ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ಡೆಹರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ಪಂತ್ ಅವರನ್ನು ಖಾಸಗಿ ವಾರ್ಡ್‌ಗೆ ಶಿಫ್ಟ್

ನವದೆಹಲಿ(ಜ.02): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ರಸ್ತೆ ಅಪಘಾತದಲ್ಲಿ ಗಾಯಗೊಂಡು ಡೆಹರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಪಂತ್‌ಗೆ ಸೋಂಕು ತಗುಲುವ ಭೀತಿ ಇರುವುದರಿಂದ ಅವರನ್ನು ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಡಿಸೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ 25 ವರ್ಷದ ಆಟಗಾರ ರಿಷಭ್ ಪಂತ್ ಅವರನ್ನು ಡೆಹರಾಡೂನ್ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ರಿಷಭ್ ಪಂತ್ ಉತ್ತಮವಾಗಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡೆಲ್ಲಿ ಮತ್ತು ಡಿಸ್ಟ್ರಿಕ್ಟ್‌ ಕ್ರಿಕೆಟ್ ಅಸೋಸಿಯೇಷನ್‌(DDCA) ಡೈರೆಕ್ಟರ್ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.

ಸೋಂಕು ತಗುಲುವ ಅಪಾಯವನ್ನು ಮನಗಂಡು, ವೈದ್ಯರ ಸಲಹೆಯಂತೆ ರಿಷಭ್ ಪಂತ್ ಅವರನ್ನು ಖಾಸಗಿ ರೂಂಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಸಂಜೆಯೇ ರಿಷಭ್ ಪಂತ್ ಅವರನ್ನು ಖಾಸಗಿ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದ್ದು, ಅವರಿಗೆ ಸೋಂಕು ತಗುಲುವ ಸಾಧ್ಯತೆಯಿಲ್ಲ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ. ರಿಷಭ್ ಪಂತ್ ಅವರು ದಾಖಲಾಗಿರುವ ಆಸ್ಪತ್ರೆಗೆ ಹಲವು ಮಂದಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪಂತ್‌ಗೆ ಮಾನಸಿಕವಾಗಿ ಹಾಗೂ ದೈಹಿಕ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ

ಭಾರತ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ, ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಶುಕ್ರವಾರ ಮುಂಜಾನೆ ದೆಹಲಿ-ಡೆಹರಾಡೂನ್‌ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಲ್ಲಿ 25 ವರ್ಷದ ಪಂತ್‌ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ರಿಷಭ್ ಪಂತ್ ಅವರ ಲಿಗಮೆಂಟ್ ಸರ್ಜರಿಯ ಕುರಿತಂತೆ ಬಿಸಿಸಿಐ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂದು ಶ್ಯಾಮ್ ಶರ್ಮಾ ಹೇಳಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್‌ಗೆ ರಿಷಭ್ ಪಂತ್ ಅಲಭ್ಯ? ಆಸ್ಪತ್ರೆಯಲ್ಲಿರುವ ಪಂತ್, ಡೆಲ್ಲಿಗೆ ಏರ್‌ಲಿಫ್ಟ್?

"ಇಲ್ಲಿಯವರೆಗೆ ಅವರು ತುಂಬಾ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ಡೆಹರಾಡೂನ್‌ನಲ್ಲಿ ಚಿಕಿತ್ಸೆ ಮುಂದುವರೆಸಲಿದ್ದಾರೆ. ಅವರ ಲಿಗಮೆಂಟ್ ಸರ್ಜರಿಗೆ ಅವರನ್ನು ವಿದೇಶಕ್ಕೆ ಕೊಂಡೊಯ್ಯಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಬಿಸಿಸಿಐ ತೀರ್ಮಾನ ತೆಗೆದುಕೊಳ್ಳಲಿದೆ. ಇದರ ಜತೆಗೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದೆ ಎಂದು ಶ್ಯಾಮ್ ಶರ್ಮಾ ತಿಳಿಸಿದ್ದೆ.

ಅಪಘಾತ ಹೇಗಾಯ್ತು?

ಗುರುವಾರ ರಾತ್ರಿ ರಿಷಭ್‌ ತಮ್ಮ ಮರ್ಸಿಡೀಸ್‌ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು. ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್‌ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ ಯಾವುದೇ ಮೂಳೆ ಮುರಿದಿಲ್ಲ. ಬೆಂಕಿಯಿಂದ ಸುಟ್ಟಗಾಯಗಳೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.