ಐಪಿಎಲ್ 18ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ, ಧೋನಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಭಾರತೀಯ ಸ್ಟಾರ್ ಆಟಗಾರರು ಗಮನ ಸೆಳೆಯಲಿದ್ದಾರೆ. ಕೊಹ್ಲಿ ರನ್ ಗಳಿಕೆಯಲ್ಲಿ, ಧೋನಿ ಸಿಕ್ಸರ್ ಗಳಲ್ಲಿ, ರೋಹಿತ್ ನಾಯಕತ್ವದಲ್ಲಿ ಮಿಂಚುವ ನಿರೀಕ್ಷೆಯಿದೆ. ರಿಷಭ್ ಪಂತ್ ದುಬಾರಿ ಬೆಲೆಗೆ ತಕ್ಕ ಆಟ ಆಡಬೇಕಿದೆ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡಕ್ಕೆ ಕಪ್ ಗೆಲ್ಲಿಸುವ ಸವಾಲು ಹೊಂದಿದ್ದಾರೆ. ಬೂಮ್ರಾ ಫಿಟ್ನೆಸ್ ಕಾಪಾಡಿಕೊಂಡು ಮಿಂಚಲು ಸಜ್ಜಾಗಿದ್ದಾರೆ.

ಐಪಿಎಲ್‌ ಬಂತೆಂದರೆ ಅಭಿಮಾನಿಗಳಲ್ಲಿ ತಮ್ಮ ತಂಡಗಳ ಆಟಕ್ಕಿಂತ, ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳುವ ಕಾತರವೇ ಹೆಚ್ಚಿರುತ್ತದೆ. ಫೇವರಿಟ್‌ ಕ್ರಿಕೆಟಿಗರ ಹೆಸರಿನ ಜೆರ್ಸಿಯನ್ನೇ ಧರಿಸಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು, ಅವರಿಗಾಗಿ ಜೈಕಾರ ಕೂಗಿ, ಕುಣಿದು ಕುಪ್ಪಳಿಸುತ್ತಾರೆ. 18ನೇ ಆವೃತ್ತಿ ಐಪಿಎಲ್‌ನಲ್ಲೂ ಸ್ಟಾರ್‌ ಕ್ರಿಕೆಟಿಗರು ಹವಾ ಸೃಷ್ಟಿಸಲು ಸಜ್ಜಾಗಿದ್ದಾರೆ. ಈ ಬಾರಿ ಹೆಚ್ಚಿನ ನಿರೀಕ್ಷೆ ಮೂಡಿಸಿರುವ ಟಾಪ್‌ 10 ಭಾರತೀಯ ಸ್ಟಾರ್‌ಗಳು ಯಾರು? ಅವರ ಮಹತ್ವವೇನು? ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸೋದರ ಸಂಸ್ಥೆ ಕನ್ನಡಪ್ರಭ ತನ್ನ ಓದುಗರ ಮುಂದಿಡುತ್ತಿದೆ.

