನಲ್‌ ಕಾರ್ಡ್‌)ಗೆ ಪೆಟ್ಟು ಬಿದ್ದಿಲ್ಲ ಎಂದು ದೃಢಪಟ್ಟಿದೆ. ಪ್ರಾಣಾಪಾಯದಿಂದ ಪಾರಾಗಿರುವ ಪಂತ್‌ ಸದ್ಯ ಡೆಹರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಪ್ರೈವೇಟ್‌ ವಾರ್ಡ್‌ಗೆ ಶಿಫ್ಟ್‌..!

ಮೋದಿ ಸೇರಿ ಗಣ್ಯರ ಹಾರೈಕೆ
ಪಂತ್‌ ಶೀಘ್ರ ಚೇತರಿಕೆಗೆ ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದು, ಬೇಗ ಗುಣಮುಖರಾಗಿ ಬರಲು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮಾಜಿ, ಹಾಲಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್‌, ವಿವಿಎಸ್‌ ಲಕ್ಷ್ಮಣ್‌, ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ವಿರಾಟ್‌ ಕೊಹ್ಲಿ, ಮಿಥಾಲಿ ರಾಜ್‌, ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಸೇರಿದಂತೆ ಕ್ರೀಡಾ ತಾರೆಗಳು, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.