ಐಪಿಎಲ್ ಮತ್ತೆ ಆರಂಭವಾಗಿದ್ದು, ಮೇ ೧೭ ರಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ. ಮಳೆಯ ನಡುವೆಯೂ ಟಿಮ್ ಡೇವಿಡ್ ಮೈದಾನದಲ್ಲಿ ಈಜಿ ಮೋಜು ಮಾಡಿದ್ದಾರೆ. ಈ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಡೇವಿಡ್, ಆರ್‌ಸಿಬಿ ಪರ ೧೮೬ ರನ್ ಗಳಿಸಿದ್ದಾರೆ. ಆರ್‌ಸಿಬಿ ೧೧ ರಲ್ಲಿ ೮ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದ ಮುಂದೂಡಲ್ಪಟ್ಟಿದ್ದ ಐಪಿಎಲ್ ಈಗ ಮತ್ತೆ ಆರಂಭವಾಗಲಿದೆ. ನಾಳೆ ಅಂದರೆ ಮೇ 17 ರಿಂದ ಈ ಹೈವೋಲ್ಟೇಜ್ ಕ್ರಿಕೆಟ್‌ನ ಮಜವನ್ನು ಅಭಿಮಾನಿಗಳು ಮತ್ತೊಮ್ಮೆ ಸವಿಯಬಹುದು. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ 59 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಿಗ್ ಫೈಟ್‌ಗೆ ಎರಡೂ ತಂಡಗಳ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಎಲ್ಲರೂ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ, ಪಂದ್ಯಕ್ಕೂ ಒಂದು ದಿನ ಮೊದಲು ಅಲ್ಲಿ ಮಳೆಯಾಗಿದೆ. ಈ ಮಳೆಯಲ್ಲೂ ಆರ್‌ಸಿಬಿಯ ಸ್ಪೋಟಕ ಆಲ್‌ರೌಂಡರ್ ಟಿಮ್ ಡೇವಿಡ್ ಅವಕಾಶವನ್ನು ಬಳಸಿಕೊಂಡು ಮೋಜು ಮಾಡಲು ಪ್ರಾರಂಭಿಸಿದರು. ಅವರ ಮೋಜು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣವನ್ನು ಈಜುಕೊಳವನ್ನಾಗಿ ಮಾಡಿದ ಡೇವಿಡ್
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣವಾಗಿ ನೀರಿನಿಂದ ತುಂಬಿತ್ತು. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರ ಟಿಮ್ ಡೇವಿಡ್ ಈಜಲು ಪ್ರಾರಂಭಿಸಿದರು. ಮಳೆಯ ನಂತರ ಈ ಆಟಗಾರ ಭರ್ಜರಿ ಮೋಜು ಮಾಡುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟಿಮ್ ಡೇವಿಡ್ ಹೇಗೆ ಪೂರ್ಣ ಮಳೆಯನ್ನು ಎಂಜಾಯ್ ಮಾಡಿದರು ಎನ್ನುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮೈದಾನದಲ್ಲಿ ಈಜಿದ ನಂತರ ಅವರು ಮತ್ತೆ ಡ್ರೆಸ್ಸಿಂಗ್ ರೂಮಿಗೆ ಹೋಗುತ್ತಾರೆ. ಅವರನ್ನು ನೋಡಿ ಒಳಗೆ ಇದ್ದ ಎಲ್ಲಾ ಆಟಗಾರರು ನಗಲು ಪ್ರಾರಂಭಿಸುತ್ತಾರೆ. ಜೊತೆಗೆ, ಅವರನ್ನು ಭರ್ಜರಿ ಚಪ್ಪಾಳೆಯೊಂದಿಗೆ ಸ್ವಾಗತಿಸುತ್ತಾರೆ.
ಈ ಐಪಿಎಲ್ ಸೀಸನ್‌ನಲ್ಲಿ ಸಂಚಲನ ಮೂಡಿಸಿರುವ ಟಿಮ್ ಡೇವಿಡ್:
ಐಪಿಎಲ್ 2025 ರಲ್ಲಿ ಆರ್‌ಸಿಬಿ ಪರ ಟಿಮ್ ಡೇವಿಡ್ ಹಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಫ್ರಾಂಚೈಸಿ ಈ ಸ್ಫೋಟಕ ಆಸ್ಟ್ರೇಲಿಯಾದ ಆಲ್‌ರೌಂಡರ್‌ರನ್ನು ಮೆಗಾ ಹರಾಜಿನಲ್ಲಿ 3 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಟಿಮ್ ಡೇವಿಡ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುತ್ತಿದ್ದಾರೆ. ಆರ್‌ಸಿಬಿ ತಂಡವು ಟಿಮ್ ಡೇವಿಡ್ ಅವರಿಂದ ಇದೇ ರೀತಿಯ ಪ್ರದರ್ಶನವನ್ನು ಮುಂಬರುವ ಪಂದ್ಯಗಳಲ್ಲೂ ನಿರೀಕ್ಷೆ ಮಾಡುತ್ತಿದೆ. ಡೇವಿಡ್ ಅವರ ಅಂಕಿಅಂಶಗಳನ್ನು ಗಮನಿಸಿದರೆ, ಅವರು ಈ ಋತುವಿನಲ್ಲಿ ಆರ್‌ಸಿಬಿ ಪರ 186 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 193.75 ರಷ್ಟಿದೆ. ಅವರು ಕೊನೆಯ ಓವರ್‌ಗಳಲ್ಲಿ ತಮ್ಮ ತಂಡಕ್ಕೆ ಸ್ಫೋಟಕ ಅಂತ್ಯವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಅದ್ಭುತ ಇನ್ನಿಂಗ್ಸ್ ಆಡಿದ್ದರು ಮತ್ತು ತಂಡವನ್ನು ದೊಡ್ಡ ಸೋಲಿನಿಂದ ರಕ್ಷಿಸಿದ್ದರು. ಸೋಲಿನ ನಂತರವೂ ಟಿಮ್ ಡೇವಿಡ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಆರ್‌ಸಿಬಿ ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರಿ ಸದ್ಯ ರಾಜಧಾನಿ ಎಕ್ಸ್‌ಪ್ರೆಸ್‌ನಂತೆ ಓಡುತ್ತಿದೆ. ಯಾವುದೇ ಅಡೆತಡೆಯಿಲ್ಲದೆ ತಂಡ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರತಿ ಪಂದ್ಯದಲ್ಲೂ ಒಬ್ಬರು ಅಥವಾ ಇನ್ನೊಬ್ಬರು ಏಕಾಂಗಿಯಾಗಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ರೊಮಾರಿಯೊ ಶೆಫರ್ಡ್ ಎಲ್ಲರೂ ವಿಭಿನ್ನ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್‌ಗಳೆನಿಸಿದ್ದಾರೆ. ತಂಡವು 11 ರಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.