ಕಿಂಗ್‌ ವಿರಾಟ್‌ ಕೊಹ್ಲಿ

ತಂಡ: ಆರ್‌ಸಿಬಿ

ಕ್ರಿಕೆಟ್‌ ಜಗತ್ತಿನಲ್ಲಿ ಇತರೆಲ್ಲಾ ಆಟಗಾರರಿಗಿಂತ ಕಿಂಗ್‌, ರನ್‌ ಮೆಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿಯ ಹವಾನೇ ಬೇರೆ. ಕಳೆದ 18 ವರ್ಷಗಳಿಂದಲೂ ಆರ್‌ಸಿಬಿಯ ಹೃದಯ ಬಿಡತವಾಗಿರುವ ಕೊಹ್ಲಿಯ ಆಟವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವಂತೂ ರಾಜನ ಪಟ್ಟಾಭಿಷೇಕಕ್ಕೆ ಕಾದು ಕುಳಿತಂತಿದೆ. ಐಪಿಎಲ್‌ನಲ್ಲಿ 8004 ರನ್‌ ಕಲೆಹಾಕಿರುವ ಕೊಹ್ಲಿ, ಟೂರ್ನಿಯ ಗರಿಷ್ಠ ಸ್ಕೋರರ್‌. ಕಳೆದ 15 ಆವೃತ್ತಿಗಳಲ್ಲೂ ತಲಾ 300+ ರನ್‌, ಒಟ್ಟಾರೆ 7 ಬಾರಿ 500+ ರನ್‌ ಕಲೆಹಾಕಿರುವ ಕೊಹ್ಲಿ, ಈ ಬಾರಿ ಮತ್ತೊಮ್ಮೆ ರನ್‌ ಹೊಳೆ ಹರಿಸಲು ಕಾಯುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ 17 ಆವೃತ್ತಿಗಳಲ್ಲೂ ತಂಡಕ್ಕೆ ಗಗನ ಕುಸುಮವಾಗಿರುವ ಕಪ್‌ ಗೆಲ್ಲಿಸಿಕೊಡುವ ಪಣ ತೊಟ್ಟಿದ್ದಾರೆ. ಅಂ.ರಾ. ಟಿ20ಗೆ ವಿದಾಯ ಹೇಳಿದ ಬಳಿಕ ಮೊದಲ ಬಾರಿ ಕೊಹ್ಲಿ ಟಿ20 ಆಡಲಿದ್ದಾರೆ.

ಇದನ್ನೂ ಓದಿ: ‘ಈ ಸಲ ಕಪ್‌ ನಮ್ದೇ’ ಅಂತ ಹೇಳ್ಬೇಡಿ: ಎಬಿ ಡಿವಿಲಿಯರ್ಸ್‌ಗೆ ಕೊಹ್ಲಿ ಖಡಕ್‌ ಎಚ್ಚರಿಕೆ!

44ರ ಹರೆಯದಲ್ಲೂ ಧೋನಿ ಫಿಟ್‌

ತಂಡ: ಸಿಎಸ್‌ಕೆ

ಕಳೆದ ಹಲವು ವರ್ಷಗಳಿಂದಲೂ ಉತ್ತರಕ್ಕಾಗಿ ಕಾಯುತ್ತಿರುವ ಜಗತ್ತಿನ ಹಲವು ನಿಗೂಢತೆಗಳಲ್ಲಿ ಎಂ.ಎಸ್‌.ಧೋನಿಯ ನಿವೃತ್ತಿಯೂ ಒಂದು. 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿರುವ ಧೋನಿ, ಪ್ರತಿ ಐಪಿಎಲ್‌ ಬಳಿಕವೂ ನಿವೃತ್ತಿ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಧೋನಿಯ ಆಟ ಮಾತ್ರ ನಿಂತಿಲ್ಲ. ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಲೂ ಇಲ್ಲ. ಅವರು ಈ ಬಾರಿಯೂ ತಮ್ಮ ಅಭಿಮಾನಿಗಳನ್ನು ರಂಜಿಸುವ ವಿಶ್ವಾಸದಲ್ಲಿದ್ದಾರೆ. ಐಪಿಎಲ್‌ನ 264 ಪಂದ್ಯಗಳಲ್ಲಿ 5243 ರನ್ ಕಲೆಹಾಕಿರುವ 44 ವರ್ಷದ ಧೋನಿ ಈ ಬಾರಿ ಎಷ್ಟು ಸಿಕ್ಸರ್‌ ಸಿಡಿಸಲಿದ್ದಾರೆ ಎಂಬುದೇ ಸದ್ಯದ ಕುತೂಹಲ. ಕಳೆದ ವರ್ಷ ಕೇವಲ 161 ರನ್‌ ಗಳಿಸಿದ್ದರೂ, ಅವರು ಸಿಡಿಸಿದ್ದ 13 ಸಿಕ್ಸರ್‌ಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಐಪಿಎಲ್‌ಗಾಗಿ ಕಳೆದೊಂದೆರಡು ತಿಂಗಳಿಂದ ದಿನಕ್ಕೆ 2-3 ಗಂಟೆ ಕಾಲ ನೆಟ್ಸ್‌ನಲ್ಲಿ ಬೆವರಿಳಿಸುತ್ತಿರುವ ಧೋನಿ ಮೈದಾನದಲ್ಲಿ ಹೇಗೆ ಅಬ್ಬರಿಸಲಿದ್ದಾರೆ ಎನ್ನುವುದನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಮುಂಬೈನ ಆತ್ಮ ರೋಹಿತ್‌ ಶರ್ಮಾ

