ಭಾರತದ ತಾರಾ ಆಟಗಾರ ವಿರಾಟ್ ಕೊಹ್ಲಿ, ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ, ಇಂಗ್ಲೆಂಡ್‌ನಲ್ಲಿ ಗರಿಷ್ಠ ರನ್ ಗಳಿಸಿದ ಏಷ್ಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಕಾರ್ಡಿಫ್: ಗರಿಷ್ಠ ಅಂತಾರಾಷ್ಟ್ರೀಯ ಪಂದ್ಯವಾಡಿದ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ತಾರಾ ಆಟಗಾರ ವಿರಾಟ್ ಕೊಹ್ಲಿ ಈಗ 5ನೇ ಸ್ಥಾನಕ್ಕೇರಿದ್ದಾರೆ.
ಗುರುವಾರ ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಆಡಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 561ನೇ ಪಂದ್ಯ. 313 ಏಕದಿನ, 123 ಟೆಸ್ಟ್, 125 ಟಿ20 ಆಡಿದ್ದಾರೆ. ಇದರೊಂದಿಗೆ ಅವರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(560 ಪಂದ್ಯ)ರನ್ನು ಹಿಂದಿಕ್ಕಿದರು. ಸಚಿನ್ ತೆಂಡುಲ್ಕರ್ 664 ಪಂದ್ಯಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮೂವರು ಕ್ರಿಕೆಟಿಗರಾದ ಮಹೇಲ ಜಯವರ್ಧನೆ 652, ಕುಮಾರ ಸಂಗಕ್ಕರ 594, ಸನಯ್ ಜಯಸೂರ್ಯ 586 ಪಂದ್ಯಗಳನ್ನಾಡಿದ್ದಾರೆ. ಎಂ.ಎಸ್.ಧೋನಿ 538 ಪಂದ್ಯಗಳನ್ನಾಡಿದ್ದು, 7ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಗರಿಷ್ಠ 50+ ರನ್: ಕೊಹ್ಲಿ ನಂ.2
ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ 50+ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಅವರು 14 ಬಾರಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ 3 ಶತಕ ಕೂಡಾ ಒಳಗೊಂಡಿದೆ. ವೆಸ್ಟ್‌ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಕೂಡಾ 14 ಬಾರಿ 50+ ರನ್ ಗಳಿಸಿದ್ದಾರೆ. ಕುಮಾರ ಸಂಗಕ್ಕರ 15 ಬಾರಿ ಈ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್‌ನಲ್ಲಿ ಗರಿಷ್ಠ ಅಂ.ರಾ. ರನ್: ದ್ರಾವಿಡ್ ಹಿಂದಿಕ್ಕಿದ ಕೊಹ್ಲಿ ನಂ.1
ಇಂಗ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಏಷ್ಯಾದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ ಈವರೆಗೂ 2646 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 2645 ರನ್ ಗಳಿಸಿದ್ದು, 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಚಿನ್ ತೆಂಡುಲ್ಕರ್ 2626 ರನ್ ಕಲೆಹಾಕಿದ್ದಾರೆ. ವಿವಿಯನ್ ರಿಚರ್ಡ್ಸ್ 3402 ರನ್ ಗಳಿಸಿದ್ದು, ಇಂಗ್ಲೆಂಡ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ.


