ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯದ ಪಿಚ್‌ ಸ್ಪಿನ್ನರ್‌ಗಳಿಗೂ ನೆರವು ನೀಡುವ ನಿರೀಕ್ಷೆಯಿದ್ದು, ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಆರ್. ಅಶ್ವಿನ್ ಆಡುವ ಸಾಧ್ಯತೆ ಇದೆ.

ಅಡಿಲೇಡ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 2ನೇ ಟೆಸ್ಟ್‌(ಹಗಲು-ರಾತ್ರಿ ಟೆಸ್ಟ್‌) ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಅಡಿಲೇಡ್‌ ಕ್ರೀಡಾಂಗಣದ ಪಿಚ್‌ ವೇಗದ ಬೌಲರ್‌ಗಳ ಜೊತೆ ಸ್ಪಿನ್ನರ್‌ಗಳಿಗೂ ನೆರವು ನೀಡುವ ನಿರೀಕ್ಷೆಯಿದೆ. ಹೀಗಾಗಿ ಭಾರತ ತಂಡದಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಪಿಚ್‌ ಸಿದ್ಧಪಡಿಸಿರುವ ಕ್ಯುರೇಟರ್‌ ಡಾಮಿಯನ್‌ ಹಾಗ್‌ ಈ ಬಗ್ಗೆ ಮಾತನಾಡಿದ್ದು, ಪಿಚ್‌ ಸ್ಪಿನ್ನರ್‌ಗಳಿಗೂ ನೆರವು ನೀಡಬಹುದು ಎಂದಿದ್ದಾರೆ. ಅಲ್ಲದೆ, ತಜ್ಞ ಸ್ಪಿನ್ನರ್‌ ಅನ್ನು ಆಡಿಸುವಂತೆ ತಂಡಗಳಿಗೆ ಸಲಹೆ ನೀಡಿದ್ದಾರೆ. ‘ಅಡಿಲೇಡ್‌ ಪಿಚ್‌ನಲ್ಲಿ ವೇಗಿಗಳೇ ನಿರ್ಣಾಯಕರಾಗಬಹುದು. ಆದರೆ ರಾತ್ರಿ ವೇಳೆ ಸ್ಪಿನ್ನರ್‌ಗಳೂ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಇಲ್ಲಿ ಸ್ಪಿನ್ನರ್‌ಗಳು ನೆರವು ಪಡೆದಿರುವ ಇತಿಹಾಸವಿದೆ. ಹೀಗಾಗಿ ತಜ್ಞ ಸ್ಪಿನ್ನರ್‌ಗಳನ್ನು ಆಡಿಸುವುದು ಸೂಕ್ತ’ ಎಂದು ಹೇಳಿದ್ದಾರೆ. ಈ ಪಂದ್ಯವನ್ನು ಪಿಂಕ್‌ ಬಾಲ್‌ನಲ್ಲಿ ಆಡಿಸಲಾಗುತ್ತದೆ. ಪಂದ್ಯ ಡಿ.6ಕ್ಕೆ ಆರಂಭಗೊಳ್ಳಲಿದೆ.

ಅಡಿಲೇಡ್‌ ಟೆಸ್ಟ್‌ಗೂ ಮುನ್ನ ಭಾರತದ ಅಭ್ಯಾಸ ವೇಳೆ ಅಭಿಮಾನಿಗಳ ಹುಚ್ಚಾಟ!

ಅಡಿಲೇಡ್‌ ಟೆಸ್ಟ್‌ಗೆ ವಾಷಿಂಗ್ಟನ್‌ ಸುಂದರ್ ಬದಲು ರವಿಚಂದ್ರನ್ ಅಶ್ವಿನ್‌?

ಆರಂಭಿಕ ಪಂದ್ಯದಲ್ಲಿ ಭಾರತ ಏಕೈಕ ಸ್ಪಿನ್ನರ್‌ ಜೊತೆ ಆಡಿತ್ತು. ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ಸಿಕ್ಕಿತ್ತು. ಆದರೆ ಅಡಿಲೇಡ್‌ ಕ್ರೀಡಾಂಗಣದಲ್ಲಿ ಮತ್ತು ಆಸ್ಟ್ರೇಲಿಯಾದ ಎಡಗೈ ಬ್ಯಾಟರ್‌ಗಳ ವಿರುದ್ಧ ದಾಖಲೆ ಹೊಂದಿರುವ ಕಾರಣ 2ನೇ ಪಂದ್ಯದಲ್ಲಿ ಅನುಭವಿ ಆರ್‌.ಅಶ್ವಿನ್‌ರನ್ನು ಆಡಿಸಲು ಟೀಂ ಇಂಡಿಯಾ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮತ್ತೆರಡು ಮಹತ್ವದ ಬದಲಾವಣೆ:

ಅಡಿಲೇಡ್ ಟೆಸ್ಟ್ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೆರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೈಯುಕ್ತಿಕ ಕಾರಣದಿಂದಾಗಿ ಹೊರಗುಳಿದಿದ್ದರು. ಇನ್ನು ಅಗ್ರಕ್ರಮಾಂಕದ ಬ್ಯಾಟರ್ ಶುಭ್‌ಮನ್ ಗಿಲ್ ಕೂಡಾ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಇದೀಗ ಈ ಇಬ್ಬರು ಆಟಗಾರರು ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಬ್ಯಾಟರ್‌ಗಳು ತಂಡ ಕೂಡಿಕೊಳ್ಳಲಿದ್ದು, ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೆಲ್ ತಂಡದಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.