ತಂಡ: ಮುಂಬೈ

ನಿವೃತ್ತಿ ವಿಚಾರದಲ್ಲಿ ಹಾವು-ಏಣಿ ಆಟ ಆಡುತ್ತಿರುವ ರೋಹಿತ್‌ ಶರ್ಮಾ ಕೂಡಾ ಈ ಬಾರಿ ಐಪಿಎಲ್‌ನ ಸ್ಟಾರ್‌ ಕ್ರಿಕೆಟಿಗರಲ್ಲಿ ಒಬ್ಬರು. ಕಳೆದ ವರ್ಷ ಟಿ20 ವಿಶ್ವಕಪ್‌ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿರುವ ರೋಹಿತ್‌, ಇತ್ತೀಚೆಗಷ್ಟೇ ಟೆಸ್ಟ್‌ನ ಕಳಪೆ ಆಟದಿಂದಾಗಿ ನಿವೃತ್ತಿ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಆದರೆ ಚಾಂಪಿಯನ್ಸ್‌ ಟ್ರೋಫಿ ಗೆಲುವು ಅವರಿಗೆ ಮತ್ತಷ್ಟು ಬಲ ತುಂಬಿದೆ. ಐಪಿಎಲ್‌ನಲ್ಲಂತೂ ತನ್ನ ಆಕ್ರಮಣಕಾರಿ ಆಟ ಪ್ರದರ್ಶಿಸುವ ರೋಹಿತ್‌, ಈ ಬಾರಿಯೂ ಆರ್ಭಟಿಸಲು ಕಾಯುತ್ತಿದ್ದಾರೆ. ಕಳೆದ ವರ್ಷ ರೋಹಿತ್‌ 32.08ರ ಸರಾಸರಿಯಲ್ಲಿ 417 ರನ್‌ ಕಲೆಹಾಕಿದ್ದರು. ಆದರೆ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಿಯಾಗಿತ್ತು. ಈ ಬಾರಿ ತಮ್ಮ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸುವುದರ ಜೊತೆಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಪಣ ತೊಟ್ಟಿದ್ದಾರೆ.

ಇದನ್ನೂ ಓದಿ: ಐಪಿಎಲ್‌ 2025: ಎಲ್ಲಾ 13 ಸ್ಟೇಡಿಯಂನಲ್ಲೂ ಉದ್ಘಾಟನಾ ಕಾರ್‍ಯಕ್ರಮ?

₹27 ಕೋಟಿಗೆ ನ್ಯಾಯ ಒದಗಿಸ್ತಾರಾ ಪಂತ್‌?

