ಅಡಿಲೇಡ್[ನ.30]: ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್[335*] ಚೊಚ್ಚಲ ತ್ರಿಶತಕ ಬಾರಿಸಿ, 400 ರನ್’ಗಳತ್ತ ಮುನ್ನುಗ್ಗುತ್ತಿರುವಾಗಲೇ ನಾಯಕ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕ್ ವಿರುದ್ಧ ತ್ರಿಶತಕ ಬಾರಿಸಿ ಅಬ್ಬರಿಸಿದ ಡೇವಿಡ್ ವಾರ್ನರ್

ಹೌದು, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯ ವಹಿಸಿದೆ. ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಆಕರ್ಷಕ ತ್ರಿಶತಕದ ನೆರವಿನಿಂದ 589/3 ರನ್ ಬಾರಿಸಿತ್ತು. ಹೀಗಿರುವಾಗಲೇ ಆಸೀಸ್ ನಾಯಕ ಟಿಮ್ ಪೈನೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡುವ ತೀರ್ಮಾನ ತೆಗೆದುಕೊಂಡರು. ಅಡಿಲೇಡ್ ಮೈದಾನದಲ್ಲಿ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿದ ವಾರ್ನರ್, ಟೆಸ್ಟ್ ಕ್ರಿಕೆಟ್’ನಲ್ಲಿ ಬ್ರಿಯನ್ ಲಾರಾ ಹೆಸರಿನಲ್ಲಿರುವ 400* ದಾಖಲೆ ಮುರಿದು ವಿಶ್ವದಾಖಲೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.  

ರೋಹಿತ್ ವಾರ್ಷಿಕ ಆದಾಯ ರಿಪೋರ್ಟ್ ಬಹಿರಂಗ!

ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯನ್ ಲಾರಾ 2004ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 400 ರನ್ ಬಾರಿಸಿ ವಿಶ್ವದಾಖಲೆ ಬರೆದಿದ್ದರು. ಇಂದು ಆ ದಾಖಲೆ ವಾರ್ನರ್ ಬ್ರೇಕ್ ಮಾಡಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಟಿಮ್ ಪೈನೆ ಡಿಕ್ಲೇರ್ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 3 ವಿಕೆಟ್ ಕಳೆದುಕೊಂಡು 589 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ವೇಗಿ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ಪಾಕ್ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 96 ರನ್ ಬಾರಿಸಿದೆ. ಇನ್ನೂ ಪಾಕ್ 493 ರನ್’ಗಳ ಹಿನ್ನಡೆಯಲ್ಲಿದೆ. ಆಸೀಸ್ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ ಹಾಗೂ ಜೋಸ್ ಹ್ಯಾಜಲ್’ವುಡ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.