ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದ್ದು, ಸರಣಿ 1-1ರಲ್ಲಿ ಸಮಬಲಗೊಂಡಿದೆ. ಇದೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ನಿರ್ಣಾಯಕ ಮೂರನೇ ಪಂದ್ಯಕ್ಕೆ ಅವರ ಲಭ್ಯತೆ ಅನುಮಾನವಾಗಿದೆ.

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದೆ. ಇದರೊಂದಿಗೆ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದೆ. ಎರಡನೇ ಏಕದಿನ ಪಂದ್ಯದ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದ್ದು, ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಇದೀಗ ಸುಂದರ್ ಮೂರನೇ ಏಕದಿನ ಪಂದ್ಯ ಆಡೋದೇ ಡೌಟ್ ಎನ್ನಲಾಗುತ್ತಿದೆ.

ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗಿಳಿದ ಸಂದರ್ಭದಲ್ಲಿ ಅವರಿಗೆ ತೀವ್ರವಾದ ಸ್ನಾಯು ಸೆಳೆತದ ನೋವು ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಸುಂದರ್, ಇಂಗ್ಲೆಂಡ್ ಟಾರ್ಗೆಟ್ ಚೇಸ್ ಮಾಡುವ ವೇಳೆಯಲ್ಲಿ ಮೈದಾನಕ್ಕಿಳಿಯಲಿಲ್ಲ. ಹೀಗಾಗಿ ಸುಂದರ್‌ ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಕೂಡಾ ಮಾಡಲಿಲ್ಲ. ವಾಷಿಂಗ್ಟನ್ ಸುಂದರ್ ಅನುಪಸ್ಥಿತಿಯಲ್ಲಿ ಫೀಲ್ಡಿಂಗ್ ಮಾಡಲು ಟೀಂ ಇಂಡಿಯಾ ಪ್ರಿನ್ಸ್ ಯಾದವ್ ಅವರನ್ನು ಸಬ್‌ಸ್ಟಿಟ್ಯೂಟ್ ಫೀಲ್ಡರ್‌ ಆಗಿ ಕಣಕ್ಕಿಳಿಸಿತು. ವಾಷಿಂಗ್ಟನ್ ಸುಂದರ್, ಸ್ನಾಯು ಸೆಳೆತ ತೀವ್ರವಾಗಿದ್ದು, ಇದೀಗ ಇಂಗ್ಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಸುಂದರ್ ಆಡುವ ಹನ್ನೊಂದರ ಬಳಗದಿಂದ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಗಾಯಗೊಂಡ ವಾಷಿಂಗ್ಟನ್ ಸುಂದರ್:

ತಮಿಳುನಾಡು ಮೂಲದ ಆಲ್ರೌಂಡರ್ 32ನೇ ಓವರ್‌ನಲ್ಲಿ ಭಾರತ ಪರ ಬ್ಯಾಟಿಂಗ್ ಮಾಡಲಿಳಿದರು. ಇದಾಗಿ ಒಂದು ಓವರ್ ಬಳಿಕ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡಲು ತೊಡಕು ಅನುಭವಿಸಿದರು. ಸಕೀಬ್ ಮೊಹಮ್ಮದ್ ಬೌಲಿಂಗ್ ಎದುರಿಸಿದ ಬಳಿಕ ತಕ್ಷಣವೇ ಟೀಂ ಫಿಸಿಯೋ ಅವರನ್ನು ಮೈದಾನಕ್ಕೆ ಕರೆಸಿಕೊಂಡರು.

ಫಿಸಿಯೋ ಅವರಿಂದ ಮೈದಾನದಲ್ಲೇ ಚಿಕಿತ್ಸೆ ಪಡೆದ ಬಳಿಕ ಅವರ ಕಾಲಿಗೆ ದಪ್ಪನೆಯ ಪಟ್ಟಿ ಕಟ್ಟಿಕೊಂಡಿರುವುದು ಕಂಡು ಬಂತು. ಇದಾದ ಬಳಿಕವೂ ಅವರು ಸಂಪೂರ್ಣ ಫಿಟ್ ಇದ್ದಂತೆ ಕಂಡು ಬರಲಿಲ್ಲ. ಇದಾದ ಮರು ಎಸೆತದಲ್ಲೇ ವಾಷಿಂಗ್ಟನ್ ಸುಂದರ್, ಹುಕ್ ಮಾಡುವ ಯತ್ನದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚಿತ್ತು ಸುಂದರ್ ಪೆವಿಲಿಯನ್ ಹಾದಿ ಹಿಡಿದರು. ವಾಷಿಂಗ್ಟನ್ ಸುಂದರ್ ಐದು ಎಸೆತಗಳನ್ನು ಎದುರಿಸಿ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಮೊದಲ ಏಕದಿನ ಪಂದ್ಯದಲ್ಲಿ ಮಿಂಚಿದ್ದ ಸುಂದರ್:

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒತ್ತಡದ ಸಂದರ್ಭದಲ್ಲಿ ಮೈದಾನಕ್ಕಿಳಿದ ಸುಂದರ್, ಐದನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಜತೆಗೂಡಿ ಮುರಿಯದ 102 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಸುಂದರ್ 52 ರನ್ ಗಳಿಸಿ ಅಜೇಯರಾಗುಳಿದಿದ್ದರು.

ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ:

ಭಾರತ ತಂಡವು ಇದೀಗ ನಿರ್ಣಾಯಕ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಗಾಯದ ಸಮಸ್ಯೆ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇಂಗ್ಲೆಂಡ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಇಬ್ಬರೂ ಸ್ನಾಯು ಸೆಳೆತದಿಂದ ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ.

Scroll to load tweet…

ಇನ್ನು ಸರಣಿ ಆರಂಭಕ್ಕೂ ಮೊದಲೇ ಸ್ಟಾರ್ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ವಾಷಿಂಗ್ಟನ್ ಸುಂದರ್ ಕೂಡಾ ಗಾಯಗೊಂಡಿದ್ದು, ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.