ತಂಡ: ಲಖನೌ

ಈ ಬಾರಿ ಐಪಿಎಲ್‌ನಲ್ಲಿ ಬಹುತೇಕರ ದೃಷ್ಟಿ ರಿಷಭ್‌ ಪಂತ್‌ ಮೇಲಿರಲಿದೆ. ಇದಕ್ಕೆ ಕಾರಣ, ರಿಷಭ್‌ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿ ಪಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ತಮ್ಮ ವಯಸ್ಸಿನಷ್ಟೇ ಮೊತ್ತವನ್ನು ಕೋಟಿ ಲೆಕ್ಕದಲ್ಲಿ ಪಡೆಯಲಿರುವ ರಿಷಭ್‌, ಆ ಮೊತ್ತಕ್ಕೆ ಬೆಲೆ ಒದಗಿಸಲಿದ್ದಾರೆಯೇ ಎಂಬ ಕುತೂಹಲವಿದೆ. ಒಂದೆಡೆ ದುಬಾರಿ ಮೊತ್ತದ ಟ್ಯಾಗ್‌, ಮತ್ತೊಂದೆಡೆ ಲಖನೌ ಸೂಪರ್‌ ಜೈಂಟ್ಸ್‌ನ ನಾಯಕತ್ವದ ಹೊಣೆಗಾರಿಕೆ. ಇವೆರಡರ ಒತ್ತಡವನ್ನು ನಿಭಾಯಿಸಬೇಕಾದ ಅನಿವಾರ್ಯತೆ ರಿಷಭ್‌ ಮೇಲಿದೆ. 2021, 2022, 2024ರಲ್ಲಿ ಡೆಲ್ಲಿಗೆ ನಾಯಕರಾಗಿದ್ದ ರಿಷಭ್‌, ಪ್ರತಿ ಬಾರಿಯೂ 340ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಬಾರಿಯೂ ದೊಡ್ಡ ಮೊತ್ತ ಕಲೆಹಾಕುವುದರ ಜೊತೆಗೆ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವ ನಿರೀಕ್ಷೆಯಲ್ಲಿದ್ದಾರೆ.

ಚಾಂಪಿಯನ್‌ ನಾಯಕ ಅಯ್ಯರ್‌

ತಂಡ: ಪಂಜಾಬ್‌

ಕಳೆದ ವರ್ಷ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಶ್ರೇಯಸ್‌ ಅಯ್ಯರ್‌. ಆದರೆ ಈ ಬಾರಿ ಅವರು ತಂಡದಲ್ಲಿಲ್ಲ. ಚಾಂಪಿಯನ್‌ ನಾಯಕನನ್ನು ಪಂಜಾಬ್‌ ಕಿಂಗ್ಸ್‌ ತಂಡ ಬರೋಬ್ಬರಿ 26.75 ಕೋಟಿ ರು. ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ‘ಕೆಕೆಆರ್‌ಗೆ ಕಪ್‌ ಗೆಲ್ಲಿಸಿಕೊಟ್ಟರೂ ತನಗೆ ಬೇಕಾದ ಮನ್ನಣೆ ಸಿಕ್ಕಿಲ್ಲ’ ಎಂದು ಬೇಸರ ತೋಡಿಕೊಂಡಿದ್ದ ಶ್ರೇಯಸ್, ಅದನ್ನು ಪಂಜಾಬ್‌ನಲ್ಲಿ ಪಡೆಯುವ ಕಾತರದಲ್ಲಿದ್ದಾರೆ. ಆದರೆ ಅದಕ್ಕೆ ಕಪ್‌ ಗೆಲ್ಲಿಸಿಕೊಡಬೇಕು. ಕಳೆದೊಂದು ವರ್ಷದಲ್ಲಿ ಐಪಿಎಲ್‌, ರಣಜಿ, ಸಯ್ಯದ್‌ ಮುಷ್ತಾಕ್‌ ಅಲಿ, ಇರಾನಿ ಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ ಗೆದ್ದಿರುವ ‘ಅದೃಷ್ಟವಂತ’ ಶ್ರೇಯಸ್‌, ಈವರೆಗೆ ಒಮ್ಮೆ ಮಾತ್ರ ಐಪಿಎಲ್‌ ಫೈನಲ್‌ಗೇರಿರುವ ‘ದುರದೃಷ್ಟಕರ’ ಪಂಜಾಬ್‌ಗೆ ಕಪ್‌ ತಂದುಕೊಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಈ ಐವರು ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್ ಟೂರ್ನಿ!

