ಕೋಲ್ಕತಾ(ನ.19): ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ 26ರ ವರೆಗೆ ನಡೆಯಲಿದೆ. ಈ ಸರಣಿ ಬಳಿಕ ಭಾರತ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಸಜ್ಜಾಗಲಿದೆ. ಡಿಸೆಂಬರ್ 6 ರಿಂದ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಹಾಗೂ ಏಕದಿನ ಸರಣಿ ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ಆಯ್ಕೆ ಸಮಿತಿ ನವೆಂಬರ್ 21ಕ್ಕೆ ಕೋಲ್ಕತಾದಲ್ಲಿ ಸಭೆ ಸೇರಲಿದೆ. ಐತಿಹಾಸಿಕ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಯ್ಕೆ ನಡೆಯಲಿದೆ.

ಇದನ್ನೂ ಓದಿ: ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ  ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ರೋಹಿತ್ ಶರ್ಮಾ ಸರದಿ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ರೋಹಿತ್ ಶರ್ಮಾಗೆ ರೆಸ್ಟ್ ನೀಡಲು ಬಿಸಿಸಿಐ ಮುಂದಾಗಿದೆ. 2019ರ ಸಾಲಿನಲ್ಲಿ ರೋಹಿತ್ ಶರ್ಮಾ ಸತತ ಪಂದ್ಯ ಆಡುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯ, ವಿಶ್ವಕಪ್ ಟೂರ್ನಿ ಸೇರಿದಂತೆ ಇದುವರೆಗೆ 60ಕ್ಕೂ ಹೆಚ್ಚು ಪಂದ್ಯ ಆಡಿದ್ದಾರೆ. ಸತತ ಕ್ರಿಕೆಟ್ ಆಡಿರುವ ರೋಹಿತ್ ಶರ್ಮಾ ಮೇಲಿನ ಒತ್ತಡ ಕಡಿಮೆ ಮಾಡಲು ವಿಶ್ರಾಂತಿ ಮೊರೆ ಹೋಗಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ: ವಿಂಡೀಸ್‌ ಏಕ​ದಿನ ಸರ​ಣಿಗೆ ಮಯಾಂಕ್‌ಗೆ ಚಾನ್ಸ್?

ರೋಹಿತ್ ಶರ್ಮಾ ವಿಶ್ರಾಂತಿ ಪಡೆಯದಿರಲು ನಿರ್ಧರಿಸಿದ್ದಾರೆ. ಮೂರು ಮಾದರಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕಾರಣ ರೋಹಿತ್ ವಿಶ್ರಾಂತಿ ಇಲ್ಲದೆ ಕ್ರಿಕೆಟ್ ಆಡುವ ಉತ್ಸಾಹದಲ್ಲಿದ್ದಾರೆ. ಆದರೆ 2020ರ ಟಿ20 ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ರೋಹಿತ್‌ಗೆ  ವಿಶ್ರಾಂತಿ ಅಗತ್ಯ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ನವೆಂಬರ್ 21 ರಂದು ನಡೆಯಲಿರುವ ಟೀಂ ಸೆಲೆಕ್ಷನ್ ಉತ್ತರ ನೀಡಲಿದೆ.

ಇದನ್ನೂ ಓದಿ: ಪಿಂಕ್‌ ಬಾಲ್‌ ಟೆಸ್ಟ್‌ಗೆ ಇಂದೋರ್‌ನಲ್ಲೇ ಅಭ್ಯಾ​ಸ

ವೆಸ್ಟ್ ಇಂಡೀಸ್ ವಿರುದ್ಧ ಭಾರತ 3 ಟಿ20 ಹಾಗೂ 3 ಏಕದಿನ ಪಂದ್ಯ ಆಡಲಿದೆ. ಡಿಸೆಂಬರ್ 6 ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ಮುಂಬೈನ ವಾಂಖೆಡೆ ಕ್ರೀಡಾಂಗಣದಿಂದ ಆರಂಭಗೊಳ್ಳಲಿದೆ. ಡಿಸೆಂಬರ್ 8 ಹಾಗೂ ಡಿಸೆಂಬರ್ 11 ಕ್ಕೆ 2 ಮತ್ತು 3ನೇ ಟಿ20  ಪಂದ್ಯ ನಡೆಯಲಿದೆ. ಇನ್ನು ಡಿಸೆಂಬರ್ 15 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಡಿಸೆಂಬರ್ 18 ಹಾಗೂ ಡಿಸೆಂಬರ್ 22ಕ್ಕೆ 2 ಮತ್ತು 3ನೇ ಏಕದಿನ ಪಂದ್ಯ ನಡೆಯಲಿದೆ.