ಹೈದರಾಬಾದ್‌(ಫೆ.21): ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ಸ್ಥಳೀಯ ಆಟಗಾರರಿಗೆ ಮಣೆಹಾಕದ್ದನ್ನು ಪ್ರತಿಭಟಿಸಿ ತೆಲಂಗಾಣ ರಾಷ್ಟ್ರ ಸಮಿತಿಯ ಖೈರತಬಾದ್‌ ಕ್ಷೇತ್ರದ ಶಾಸಕ ದನಂ ನಾಗೇಂದರ್‌ ಮುಂಬರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಹೈದರಾಬಾದ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯಗಳನ್ನು ತಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.

ಇದೇ ಫೆಬ್ರವರಿ 18ರಂದು ನಡೆದ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹೈದರಾಬಾದಿನ ಯಾವೊಬ್ಬ ಸ್ಥಳೀಯ ಆಟಗಾರರನ್ನು ಖರೀದಿಸಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗೇಂದರ್, ಬೇರೆಲ್ಲಾ ಐಪಿಎಲ್‌ ತಂಡಗಳಲ್ಲಿ ತಮ್ಮ ತಮ್ಮ ರಾಜ್ಯದ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೈದರಾಬಾದ್‌ನಲ್ಲಿ ಹಲವಾರು ಪ್ರತಿಭಾನ್ವಿತ ಕ್ರಿಕೆಟ್‌ ಆಟಗಾರರಿದ್ದರೂ ಒಬ್ಬೇ ಒಬ್ಬ ಆಟಗಾರರನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ಖರೀದಿ ಮಾಡಿಲ್ಲ. ಆಟಗಾರರ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ, ನಾವಿದನ್ನು ಖಂಡಿಸುತ್ತೇವೆ ಎಂದು ಗುಡುಗಿದ್ದಾರೆ.

ಹೈದ್ರಾಬಾದ್‌ನಲ್ಲಿ ಕೇವಲ ಮೊಹಮ್ಮದ್‌ ಸಿರಾಜ್‌ ಮಾತ್ರ ಇಲ್ಲ. ಸಾಕಷ್ಟು ರಣಜಿ ಆಟಗಾರರು ಹಾಗೂ ಅಂಡರ್‌ 19 ಪ್ರತಿಭಾನ್ವಿತ ಕ್ರಿಕೆಟಿಗರಿದ್ದಾರೆ. ಇಂತಹ ಆಟಗಾರರಿಗೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ ಗುರುತಿಸಿ ಅವಕಾಶ ನೀಡಬೇಕು ಎಂದು ನಾಗೇಂದರ್ ಆಗ್ರಹಿಸಿದ್ದಾರೆ.

ಮುಂದುವರೆದು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ಇಲ್ಲಿನ ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿಲ್ಲ ಎಂದಾದ ಮೇಲೆ ತನ್ನ ತಂಡದ ಹೆಸರಿನಲ್ಲಿ ಹೈದರಾಬಾದ್‌ ಹೆಸರನ್ನು ತೆಗೆದುಹಾಕಲಿ ಎಂದು ಒತ್ತಾಯಿಸಿದ್ದಾರೆ. ಇನ್ನು ಬಾಲ್‌ ಟ್ಯಾಂಪರಿಂಗ್‌ ಮಾಡಿ ನಿಷೇಧಕ್ಕೆ ಗುರಿಯಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಅವರು ಸನ್‌ರೈಸರ್ಸ್ ತಂಡದ ನಾಯಕರಾಗುವುದು ಬೇಡ ಎಂದು ಹೇಳಿದ್ದಾರೆ.

IPL 2021: ಹರಾಜಿನ ಬಳಿಕ ಸನ್‌ರೈಸರ್ಸ್‌ ಹೈದರಾಬಾದ್‌ ಹೀಗಿದೆ ನೋಡಿ

ಈ ಹಿಂದೆ ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್‌ ಕೂಡಾ ಸನ್‌ರೈಸರ್ಸ್‌ ಹೈದರಾಬಾದ್‌ ಆಟಗಾರರನ್ನು ಖರೀದಿಸದ್ದಕ್ಕೆ ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ್ದರು.

ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ ಆಟಗಾರರ ಹರಾಜಿಗೂ ಮುನ್ನ 22 ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು, ಇನ್ನು 14ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಕನ್ನಡಿಗ ಜೆ. ಸುಚಿತ್, ಮುಜೀಬ್‌ ಉರ್ ರೆಹಮಾನ್‌ ಹಾಗೂ ಕೇದಾರ್ ಜಾಧವ್‌ರನ್ನು ಖರೀದಿಸಿತ್ತು.