ದುಬಾರಿ ಆಲ್ರೌಂಡರ್‌ ವೆಂಕಿ ಅಯ್ಯರ್‌

ತಂಡ: ಕೆಕೆಆರ್‌

ಭಾರತ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ ಸ್ಥಾನಕ್ಕೆ ಸರಿಸಾಟಿಯಾಗಬಲ್ಲ ಆಲ್ರೌಂಡರ್‌ ಎಂದೇ ಗುರುತಿಸಿಕೊಂಡಿದ್ದ ವೆಂಕಟೇಶ್‌ ಅಯ್ಯರ್‌ ಈಗ ಬ್ಯಾಟಿಂಗ್‌ನಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಈ ಬಾರಿ ಐಪಿಎಲ್‌ ಹರಾಜಿನಲ್ಲಿ ವೆಂಕಟೇಶ್‌ ಅಯ್ಯರ್‌ರನ್ನು ಕೆಕೆಆರ್‌ ₹23.75 ಕೋಟಿ ನೀಡಿ ಮರಳಿ ತಂಡಕ್ಕೆ ಸೇರಿಸಿಕೊಂಡಿತ್ತು. ಹೀಗಾಗಿ ಅವರ ಮೇಲೆ ಕಳೆದ ಬಾರಿಗಿಂತ ಹೆಚ್ಚಿನ ಒತ್ತಡವಿರಲಿದೆ. 2024ರಲ್ಲಿ ಕೋಲ್ಕತಾ ಚಾಂಪಿಯನ್‌ ಪಟ್ಟಕ್ಕೇರಿದ್ದರ ಹಿಂದೆ ವೆಂಟಕೇಶ್‌ ಅಯ್ಯರ್‌ ಕೊಡುಗೆ ಅಪಾರ. 159ರ ಸ್ಟ್ರೈಕ್‌ರೇಟ್‌, 46.25ರ ಸರಾಸರಿಯಲ್ಲಿ 370 ರನ್‌ ಕಲೆಹಾಕಿದ್ದ ವೆಂಕಿ ಈ ಬಾರಿ ಮತ್ತೊಮ್ಮೆ ತಂಡದ ಆಪತ್ಬಾಂಧವ ಎನಿಸಿಕೊಳ್ಳುವ ಭರವಸೆ ಹೊಂದಿದ್ದಾರೆ. ಇದರ ಜೊತೆಗೆ ಭಾರತ ತಂಡದ ಕಾಯಂ ಆಲ್ರೌಂಡರ್‌ ಸ್ಥಾನದ ರೇಸ್‌ನಲ್ಲಿ ಮುಂಚೂಣಿಗೆ ಬರುವ ಪಣ ತೊಟ್ಟಿದ್ದಾರೆ.

ಧೂಳೆಬ್ಬಿಸಲು ಅಭಿಷೇಕ್‌ ರೆಡಿ

ತಂಡ: ಸನ್‌ರೈಸರ್ಸ್‌

ಕಳೆದ ವರ್ಷ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತನ್ನೆಲ್ಲಾ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿತ್ತು. ಅದಕ್ಕೆ ಕಾರಣರಾದವರಲ್ಲಿ ಅಭಿಷೇಕ್‌ ಶರ್ಮಾ ಪ್ರಮುಖರು. 24 ವರ್ಷದ ಯುವ ಸೂಪರ್‌ಸ್ಟಾರ್‌ ಅಭಿಷೇಕ್‌, ಬುಲೆಟ್‌ ರೈಲಿನಂತೆ ವೇಗವಾಗಿ ರನ್‌ ಗಳಿಸುವುದಕ್ಕೆ ಹೆಸರುವಾಸಿ. ಕಳೆದ ಬಾರಿ ಅಭಿಷೇಕ್‌ 484 ರನ್‌ ಚಚ್ಚಿದ್ದರು. ಸ್ಟ್ರೈಕ್‌ರೇಟ್‌ ಬರೋಬ್ಬರಿ 204.22. ಭಾರತ ತಂಡದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಪಂಜಾಬ್‌ ಕ್ರಿಕೆಟಿಗ, ಈ ಬಾರಿ ಮತ್ತೊಮ್ಮೆ ಆರ್ಭಟಿಸಲು ಕಾಯುತ್ತಿದ್ದಾರೆ. 2026ರ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಕಟ್ಟುತ್ತಿರುವ ಬಿಸಿಸಿಐ, ಅಭಿಷೇಕ್‌ ಶರ್ಮಾರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಟ್ರ್ಯಾವಿಸ್‌ ಹೆಡ್‌ ಜೊತೆ ಪೈಪೋಟಿಗೆ ಬಿದ್ದಂತೆ ರನ್‌ ಗಳಿಸುವ ಅಭಿಷೇಕ್‌, ಈ ಸಲವೂ ಯಶಸ್ವಿಯಾಗಬಲ್ಲರೇ ಎಂಬ ಕುತೂಹಲವಿದೆ.

ಇದನ್ನೂ ಓದಿ: ಐಪಿಎಲ್ ಜಿದ್ದಾಜಿದ್ದಿಗೆ ಸೈನ್ಯಗಳು ಸಜ್ಜು: ‘ಬಿ’ ಗುಂಪಿನ ತಂಡಗಳ ಪರಿಚಯ

ಬೂಮ್‌ ಬೂಮ್‌ ಬೂಮ್ರಾ

ತಂಡ: ಮುಂಬೈ

ಪ್ರಚಂಡ ವೇಗಿ ಜಸ್‌ಪ್ರೀತ್‌ ಬೂಮ್ರಾ ವರ್ಷದಿಂದ ವರ್ಷಕ್ಕೆ ತಮ್ಮ ಶ್ರೇಷ್ಠತೆ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಗಾಯದ ಪ್ರಮಾಣವೂ ಅಷ್ಟೇ ವೇಗದಲ್ಲಿ ಹೆಚ್ಚುತ್ತಿದೆ. ಮುಂಬೈ ಪಾಲಿಗೆ ಆಕ್ಸಿಜನ್‌ನಂತಿರುವ ಬೂಮ್ರಾ, ಈ ಬಾರಿ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೆ ಲಭ್ಯರಿಲ್ಲ. ಹಾಗಂತ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ತಮ್ಮ ಮೊನಚಾದ ದಾಳಿ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಬಲ್ಲ ಬೂಮ್ರಾ, ಐಪಿಎಲ್‌ನಲ್ಲಿ ಎಷ್ಟು ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂಬುದೇ ಪ್ರಮುಖ ಪ್ರಶ್ನೆ. ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ಅವರು ಐಪಿಎಲ್‌ ಬಳಿಕ ನಡೆಯಲಿರುವ ಇಂಗ್ಲೆಂಡ್‌ ಟೆಸ್ಟ್‌ಗೆ ಫಿಟ್‌ ಆಗಿರುತ್ತಾರೆಯೇ ಎಂಬ ಆತಂಕ ಎಲ್ಲರಲ್ಲಿದೆ. ತಮ್ಮ ಫಿಟ್ನೆಸ್‌ ಜೊತೆಗೆ ಮುಂಬೈಗೆ ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡುವುದು ಬೂಮ್ರಾ ಮುಂದಿರುವ ಗುರಿ.

ಸ್ವಿಂಗ್‌ ಕಿಂಗ್‌ ಅರ್ಶ್‌ದೀಪ್‌

ತಂಡ: ಪಂಜಾಬ್‌

ಐಪಿಎಲ್‌ ಹರಾಜಿನ ಅತ್ಯಂತ ದುಬಾರಿ ಭಾರತೀಯ ವೇಗಿ ಅರ್ಶ್‌ದೀಪ್‌ ಸಿಂಗ್‌. ಅವರಿಗೆ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ₹18 ಕೋಟಿ ನೀಡಿತ್ತು. ಅಂ.ರಾ. ಟಿ20ಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ (99) ಸರದಾರ ಎನಿಸಿಕೊಂಡಿರುವ ಅರ್ಶ್‌ದೀಪ್‌ ಮೇಲೆ ಪಂಜಾಬ್‌ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. 2021ರಲ್ಲಿ 18, 2023ರಲ್ಲಿ 17 ವಿಕೆಟ್‌ ಪಡೆದಿದ್ದ ಅರ್ಶ್‌ದೀಪ್‌ ಕಳೆದ ಬಾರಿ 14 ಪಂದ್ಯಗಳಲ್ಲಿ 19 ವಿಕೆಟ್‌ ಕಬಳಿಸಿದ್ದರು. ಆದರೆ 2024ರಲ್ಲಿ ಅವರ ಎಕಾನಮಿ ರೇಟ್‌ 10.30. ವಿಕೆಟ್‌ ಕೀಳುವುದರ ಜೊತೆಗೆ ಎಕಾನಮಿ ರೇಟ್ ಕಾಯ್ದುಕೊಂಡರೆ ಅರ್ಶ್‌ದೀಪ್‌ ಪಂಜಾಬ್‌ನ ಟ್ರಂಪ್‌ಕಾರ್ಡ್‌ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಟ್ರೋಲ್‌ಗಳಿಗೆ ಉತ್ತರಿಸಬೇಕಿದೆ ಚಹಲ್‌

ತಂಡ: ಪಂಜಾಬ್‌

ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ವಿಕೆಟ್‌ ಕಿತ್ತ ಸಾಧಕ ಯಜುವೇಂದ್ರ ಚಹಲ್‌. 160 ಪಂದ್ಯಗಳಲ್ಲಿ 205 ವಿಕೆಟ್‌ ಪಡೆದಿದ್ದಾರೆ. ಆದರೆ ಭಾರತ ತಂಡದಲ್ಲಿ ಅವರಿಗೆ ಸದ್ಯಕ್ಕೆ ಸ್ಥಾನವಿಲ್ಲ. ಇದರ ಹೊರತಾಗಿಯೂ ಕಳೆದ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ₹18 ಕೋಟಿಗೆ ಹರಾಜಾಗಿ, ದುಬಾರಿ ಸ್ಪಿನ್ನರ್‌ ಎನಿಸಿಕೊಂಡಿದ್ದರು. ತಮ್ಮನ್ನು ಕಡೆಗಣಿಸುವ ತಂಡಗಳಿಗೆಲ್ಲಾ ಬಿಸಿ ಮುಟ್ಟಿಸುವಂತೆ ಮಾರಕ ದಾಳಿ ಸಂಘಟಿಸುವ ಚಹಲ್‌, ಈ ಬಾರಿಯೂ ಯಶಸ್ವಿಯಾಗಲಿದ್ದಾರೆಯೇ ಕಾದು ನೋಡಬೇಕಿದೆ. ಮಧ್ಯಮ ಓವರ್‌ಗಳಲ್ಲಿ ಅವರ ದಾಳಿ ಪಂಜಾಬ್‌ಗೆ ನಿರ್ಣಾಯಕವಾಗಿದ್ದು, ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಐಪಿಎಲ್‌ನಲ್ಲಿ ಅವರ ಎಕಾನಮಿ(7.84) ಕೂಡಾ ಉತ್ತಮವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಚ್ಛೇದನ ವಿಚಾರದಿಂದಾಗಿ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಾಕಷ್ಟು ಮಂದಿ ಅವರನ್ನು ಟ್ರೋಲ್‌ ಸಹ ಮಾಡಿದ್ದಾರೆ. ತಮ್ಮ ಬೌಲಿಂಗ್‌ ಪ್ರದರ್ಶನದ ಮೂಲಕವೇ ಅವರಿಗೆಲ್ಲಾ ಉತ್ತರಿಸಲು ಚಹಲ್‌ ಕಾಯುತ್ತಿದ್ದಾರೆ.